2019ರ ಹೊತ್ತಿಗೆ ಬೆಂಗಳೂರಿಗೆ ಲಗ್ಗೆ ಇಡಲಿದೆ `ಪೋಡ್ ಟ್ಯಾಕ್ಸಿ`
ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಜಾಮ್ ನಲ್ಲಿ ಬೇಸೆತ್ತಿರುವ ಜನರಿಗೆ ಅನುಕೂಲವಾಗಲೆಂದು ಮೆಟ್ರೋ ಸಂಚಾರವನ್ನು ಪ್ರಾರಂಭಿಸಲಾಯಿತು. ಆದರೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್, ಧೂಳು, ಹೊಗೆಯ ಜಂಜಾಟ ಇನ್ನೂ ಮುಗಿದಿಲ್ಲ. ಬೆಂಗಳೂರಿನಲ್ಲಿ ಓಡಾಡುವುದೇ ಬಿಗ್ ಚಾಲೆಂಜ್. ಐದು ನಿಮಿಷದಲ್ಲಿ ತಲುಪ ಬಹುದಾದ ಸ್ಥಳಕ್ಕೆ ಒಂದು ಗಂಟೆ ಮೊದಲೇ ಮನೆ ಬಿಡುವ ಪರಿಸ್ಥಿತಿ. ಈ ಎಲ್ಲಾ ಸಮಸ್ಯೆಗಳಿಂದ ಬೆಂಗಳೂರಿಗರನ್ನು ಪಾರು ಮಾಡಲು ಬಿಬಿಎಂಪಿ 2019ರ ಹೊತ್ತಿಗೆ 'ಪೋಡ್ ಟ್ಯಾಕ್ಸಿ'ಯನ್ನು ಪರಿಚಯಿಸಲು ಸಿದ್ಧವಾಗಿದೆ.
ನಗರದ ಪ್ರಮುಖ ಮೆಟ್ರೋ ನಿಲ್ದಾಣಗಳಿಂದ ಸುತ್ತ ಮುತ್ತಲ ಪ್ರದೇಶಗಳಿಗೆ ಸಾಗಲು ಪೋಡ್ ಟ್ಯಾಕ್ಸಿ ಸಿಗಲಿದೆ. ಇಲ್ಲಿ ನಿಮಗೆ ಯಾವುದೇ ಟ್ರಾಫಿಕ್ ನ ತಲೆಬಿಸಿ ಇರುವುದಿಲ್ಲ. ಕಾರಣ ಪೋಡ್ ಟ್ಯಾಕ್ಸಿಗಳು ಭೂಮಿಯ ಮೇಲೆ ಸಂಚರಿಸುವುದೇ ಇಲ್ಲ. ಹಾಗಾದರೆ ಇವು ಹೇಗೆ ಸಂಚರಿಸುತ್ತವೆ ಎಂದು ಯೋಚಿಸುತ್ತಿರುವಿರಾ? ಇಲ್ಲಿದೆ ಉತ್ತರ, ರಸ್ತೆಗಳ ಮಧ್ಯದಲ್ಲಿ ಪೋಲ್ಗಳನ್ನು ಅಳವಡಿಸಿ ಅದರ ಮೂಲಕ ಚಲಾಯಿಸುವ ವಾಹನ ಇದಾಗಿದೆ.
ಬೆಂಗಳೂರಿನಲ್ಲಿ ಪೋಡ್ ಟ್ಯಾಕ್ಸಿಯ ಮೊದಲ ಹಂತದ ಕಾರ್ಯಾಚರಣೆಯ ನೀಲಿನಕ್ಷೆ ಈಗಾಗಲೇ ತಯಾರಾಗಿದೆ. ಈ ಹಂತದಲ್ಲಿ ಎಂ.ಜಿ. ರಸ್ತೆಯ ಟ್ರಿನಿಟಿ ಮೆಟ್ರೋ ನಿಲ್ದಾಣದಿಂದ ವೈಟ್ ಫಿಲ್ಡ್ ವರೆಗೆ ಸುಮಾರು 70 ಕಿ.ಮೀ.ನಷ್ಟು ದೂರದ ಸಂಚಾರಕ್ಕೆ ನಕ್ಷೆಯು ತಯಾರಾಗಿದೆ. ದೊಮ್ಮಲೂರು, ಬಿಇಎಂಎಲ್, ಎಚ್ಎಎಲ್ ಏರ್ಪೋರ್ಟ್, ಮಾರತಹಳ್ಳಿ ಸೇರಿದಂತೆ 12 ಪ್ರಮುಖ ಪೋಡ್ ಟ್ಯಾಕ್ಸಿ ನಿಲ್ದಾಣಗಳು ಈ ಮಾರ್ಗದ ವ್ಯಾಪ್ತಿಯಲ್ಲಿವೆ.