ವಿಷಪೂರಿತ ಪ್ರಸಾದ ಸೇವನೆ ದುರಂತ: ಇಬ್ಬರು ಆರೋಪಿಗಳ ಬಂಧನ
ಭಕ್ತಾದಿಗಳಿಗೆ ಹಂಚಿದ ಪ್ರಸಾದದಲ್ಲಿ ದುಷ್ಕರ್ಮಿಗಳು ವಿಷ ಬೆರೆಸಿದ ಕಾರಣ, ಪ್ರಸಾದ ಸೇವಿಸಿದ 90ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾದರಲ್ಲದೆ, 11 ಮಂದಿ ಮೃತಪಟ್ಟಿದ್ದಾರೆ.
ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್‌ಕುತ್ ಮಾರಮ್ಮನ ದೇವಾಲಯದಲ್ಲಿ ಹಂಚಿದ ಪ್ರಸಾದಕ್ಕೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಎಎನ್ಐ ಗೆ ಹೇಳಿಕೆ ನೀಡಿರುವ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗ ಶೆಟ್ಟಿ ಅವರು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್‌ಕುತ್ ಮಾರಮ್ಮನ ದೇವಾಲಯದ ಗೋಪುರ ನಿರ್ಮಾಣ ಹಾಗೂ ಸುತ್ತುಗೋಡೆ ನಿರ್ಮಾಣಕ್ಕೆ ಶುಕ್ರವಾರ ನಡೆದ ಭೂಮಿಪೂಜೆ ಕಾರ್ಯಕ್ರಮದ ಬಳಿಕ ಭಕ್ತಾದಿಗಳಿಗೆ ಹಂಚಿದ ಪ್ರಸಾದದಲ್ಲಿ ದುಷ್ಕರ್ಮಿಗಳು ವಿಷ ಬೆರೆಸಿದ ಕಾರಣ, ಪ್ರಸಾದ ಸೇವಿಸಿದ 90ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾದರಲ್ಲದೆ, 11 ಮಂದಿ ಮೃತಪಟ್ಟಿದ್ದಾರೆ. ಮೃತ ಕುಟುಂಬಗಳಿಗೆ ಸರ್ಕಾರ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದು, ಅಸ್ವಸ್ಥರಾಗಿರುವವರ ಆಸ್ಪತ್ರೆ ವೆಚ್ಚವನ್ನೂ ಸರ್ಕಾರವೇ ಭರಿಸುವುದಾಗಿ ಹೇಳಿದೆ.
ಸುಳುವಾಡಿಯ ಕಿಚ್‌ಕುತ್ ಮಾರಮ್ಮ ದೇವಸ್ಥಾನ ಚಿಕ್ಕದಾಗಿದ್ದು, ನೂತನ ಗೋಪುರ ಹಾಗೂ ಸುತ್ತುಗೋಡೆ ನಿರ್ಮಾಣ ವಿಚಾರದಲ್ಲಿ ಗ್ರಾಮದ ಎರಡು ಗುಂಪುಗಳ ನಡುವೆಯೇ ವೈಮನಸ್ಸಿತ್ತು ಎನ್ನಲಾಗಿದೆ. ಈ ವೈಷಮ್ಯವೇ ಆಹಾರದಲ್ಲಿ ವಿಷ ಬೆರೆಸಲು ಕಾರಣವಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಶಂಕೆ ವ್ಯಕ್ತಪಡಿಸಿತ್ತು.