ಬೆಂಗಳೂರು: ಸದಾ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಕಳೆದ ವರ್ಷ ಘಟಿಸಿದ ಪತ್ರಕರ್ತೆ, ಸಾಹಿತಿ ಗೌರಿ ಲಂಕೇಶ್ ಅವರ ಸಾವನ್ನು ಒಂದು ನಾಯಿಯ ಸಾವಿಗೆ ಹೋಲಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ. 


COMMERCIAL BREAK
SCROLL TO CONTINUE READING

ಭಾನುವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಲ್ಲಿ ಮಹಾರಾಷ್ಟ್ರದಲ್ಲಿ ಇಬ್ಬರು ಮತ್ತು ಕರ್ನಾಟಕದಲ್ಲಿ ಇಬ್ಬರು ಪತ್ರಕರ್ತರ ಹತ್ಯೆಯಾಗಿದೆ. ಆದರೆ ಈ ಬಗ್ಗೆ ಯಾರೂ ಚಕಾರ ಎತ್ತಲಿಲ್ಲ. ಆದರೀಗ ಗೌರಿ ಹತ್ಯೆಗೆ ಕೇಂದ್ರದ ಬಿಜೆಪಿ ಸರ್ಕಾರವನ್ನು ದೂಷಿಸುತ್ತಿದ್ದಾರೆ. ಪ್ರಧಾನಿ ಮೋದಿಗೂ, ಗೌರಿ ಲಂಕೇಶ್ ಹತ್ಯೆಗೂ ಏನು ಸಂಬಂಧ? ಹತ್ಯೆ ನಡೆದಿರುವುದು ಕರ್ನಾಟಕದಲ್ಲಿ. ಇಲ್ಲಿ ರಾಜ್ಯ ಸರ್ಕಾರ ಏನು ಸತ್ತಿತ್ತೆ? ಎಲ್ಲರೂ ಮೋದಿ ಈ ಹತ್ಯೆ ಸಂಬಂಧ ಪ್ರತಿಕ್ರಿಯಿಸಲಿ ಎಂದು ಕಾಯುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಒಂದು ನಾಯಿ ಸತ್ತರೂ ಅದಕ್ಕೆ ಪ್ರಧಾನಿ ಮೋದಿ ಹೊಣೆಯೇ? ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ. 


ಗೌರಿ ಲಂಕೇಶ ಹತ್ಯೆ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೊರೆ ಹಾಗೂ ಪ್ರಮೋದ್ ಮುತಾಲಿಕ್ ಜೊತೆಗಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾದ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್, ನನಗೂ ಪರಶುರಾಮ್ ವಾಗ್ಮೊರೆಗೂ ಯಾವ ಸಂಬಂಧವಿಲ್ಲ. ನನ್ನೊಂದಿಗೆ ಹಲವರು ಫೋಟೊ ತೆಗೆಸಿಕೊಳ್ಳುತ್ತಾರೆ. ಹಾಗೆಂದ ಮಾತ್ರಕ್ಕೆ ಅವರೆಲ್ಲರೂ ನನಗೆ ಗೊತ್ತು ಎಂದಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಿಂದೂಪರ ಸಂಘಟನೆಯ ಕೈವಾಡವಿದೆ ಎಂದು ಆರೋಪಿಸಲಾಗುತ್ತಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಶ್ರೀರಾಮಸೇನೆಯ ಪಾತ್ರವಿಲ್ಲ. ಗೌರಿ ಹತ್ಯೆ ಪ್ರಕರಣವನ್ನು ಪರೋಕ್ಷವಾಗಿ ಹಿಂದೂ ಸಂಘಟನೆಗಳ ಮೇಲೆ ಹೇರುವ ಹುನ್ನಾರ ನಡೆದಿದ್ದು, ಇದು ಸರಿಯಲ್ಲ ಎಂದು ಹೇಳಿದ್ದಾರೆ.