ಬೆಂಗಳೂರು: ಪ್ರಧಾನಮಂತ್ರಿಗಳು ರಾಜ್ಯಕ್ಕೆ ಕೊಡುಗೆ ನೀಡುತ್ತಾರೆ ಎಂದು ಭಾವಿಸಿದ್ದೆ. ಅವರ ಕೊಡುಗೆ ಕೇವಲ ಹೂವಿನ ಹಾರ, ಕೋಟಿ ನಮಸ್ಕಾರ ಮಾತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗವಾಡಿದ್ದಾರೆ.


COMMERCIAL BREAK
SCROLL TO CONTINUE READING

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಕೆಂಪೇಗೌಡರು, ಕೆಂಗಲ್ ಹನುಮಂತಯ್ಯ ಹಾಗೂ ಎಸ್.ಎಂ ಕೃಷ್ಣ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಜತೆಗೆ ದೇವೆಗಾಡರು ನಮ್ಮ ರಾಜ್ಯದ ಗುರುತನ್ನು ದೊಡ್ಡ ಮಟ್ಟಕ್ಕೆ ಏರಿಸಿದ್ದಾರೆ. ಈ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲು ಎಸ್.ಎಂ. ಕೃಷ್ಣ ಹಾಗೂ ವೀರಪ್ಪ ಮೋಯ್ಲಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೆವು. ಈ ವಿಮಾನ ನಿಲ್ದಾಣ ನಿರ್ಮಾಣ ಸಮಯದಲ್ಲಿ ನಾನು ನಗರಾಭಿವೃದ್ಧಿ ಹಾಗೂ ಜಿಲ್ಲಾ ಮಂತ್ರಿಯಾಗಿದ್ದೆ. ಈ ವಿಮಾನ ನಿಲ್ದಾಣಕ್ಕೆ ಪ್ರತಿ ಎಕರೆಗೆ 6 ಲಕ್ಷದಂತೆ 2 ಸಾವಿರ ಎಕರೆ ಸರ್ಕಾರಿ ಜಾಗ ಹಾಗೂ 2.50 ಸಾವಿರ ಎಕರೆ ಖಾಸಗಿ ಜಾಗ ಖರೀದಿ ಮಾಡಿ ಒಟ್ಟು 4.50 ಸಾವಿರ ಎಕರೆ ಜಾಗ ನೀಡಲಾಗಿತ್ತು.


ಇದನ್ನೂ ಓದಿ: Pramod Muthalik : 'ಹಠದಿಂದ ಸ್ವಂತ ಜಾಗದಲ್ಲಿ ಟಿಪ್ಪು ಪ್ರತಿಮೆ ಕಟ್ಟುತ್ತೀವಿ ಅಂದ್ರೂ ಬಿಡಲ್ಲ'


ಸರ್ಕಾರ ಸೂಚನೆ ನೀಡಿದ್ದರೆ ವಿಮಾನ ನಿಲ್ಧಾಣದವರೇ ಪ್ರತಿಮೆ ನಿರ್ಮಾಣ ಮಾಡುತ್ತಿದ್ದರು. ಇವರಿಗೆ ಕಮಿಷನ್ ಬೇಕಿತ್ತೋ ಅಥವಾ ಬೇರೆ ಕಾರಣಕ್ಕೋ ಇವರೇ ನಿರ್ಮಾಣ ಮಾಡಿದ್ದಾರೆ. ನಾನು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷನಾಗಿದ್ದ ಕಾರಣ ಈ ಕಾಮಗಾರಿ ಭೂಮಿ ಪೂಜೆಗೆ ನನಗೆ ಆಹ್ವಾನ ನೀಡಿದ್ದರು. ನಾವು ಕೆಂಪೇಗೌಡ ಜಯಂತಿ ಆಚರಣೆ ಆರಂಭಿಸಿದ್ದೆವು. ಈಗ ಅವರಿಗೆ ಈ ಪ್ರತಿಮೆ ನಿರ್ಮಾಣದ ಅವಕಾಶ ಸಿಕ್ಕಿದ್ದು, ನಮ್ಮ ಯಾವುದೇ ತಕರಾರಿಲ್ಲ. ನಮಗೆ ಆಹ್ವಾನ ನೀಡುವ ಅಗತ್ಯವೇನಿಲ್ಲ, ನಾವು ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಅವರು ಪ್ರತಿ ಹಂತದಲ್ಲೂ ಸಮಾಜದ ಬದಲು ತಮ್ಮ ಪಕ್ಷ ಹಾಗೂ ಮತ ಬ್ಯಾಂಕ್ ಅಜೆಂಡಾ ಇಟ್ಟುಕೊಂಡಿರುತ್ತಾರೆ. ಗಣ್ಯ ವ್ಯಕ್ತಿಗಳಿಗೆ ಮಾಲಾರ್ಪಣೆ ಮಾಡುವುದರಲ್ಲೂ ರಾಜಕೀಯ ಮಾಡುತ್ತಾ ಬಂದಿದ್ದಾರೆ.


ಈ ಸರ್ಕಾರಕ್ಕೆ ಕುಮಾರಸ್ವಾಮಿ, ದೇವೇಗೌಡರು, ಶಿವಕುಮಾರ್, ಕೃಷ್ಣ ಅವರು ಬೇಡ. ಅವರಿಗೆ ಕೇವಲ ಚುನಾವಣೆ ಹಾಗೂ ಮತ ಬ್ಯಾಂಕ್ ಮಾತ್ರ ಮುಖ್ಯ. ಅದಕ್ಕೆ ಬೇಕಾದ ಎಲ್ಲ ಕೆಲಸ ಮಾಡುತ್ತಾರೆ. ಅವರಿಂದ ಏನನ್ನೂ ನಿರೀಕ್ಷೆ ಮಾಡಬಾರದು, ಮಾಡಿದರೆ ತಪ್ಪಾಗುತ್ತದೆ. ಅವರು ಮಾತೆತ್ತಿದರೆ ರಾಜಕಾರಣ ಹುಡುಕುತ್ತಾರೆ. ಸರ್ಕಾರಿ ಕಾಲೇಜು ಪ್ರಾಂಶುಪಾಲರಿಗೆ ಬೆದರಿಸಿ ವಿದ್ಯಾರ್ಥಿಗಳನ್ನು ಕರೆ ತರಲು ಆದೇಶ ನೀಡಿದ್ದರು. ಅವರ ಬಳಿ ಜನ ಬೆಂಬಲ ಇಲ್ಲದಿರುವುದಕ್ಕೆ ತಾನೇ ಈ ರೀತಿ ಆದೇಶ ಹೊರಡಿಸಿದ್ದಾರೆ. ಕ್ರೀಡಾಂಗಣ, ವಿವಿ ಉದ್ಘಾಟನೆಗೆ ವಿದ್ಯಾರ್ಥಿ ಕರೆದುಕೊಂಡು ಹೋದರೆ ಸರಿ, ಕೆಂಪೇಗೌಡ ಪ್ರತಿಮೆ ಅನಾವರಣಕ್ಕೂ ವಿದ್ಯಾರ್ಥಿಗಳಿಗೂ ಏನು ಸಂಬಂಧ? ಇದಕ್ಕೆ ಮುಖ್ಯಮಂತ್ರಿಗಳು ಉತ್ತರಿಸಬೇಕು.


ಬಿಜೆಪಿಯವರಿಗೆ ಸಂಸ್ಕಾರವೇ ಇಲ್ಲ. ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿಗಳು, ಯಾರು ಕಾರ್ಯಕ್ರಮದಲ್ಲಿ ಇರಬೇಕು ಎಂಬುದೇ ಗೊತ್ತಿಲ್ಲ. ಅವರ ಸರ್ಕಾರ, ಅವರ ಇಚ್ಛೆ. ನಾವು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.


ನಾನು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಕೋವಿಡ್ ಕಾಲದ ಪರಿಹಾರದಿಂದ ಹಿಡಿದು ಅವರು ನೀಡಿದ್ದ ಭರವಸೆಗಳವರೆಗೂ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ನಿರೀಕ್ಷೆ ಮಾಡಿದ್ದೆವು. ಆದರೆ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸದೇ ಕೇವಲ ಪ್ರಮುಖ ನಾಯಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೋಗಿದ್ದಾರೆ. ಇದು ಡಬಲ್ ಇಂಜಿನ್ ಸರ್ಕಾರವಲ್ಲ, ಟ್ರಬಲ್ ಇಂಜಿನ್ ಸರ್ಕಾರವಾಗಿದೆ.


ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ದೇವೇಗೌಡರನ್ನು ಖುದ್ದು ಸಿಎಂ ಆಹ್ವಾನಿಸಿದ್ದರು: ಅಶ್ವತ್ಥ ನಾರಾಯಣ ಸ್ಪಷ್ಟನೆ


ಈ ಸರ್ಕಾರ ಕೋವಿಡ್ ಸಮಯದಲ್ಲಿ ಸತ್ತವರಿಗೆ ಪರಿಹಾರ ನೀಡಿಲ್ಲ, ರೈತರಿಗೆ ಪರಿಹಾರ ನೀಡಿಲ್ಲ. ವ್ಯಾಪಾರಿಗಳಿಗೆ ಪರಿಹಾರ ನೀಡಿಲ್ಲ. ಈಗ ಚುನಾವಣೆ ಬರುತ್ತಿದ್ದಂತೆ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಅವರು ಎಷ್ಟು ಬೇಕಾದರೂ ರಾಜಕೀಯ ಮಾಡಲಿ. ರಾಜ್ಯದ ಜನ ಅವರ ಸಂಕಲ್ಪ ಯಾತ್ರೆಯಲ್ಲೇ ಬಿಜೆಪಿ ಸೋಲಿಸುವ ಸಂಕಲ್ಪ ಮಾಡಿದ್ದಾರೆ. ಅವರು ದೇವೇಗೌಡರಿಗೆ ಗೌರವ ಕೊಟ್ಟರೋ, ಕೃಷ್ಣ ಅವರನ್ನು ಹಿಂದಕ್ಕೆ ಕೂರಿಸಿದರೋ, ಸ್ವಾಮೀಜಿ ಹೆಗಲ ಮೇಲೆ ಕೈ ಹಾಕಿದರೋ... ಈ ಎಲ್ಲವನ್ನೂ ಜನರಿಗೆ ಬಿಡುತ್ತೇವೆ. ಬಿಜೆಪಿಯ ಆಚಾರ, ವಿಚಾರ, ಸಂಸ್ಕಾರ ಅವರಿಗೆ ಬಿಟ್ಟದ್ದು. ಪ್ರಧಾನಮಂತ್ರಿಗಳು ರಾಜ್ಯಕ್ಕೆ ಕೊಡುಗೆ ನೀಡುತ್ತಾರೆ ಎಂದು ಭಾವಿಸಿದ್ದೆ. ಅವರ ಕೊಡುಗೆ ಕೇವಲ ಹೂವಿನ ಹಾರ, ಕೋಟಿ ನಮಸ್ಕಾರ ಮಾತ್ರ.


ಸರ್ಕಾರ ಈ ಕಾರ್ಯಕ್ರಮದ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲವಲ್ಲ ಎಂದು ಕೇಳಿದಾಗ, ‘ಈ ಸರ್ಕಾರಕ್ಕೆ ಯಾವುದೇ ಶಿಷ್ಟಾಚಾರವಿಲ್ಲ. ಅವರು ನುಡಿದಂತೆ ನಡೆದಿಲ್ಲ. ಈ ಸರ್ಕಾರ ಬರುವ ಮುನ್ನ ಅವರು ಕೊಟ್ಟ ಭರವಸೆಯಲ್ಲಿ ಶೇ. 90ರಷ್ಟು ಭರವಸೆ ಈಡೇರಿಸಿಲ್ಲ. ಪ್ರಧಾನಮಂತ್ರಿಗಳೇ ನೀವು ಮಾಡಿದ್ದ ಭಾಷಣದ ಬಗ್ಗೆ ನೀವೇ ಉತ್ತರ ಕೊಡಿ ಎಂದು ಕೇಳಿದ್ದೆವು. ಅವರು ನಮ್ಮ ಸರ್ಕಾರವನ್ನು 10% ಕಮಿಷನ್ ಸರ್ಕಾರ ಎಂದಿದ್ದರು. ಈಗ ಅವರ ಸರ್ಕಾರದ ಬಗ್ಗೆ ಗುತ್ತಿಗೆದಾರರು 40% ಕಮಿಷನ್ ಸರ್ಕಾರ ಎಂದು ಪತ್ರ ಬರೆದಿದ್ದಾರೆ. ಕೆಲವರು ದಯಾಮರಣಕ್ಕೆ ಅರ್ಜಿ ಹಾಕಿದ್ದಾರೆ. ಈ ಪ್ರತಿಮೆ ಮಾಡಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಮುಖ್ಯಕಾರ್ಯದರ್ಶಿಗಳಿಗೆ ಹೇಳಿದ್ದರೆ ಅವರೇ ಪ್ರತಿಮೆ ನಿರ್ಮಾಣ ಮಾಡಿಸುತ್ತಿದ್ದರು. ನೀವು ಕಮಿಷನ್ ಪಡೆಯಲು ಸರ್ಕಾರಿ ಹಣ ಹಾಕಿದ್ದೀರಾ? ಕೆಂಪೇಗೌಡ ಪ್ರಾಧಿಕಾರ, ಕೆಂಪೇಗೌಡ ಜಯಂತಿ ಆರಂಭಿಸಿದವರು ನಾವು' ಎಂದು ತಿಳಿಸಿದರು.


ಕೆಂಪೇಗೌಡ ಪ್ರತಿಮೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆಯೇ ಎಂಬ ಪ್ರಶ್ನೆಗೆ, ‘ಈ ಕಾಮಗಾರಿಗೆ ಸರ್ಕಾರ ಹಣ ವೆಚ್ಚ ಮಾಡುವ ಅಗತ್ಯವೇನಿತ್ತು? ನಾವು ವಿವಿ ಬಳಿ 5 ಎಕರೆ ಜಾಗವನ್ನು ಕೆಂಪೇಗೌಡ ಪ್ರಾಧಿಕಾರಕ್ಕೆ ನೀಡಿದ್ದೇವೆ. ಅಲ್ಲಿ ಒಂದು ಕಟ್ಟಡ ನಿರ್ಮಾಣ ಮಾಡಬಹುದಾಗಿತ್ತು. ಆದರೆ ಅವರು ಒಂದು ಅದ್ಧೂರಿ ಕಾರ್ಯಕ್ರಮ ಮಾಡಲು, ಪ್ರಚಾರ ಪಡೆಯಲು ಈ ರೀತಿ ಮಾಡಿದ್ದಾರೆ. ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ನಾವೇ ಈ ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದೇವೆ. ಅದಕ್ಕೆ ಶಂಕುಸ್ಥಾಪನೆ ವಾಜಪೇಯಿ ಅವರು ಮಾಡಿದ್ದರು. ಈಗ ಅದನ್ನು ಬೇರೆಯವರು ಬಳಸಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.


ಮಣ್ಣಿನ ಮಕ್ಕಳಾಗಿ ನಾವು ಕಾರ್ಯಕ್ರಮ ಮಾಡಬೇಕಿತ್ತು, ಮಾಡಿದ್ದೇವೆ ಎಂಬ ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅಲ್ಲಿ ಅಶೋಕ್ ಅವರನ್ನು ಲೆಕ್ಕಕ್ಕೇ ಇಟ್ಟಿಲ್ಲ. ಕೇವಲ ಹೆಸರಿಗೆ ಮುಂದಿಟ್ಟುಕೊಂಡಿದ್ದಾರೆ. ಅಲ್ಲಿ ಆಂತರಿಕ ಯುದ್ಧ ನಡೆಯುತ್ತಿದೆ’ ಎಂದರು.


ಇದನ್ನೂ ಓದಿ: I am a CEO : ಕೆಜಿಎಫ್‌ ಸ್ಟೈಲ್‌ನಲ್ಲಿ ಹೊಸ ಕಂಪನಿ ಹೆಸರೇಳಿದ ಡ್ರೋನ್‌ ಪ್ರತಾಪ್‌


ಅಶೋಕ್ ಅವರು ಸ್ವಾಮೀಜಿಗಳ ಹೆಗಲ ಮೇಲೆ ಕೈ ಹಾಕಿದ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾನು ಸ್ವಾಮೀಜಿಗಳ ಹೆಸರನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ. ಅವರು ಅದಕ್ಕೆ ಉತ್ತರ ನೀಡಬೇಕು. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರ ಬಾಂಧವ್ಯ ಹೇಗಿದೆ ಎಂದು ಗೊತ್ತಿಲ್ಲ. ಹೀಗಾಗಿ ನಾನು ಆ ಬಗ್ಗೆ ಮಾತನಾಡುವುದಿಲ್ಲ. ಸ್ವಾಮೀಜಿ ಜತೆ ನನಗೆ ಭಕ್ತನಿಗೂ ಹಾಗೂ ಭಗವಂತನಿಗೂ ಇರುವ ಸಂಬಂಧವಿದೆ. ನಮ್ಮ ಸ್ವಾಮಿಜಿಯನ್ನು ನಾವು ದೇವರಂತೆ ನೋಡುತ್ತೇವೆ. ಅವರು ವಯಸ್ಸಿನಲ್ಲಿ ನನಗಿಂತ ಸ್ವಲ್ಪ ಚಿಕ್ಕವರಾಗಿದ್ದರೂ ಆ ಪವಿತ್ರ ಪೀಠಕ್ಕೆ ಯಾವ ರೀತಿ ಗೌರವ ನೀಡಬೇಕೋ ಆ ರೀತಿ ನೀಡುತ್ತೇವೆ’ ಎಂದು ತಿಳಿಸಿದರು.


ನಿಮಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತೇ ಎಂದು ಕೇಳಿದಾಗ, ‘ನನಗೆ ಯಾವುದೇ ಆಹ್ವಾನ ಪತ್ರಿಕೆ, ದೂರವಾಣಿ ಕರೆ ಬಂದಿಲ್ಲ. ಭೂಮಿ ಪೂಜೆ ಸಂದರ್ಭದಲ್ಲಿ ನನ್ನನ್ನು ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಕರೆದಿದ್ದರು. ಆಗ ಹೋಗಿದ್ದೆ. ಆಗ ಸ್ವಾಮೀಜಿಗಳು, ದೇವೇಗೌಡರು ಬಂದಿದ್ದರು. ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ್ದೆ. ಶಂಕುಸ್ಥಾಪನೆಗೆ ನಾವು ಇದ್ದೆವು, ಮನೆ ಅವರು ಕಟ್ಟುಕೊಂಡಿದ್ದಾರೆ’ ಎಂದರು.


ಕಾಂಗ್ರೆಸ್ ಕೈಯಲ್ಲಿ ಸಾಧ್ಯವಾಗದ್ದು ನಾವು ಮಾಡಿದ್ದೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ‘ನಾವು ಇಡೀ ರಾಜ್ಯವನ್ನೇ ಜಾಗತಿಕ ಭೂಪಟದಲ್ಲಿ ಇಟ್ಟಿದ್ದೇವೆ. ವಾಜಪೇಯಿ ಅವರು ಏನು ಭಾಷಣ ಮಾಡಿದ್ದಾರೆ ಎಂದು ನೋಡಿ. ಇಷ್ಟು ಉದ್ಯೋಗ ಸೃಷ್ಟಿ, ಇಷ್ಟು ಅಭಿವೃದ್ಧಿ ಆಗಿದ್ದರೆ ಅದು ನಮ್ಮಿಂದ. ಮೆಟ್ರೋ ಯಾರ ಕಾಲದಲ್ಲಿ ಆರಂಭವಾಯಿತು? ನಾನೇ ಪ್ರವಾಸ ಮಾಡಿ ವರದಿ ನೀಡಿದ್ದೆ.’


ರಸ್ತೆ ಹಾಗೂ ಮೂಲ ಸೌಕರ್ಯದ ಬಗ್ಗೆ ಶಾಲಾ ಮಕ್ಕಳ ಹೋರಾಟದ ಬಗ್ಗೆ ಕೇಳಿದಾಗ, ‘ಈ ಸರ್ಕಾರ ಪ್ರಧಾನಿಗಳು ಎಲ್ಲೆಲ್ಲಿ ಪ್ರಯಾಣ ಮಾಡಿದ್ದಾರೆ ಅಲ್ಲಿ ಮಾತ್ರ ರಸ್ತೆ ಗುಂಡಿ ಮುಚ್ಚಿದ್ದಾರೆ. ಉಳಿದ ರಸ್ತೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕೇವಲ ಜನರಿಂದ ದುಬಾರಿ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಅವರು 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳುತ್ತಾರೆ. ಅದು ಕೇವಲ ಕಾಗದದ ಮೇಲೆ ಮಾತ್ರ ಉಳಿಯಲಿದೆ. ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ, ಈ ಸರ್ಕಾರ ಕರೆದಿರುವ ಎಲ್ಲ ಟೆಂಡರ್ ಅನ್ನು ನಾವು ಪುನರ್ ಪರಿಶೀಲನೆ ಮಾಡಲಿದ್ದೇವೆ, ಎಲ್ಲ ಒಪ್ಪಂದಗಳನ್ನು ಮರುಪರಿಶೀಲಿಸುತ್ತೇವೆ’ ಎಂದರು.


ರಾಜ್ಯದಲ್ಲಿ ಎಲ್ಲೇ ಟಿಪ್ಪು ಪ್ರತಿಮೆ ಸ್ಥಾಪಿಸಿದರೂ ಅದನ್ನು ಧ್ವಂಸ ಮಾಡುತ್ತೇವೆ ಎಂಬ ಮುತಾಲಿಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಈ ವಿಚಾರವಾಗಿ ಮುಖ್ಯಮಂತ್ರಿಗಳು ಉತ್ತರಿಸಬೇಕು. ಬೊಮ್ಮಾಯಿ ಅವರು ನಾವು ಎಲ್ಲ ವರ್ಗದವರ ರಕ್ಷಣೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದು, ಇದು ಅವರ ಕರ್ತವ್ಯವಾಗಿದೆ’ ಎಂದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.