ಇಂದಿನಿಂದ ಖಾಸಗಿ ಆಸ್ಪತ್ರೆ ವೈದ್ಯರ ಉಪವಾಸ ಸತ್ಯಾಗ್ರಹ
ಸಿಎಂ ಜೊತೆಗಿನ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಇಂದಿನಿಂದ ಉಪವಾಸ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಿರುವುದಾಗಿ ಖಾಸಗಿ ವೈದ್ಯರ ಸಂಘದ ಅಧ್ಯಕ್ಷ ಡಾ.ರವೀಂದ್ರ ತಿಳಿಸಿದ್ದಾರೆ.
ಬೆಳಗಾವಿ: ವೈದ್ಯಕೀಯ ತಿದ್ಧುಪಡಿ ವಿಧೇಯಕ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧಾರ ಮಾಡಿರುವುದಾಗಿ ಖಾಸಗಿ ವೈದ್ಯರ ಸಂಘದ ಅಧ್ಯಕ್ಷ ಡಾ. ರವೀಂದ್ರ ತಿಳಿಸಿದ್ದಾರೆ.
ಸರ್ಕಾರ ಜಾರಿಗೆ ತರಲು ಹೊರಟಿರುವ ಖಾಸಗಿ ವೈದ್ಯಕೀಯ ವಿಧೇಯಕ ತಿದ್ದುಪಡಿ ಮಸೂದೆಗೆ ಖಾಸಗಿ ವೈಧ್ಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮ್ಯನವರು ವೈದ್ಯಕೀಯ ಸಂಘದ ಪದಾಧಿಕಾರಿಗಳನ್ನು ಸಂಧಾನಕ್ಕಾಗಿ ಮಾತುಕತೆಗೆ ಕರೆದಿದ್ದರು. ಆದರೆ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಇಂದಿನಿಂದ ಉಪವಾಸ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಿರುವುದಾಗಿ ಖಾಸಗಿ ವೈದ್ಯರ ಸಂಘದ ಅಧ್ಯಕ್ಷ ಡಾ.ರವೀಂದ್ರರವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇವರ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಸ್ಥಳೀಯ ವೈದ್ಯರು ತಮ್ಮ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ. ಬೆಳಗಾವಿಯ ಸುವರ್ಣಸೌಧದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಕೊಂಡಸಕೊಪ್ಪ ಗ್ರಾಮದಲ್ಲಿ ಸತ್ಯಾಗ್ರಹ ನಡೆಸಲು ಸ್ಥಳ ನಿಗದಿಯಾಗಿದೆ.
ಈಗಾಗಲೇ ವಿರೋಧಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಬೆಂಬಲ ನೀಡಿರುವುದರಿಂದ ಈ ಪ್ರತಿಭಟನೆಯು ಕಾವೇರುವ ಸಾಧ್ಯತೆ ಇದೆ. ಒಂದು ಕಡೆ ಸರ್ಕಾರ ಬಡ ರೋಗಿಗಳನ್ನು ಗಮನದಲ್ಲಿಟ್ಟುಕೊಂಡು ತರುತ್ತಿರುವ ಈ ಕಾಯ್ದೆಯು ಖಾಸಗಿ ಆಸ್ಪತ್ರೆಗಳಿಗೆ ತೊಂದರೆಯುಂಟು ಮಾಡಿದೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ನಿನ್ನೆ ಸಿಎಂ ಜೊತೆ ನಡೆದ ಸಂಧಾನ ಸಭೆಯಲ್ಲಿ ಕೆಲವೊಂದು ಅಂಶವನ್ನು ಕೈಬಿಡಲು ಮನವಿ ಮಾಡಲಾಯಿತು. ಆದರೆ, ಸರ್ಕಾರ ನಮ್ಮ ಮನವಿಗೆ ನಿರಾಕರಿಸಿದ ಕಾರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಡಾ. ರವೀಂದ್ರ ತಿಳಿಸಿದ್ದಾರೆ.