Bagalakot: ಒಂದೆಡೆ ಕಿತ್ತು ತಿನ್ನುವ ಬಡತನ... ಇನ್ನೊಂದೆಡೆ ಮನೆಯಲ್ಲಿ ವಯಸ್ಸಾದ ಅಪ್ಪ ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿ. ಹೀಗೆ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತು, ಅಪ್ಪಾ ನಾನಿದೀನಿ ಡೋಂಟ್‌ವರಿ ಅಂತಿರೋ ಮಗಳು... ಇಂತಹ ಮನಕಲುಕುವ ದೃಶ್ಯಗಳು ಕಂಡು ಬಂದಿದ್ದು, ಬಾಗಲಕೋಟೆಯ ಭಾವಿ ಪೊಲೀಸ್‌ ಅಧಿಕಾರಿಯ ಮನೆಯಲ್ಲಿ. ಹೌದು.. ಇಲ್ಲಿ ಗಳಗಳನೇ ಕಣ್ಣೀರು ಇಡುತ್ತಿರುವ ಇವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಆರತಿ ತೇಲಿ. ಅಷ್ಟಕ್ಕೂ ಆರತಿ ಅಳ್ತಿರೋದು ತಮ್ಮ ತಪ್ಪಿಗೆ ಅಂತ ಅನ್ಕೊಂಡಿದ್ದೀರಾ... ಊಹೂಂ... ಖಂಡಿತಾ ಅಲ್ಲ!. ಇಂದು ಯಾರೋ ಮಾಡಿದ ತಪ್ಪಿಗೆ ಆರತಿ ಬಾಳಲ್ಲಿ ಬೆಳಕಾಗಬೇಕಿದ್ದ PSI ಜ್ಯೋತಿ ಭ್ರಷ್ಟರ ಲಂಚದಾಹಕ್ಕೆ ಕತ್ತಲಾಗಿ ಹೋಗಿದೆ.

COMMERCIAL BREAK
SCROLL TO CONTINUE READING

ಒಂದೊತ್ತಿನ ಊಟ ಬಿಟ್ಟು, ವರ್ಷಗಟ್ಟಲೇ ತನ್ನ ಮನೆಯವರು, ಮನದವರಿಂದ ದೂರವಾಗಿ ಜೀವನದಲ್ಲಿ ಏನಾದ್ರೂ ನಿಶ್ಚಿತ ಗುರಿಯ ಪಟ್ಟು ಹಿಡಿದಿದ್ದ ಆರತಿ ಕೊನೆಗೂ ತನ್ನ ಕನಸನ್ನು ನನಸು ಮಾಡಿಯೇ ಬಿಟ್ಟಿದ್ದಳು.. ಅಪ್ಪ ಅಮ್ಮನ ಕಷ್ಟ, ಮನೆಯ ಬಡತನದ ಬೇಗೆಯ ನಡುವೆಯೂ ತನ್ನ ಕನಸಿಗೆ ಮುನ್ನುಡಿ ಬರೆದಿದ್ದಳು. ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಓದಿ ಪಿಎಸ್‌ಐ ಎಕ್ಸಾಂ ಬರೆದು ರ‍್ಯಾಂಕ್‌ನಲ್ಲಿ ಪಾಸಾಗಿದ್ದಳು ಆರತಿ. ಅಬ್ಬಾ ಸಾಕಪ್ಪ ನಾನು ಓದಿದ್ದಕ್ಕೂ ಸಾರ್ಥಕವಾಯಿತು. ನನ್ನ ಎಲ್ಲ ಕಷ್ಟಗಳು ತೀರಿ ಹೋದವು ಅಂತ ನಿಟ್ಟುಸಿರು ಬಿಟ್ಟಿದ್ದಳು. ಮನೆಯಲ್ಲಿದ್ದ ಬಡತನಕ್ಕೆ ಗುಡ್‌ ಬೈ ಹೇಳಿ, ಅಪ್ಪನಿಗೆ ಬೆನ್ನೆಲುಬಾಗಿ ನಿಲ್ಲುವ ಭರವಸೆ ಮೂಡಿಸಿದ್ದಳು. ಹೀಗೆ ಹೊಸ ಹುಮ್ಮಸ್ಸಿನಲ್ಲಿದ್ದ ಆರತಿಗೆ ನಡೆದು ಹೋಗಿರುವ ಆ ಒಂದು ಘಟನೆಯಿಂದ ಬರಸಿಡಿಲು ಬಡಿದಂತಾಗಿದೆ. 

ಯೆಸ್‌ ಕಲಬುರಗಿಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದ ಸಂಗತಿ ರಾಜ್ಯದೆಲ್ಲೆಡೆ ಹಬ್ಬಿ, ಭಾರಿ ಸಂಚಲನವನ್ನೇ ಸೃಷ್ಟಿಮಾಡಿದೆ. ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನೆಲೆ ಸಂಪೂರ್ಣ ನೇಮಕಾತಿ ರದ್ದುಪಡಿಸಲಾಗಿದೆ. ಇದೇ ಕೆಲ ದಿನಗಳ ಹಿಂದೆ ಗೃಹ ಸಚಿವ ಆರಗ ಜ್ಞಾನೇಂದ್ರ 545 ಹುದ್ದೆಗಳ ನೇಮಕಾತಿ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. ರದ್ದಾಗಿದ್ದೇ ತಡ ನೋಡಿ ಆರತಿ ಬಾಳಲ್ಲಿ ಬೆಳಕೇ ಇಲ್ಲದಂತಾಗಿ, ಮುಗಿಲು ತಲೆ ಮೇಲೆ ಕಳಚಿ ಬಿದ್ದಂತಾಗಿದೆ. ಅಯ್ಯೋ ಇದೇನಾಯ್ತು ಅನ್ನೋ ಅಷ್ಟರಲ್ಲಿ ಆರತಿ ಕುಗ್ಗಿ ಹೋಗಿದ್ರು. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ ಆರತಿಯಂತಹ  ಅದೆಷ್ಟೋ ಅಭ್ಯರ್ಥಿಗಳು ಕಣ್ಣೀರಲ್ಲಿ ಮುಳುಗಿ ಹೋಗಿದ್ರು. ಕಷ್ಟಪಟ್ಟು ಓದಿ, ದೊಡ್ಡ ಅಧಿಕಾರಿಯಾಗಬೇಕು ಅನ್ನೋ ಮಹಾದಾಸೆ ಇಟ್ಕೊಂಡಿದ್ದ ಆರತಿ, ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ದಾರೆ. ಇತ್ತ ಮಗಳ ನೋವು ನೋಡಲಾರದೇ ತಂದೆಯೂ ದಿಕ್ಕು ತೋಚದಂತಾಗಿದ್ದಾರೆ.  


ಇದನ್ನೂ ಓದಿ-PSI Scam: ‘ತನಿಖಾಧಿಕಾರಿಯಂತೆ ವರ್ತಿಸಿದ ಪ್ರಿಯಾಂಕ್ ಖರ್ಗೆ ಈಗ ಸೊಬಗನಂತೆ ವರ್ತಿಸುತ್ತಿದ್ದಾರೆ’

ಈ ಹೆಣ್ಣುಮಗಳ ಮಾತು ಕೇಳಿದ್ರೆ ಎಂಥವರಿಗೂ ಕಣ್ಣಂಚಿನಲ್ಲಿ ನೀರು ಕಾಣಿಸಿಕೊಳ್ಳುತ್ತದೆ. 'ಸಾರ್‌ ಪರೀಕ್ಷೆಗಾಗಿ ದಿನನಿತ್ಯ ಪಾರ್ಕಿನಲ್ಲಿ ಕೂತು ಕಷ್ಟಪಟ್ಟು ಓದಿದ್ದೇನೆ. ಯಾವಾಗ ನಮಗೆ ನೌಕರಿ ಸಿಗುತ್ತೋ ಅಂತ ಕನಸು ಕಾಣ್ತಿದ್ದೆವು. ಸಾರ್‌ ನನಗೆ ಎರಡು ಜಾಬ್‌ ಆಗಿತ್ತು. ಅವುಗಳಿಗೆ ರಿಸೈನ್‌ ಮಾಡಿ ಪಿಎಸ್‌ಐ ಪರೀಕ್ಷೆ ಬರೆದಿದ್ದೆ. ಇವಾಗ ಸಿಕ್ಕಿರುವ ನೌಕರಿಗೆ ಬೆಂಕಿ ಇಟ್ತಲ್ಲ ಸಾರ್‌' ಅಂತ ಕಣ್ಣೀರಿನಲ್ಲಿ ಕೈ ತೊಳೆದಿದ್ದಾರೆ. ಮನೆಯಲ್ಲಿ ನೂರಾರು ಸಮಸ್ಯೆಗಳಿವೆ, ಅಪ್ಪನಿಗೆ ದುಡಿಯೋಕೆ ಆಗಲ್ಲ. ಜೀವನಕ್ಕೆ ಮುಂದೇನು ಮಾಡಬೇಕು ಅನ್ನೋದು ತಿಳಿಯುತ್ತಿಲ್ಲ ಎಂದು ಕಣ್ಣೀರಲ್ಲೇ ಮುಳುಗಿಸಿಬಿಟ್ಟಿದ್ದಾರೆ. 


ಇದನ್ನೂ ಓದಿ-ಪಿಎಸ್ಐ ನೇಮಕಾತಿ ಅಕ್ರಮ: ಮತ್ತೋರ್ವ ಆರೋಪಿ ಬಂಧನ

ಇದು ಆರತಿ ಅವರ ಒಬ್ಬರದೇ ಕಥೆ ಅಲ್ಲ. ಅಂದು ನಿಯತ್ತಾಗಿ ಎಕ್ಸಾಂ ಬರೆದಿದ್ದ 500 ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಇಂದು ಅತಂತ್ರವಾಗಿದೆ. ಒಂದೊತ್ತಿನ ಊಟ, ನಿದ್ದೆ ಬಿಟ್ಟು ಭುಜದ ಮೇಲಿನ ಆ ಎರಡು ಸ್ಟಾರ್‌ ಗಳಿಗಾಗಿ ಕಾದು ಕುಳಿತಿದ್ರು. ಆದ್ರೆ ಈಗ ನೇಮಕಾತಿ ರದ್ದಾಗಿದ್ದು, ಮರು ಪರೀಕ್ಷೆಗೆ ಸರ್ಕಾರ ಆದೇಶ ನೀಡಿದೆ. ಅದೇನೆ ಇರಲಿ ಕಷ್ಟಪಟ್ಟವನಿಗೆ ದೇವರು ಕೈ ಹಿಡಿದೇ ಹಿಡಿತಾನೆ ಅಂತೇಳಿ ಮುಂಬರುವ ಪರೀಕ್ಷೆಯಲ್ಲೂ ಇಂತಹ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸಲಿ. 


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.