ಕೈಗಾರಿಕಾ ಸಚಿವರಾಗಿ ಸುದೀರ್ಘ 10 ವರ್ಷ ಸೇವೆ ಸಲ್ಲಿಸಿದ ಕೀರ್ತಿ ಶ್ರೀ ಆರ್.ವಿ.ದೇಶಪಾಂಡೆಯವರಿಗೆ ಸಲ್ಲುತ್ತಿದ್ದು,ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಬೆಳಗಾವಿ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಹಿರಿಯ ಶಾಸಕ ಆರ್. ವಿ. ದೇಶಪಾಂಡೆ ಅವರಿಗೆ 2022ರ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿದರು.


COMMERCIAL BREAK
SCROLL TO CONTINUE READING

ಕರ್ನಾಟಕದಲ್ಲಿ ಕೈಗಾರೀಕರಣ ಹಾಗೂ ಕೈಗಾರಿಕಾ ನೀತಿ ರೂಪಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಪ್ರಗತಿಪರವಾದ ಚಿಂತನೆಯುಳ್ಳವರು. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಆರ್ಥಿಕತೆ ಬದಲಾವಣೆ, ಉದಾರೀಕರಣ ಹಾಗೂ ಜಾಗತೀಕರಣದ ಲಾಭವನ್ನು ರಾಜ್ಯಕ್ಕೆ ಲಭಿಸುವಂತೆ ಪ್ರಾಮಾಣಿಕ ಪರಿಶ್ರಮ ವಹಿಸಿದರು.  ರಾಜ್ಯದಲ್ಲಿ ಟೊಯೊಟಾ ಕಾರ್ಖಾನೆಗೆ ರಿಯಾಯ್ತಿಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯದಲ್ಲಿ ದೊಡ್ಡ ಬದಲಾವಣೆಗಳನ್ನು ತರಲು ಶ್ರಮಿಸಿದ್ದಾರೆ ಎಂದರು.


ಇದನ್ನೂ ಓದಿ: ಕಾರು ಹಾಗೂ ಬೈಕ್ ಮಧ್ಯೆ ಡಿಕ್ಕಿ, ಸ್ಥಳದಲ್ಲಿಯೇ ಮೂವರ ಸಾವು


ಪ್ರಶಸ್ತಿಯ ಗೌರವ ಹೆಚ್ಚಿದೆ :


ಅತ್ಯುತ್ತಮ ಶಾಸಕ ಪ್ರಶಸ್ತಿ ಹಿರಿಯರು ಹಾಗೂ ಮಾರ್ಗದರ್ಶಕರೂ ಆಗಿರುವಂತಹ ಆರ್.ವಿ.ದೇಶಪಾಂಡೆಯವರಿಗೆ ಸಂದಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ. ಸರ್ವಸಮ್ಮತದ ಆಯ್ಕೆಯಲ್ಲಿ ವಿಧಾನಮಂಡಲದ ವಿಧಾನಸಭೆಯ ನಡೆವಳಿಕೆಗಳನ್ನು ಎತ್ತರದ ಮಟ್ಟದಲ್ಲಿ ನಿಭಾಯಿಸುವುದನ್ನು ತಮ್ಮ ನಡತೆಯಿಂದ ಕಳೆದ 8 ಬಾರಿ ಆಯ್ಕೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಅತ್ಯುತ್ತಮ ಆಯ್ಕೆ ಮಾಡಿರುವುದಕ್ಕೆ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.


ಹಳಿಯಾಳ ಕ್ಷೇತ್ರಕ್ಕೆ ಆಯ್ಕೆಯಾದರು. ಆ ಕ್ಷೇತ್ರ ಕಾಡಿಗೆ ಹೊಂದಿಕೊಂಡಿರುವ ಕ್ಷೇತ್ರ. ಕುಡಿಯುವ ನೀರಿಗೆ ಸಮಸ್ಯೆ ಹಾಗೂ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದಂಥ ಕ್ಷೇತ್ರವಾಗಿತ್ತು. ಆ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಿ ಜನಮಾನಸವನ್ನು ಗೆದ್ದಿದ್ದಾರೆ ಎಂದರು. ಬಹಳ ಕಾಳಜಿಯಿಂದ ಜನರ ಕೆಲಸವನ್ನು ಮಾಡುತ್ತಾರೆ. ಜನರು ಅರ್ಜಿ ಕೊಟ್ಟರೆ ಅದರ ಬಗ್ಗೆ ಆಸ್ಥೆಯಿಂದ ಕ್ರಮ ಕೈಗೊಳ್ಳುವ ಪದ್ಧತಿ ರೂಢಿಸಿಕೊಂಡಿದ್ದಾರೆ ಎಂದರು.


ಇದನ್ನೂ ಓದಿ: ಕಾರು ಅಪಘಾತ: ಮೋದಿ ಸಹೋದರನ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀಗಳು


ವಿವಿಧ ಖಾತೆಗಳಲ್ಲಿ ಸಚಿವರಾಗಿ ಸೇವೆ :


ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ, ಸಿದ್ದರಾಮಯ್ಯ, ದೇಶಪಾಂಡೆಯವರು, ಎಂಪಿಪ್ರಕಾಶ್ ಅವರನ್ನೂ ಸೇರಿದಂತೆ ತಮ್ಮ ತಮ್ಮ ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡಿದ ದೊಡ್ಡ ತಂಡ 1983 ರಲ್ಲಿ ಬೆಳಕಿಗೆ ಬಂತು. ಇಡೀ ರಾಜಕಾರಣ ಬದಲಿಸಿದ ಸಮಯವಾಗಿತ್ತು.ಆ ತಂಡದಲ್ಲಿ ಆರ್.ವಿ.ದೇಶಪಾಂಡೆಯವರೂ ಒಬ್ಬರು.ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದ  2ನೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ದೇಶಪಾಂಡೆಯವರನ್ನು ಸಚಿವರನ್ನಾಗಿ ಮಾಡಲಾಯಿತು. ಅಂದಿನಿಂದ ವಿವಿಧ ಖಾತೆಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ದಕ್ಷತೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.


ಅವರು ನಡೆದು ಬಂದ ದಾರಿ ಎಲ್ಲರಿಗೂ ಮಾದರಿ :


ಉತ್ತಮ ರಾಜಕೀಯ ಅನುಭವ ಹೊಂದಿರುವ ಆರ್.ವಿ.ದೇಶಪಾಂಡೆಯವರು ಎಲ್ಲ ಮುಖ್ಯಮಂತ್ರಿಗಳೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದು, ಸ್ನೇಹಪರವಾಗಿದ್ದಾರೆ. ವಿರೋಧಪಕ್ಷದಲ್ಲಿ, ಕೇಂದ್ರ ಸರ್ಕಾರದಲ್ಲಿ ಹಲವು ಸಚಿವರೊಂದಿಗೆ ಆತ್ಮೀಯರಾಗಿದ್ದಾರೆ.ಅವರು ನಡೆದು ಬಂದ ದಾರಿ ನಮಗೆಲ್ಲರಿಗೂ ಮಾದರಿಯಾಗಿದ್ದು, ಅನುಕರಣೀಯವಾಗಿದೆ. ಹೊಸದಾಗಿ ಬಂದ ಶಾಸಕರು, ದೇಶಪಾಂಡೆಯವರ ಕೊಡುಗೆ, ನಡೆಸಿದ ಚರ್ಚೆಗಳ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆಯೆಂದು ತಿಳಿಸಿದರು.


ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.