ಬೆಂಗಳೂರು : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಳೆಯಿಂದ ರಾಜ್ಯದಲ್ಲಿ ನಾಲ್ಕು ದಿನಗಳ 'ಜನಾಶೀರ್ವಾದ ಯಾತ್ರೆ' ಹೆಸರಿನಲ್ಲಿ ಪ್ರವಾಸ ಆರಂಭಿಸಿದ್ದಾರೆ. 


COMMERCIAL BREAK
SCROLL TO CONTINUE READING

ಫೆ.10 ರಿಂದ 13ರವರೆಗೆ ರಾಜ್ಯ ಪ್ರವಾಸ ನಡೆಸಲಿರುವ ರಾಹುಲ್, ಫೆ.10ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಫೆ.10ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಬಳಿಕ ಕೊಪ್ಪಳದ ಹುಲಿಗೆಮ್ಮ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ನಂತರ ಗವಿಸಿದ್ದೇಶ್ವರ ಮಠಕ್ಕೂ ಭೇಟಿ ನೀಡಿ ಕುಕನೂರಿನಲ್ಲಿ ಬೃಹತ್​ ಸಾರ್ವಜನಿಕ ಸಭೆ ನಡೆಸಲಿದ್ದಾರೆ.


ಫೆ.11 ರಂದು ಕುಷ್ಟಗಿ, ಕನಗಿರಿ, ಗಂಗಾವತಿಗೆ ಭೇಟಿ ನೀಡಲಿದ್ದಾರೆ. ಕಾರಟಗಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ಹಾಗೂ ಹಂಚಿನಾಳ ಕ್ಯಾಂಪ್‌ನಲ್ಲಿ ಜನರ ಜತೆ ಸಂವಾದ ನಡೆಸಲಿದ್ದಾರೆ. ಫೆ.12 ರಂದು ರಾಯಚೂರಿನ ಕಲ್ಮಠಕ್ಕೆ ಭೇಟಿ ನೀಡಲಿದ್ದು, ದೇವದುರ್ಗದಲ್ಲಿ ಪರಿಶಿಷ್ಟ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಕಲಬುರಗಿಯ ಜೇವರ್ಗಿಯಲ್ಲಿ ಸಾರ್ವಜನಿಕ ಸಭೆ ನಡೆಸಿ, ನಂತರ ಖಾಜಾ ಬಂದೇ ನವಾಜ್ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ.


ಫೆ.13 ರಂದು ಖಮರುಲ್ ಇಸ್ಲಾಂ ನಿವಾಸಕ್ಕೆ ಭೇಟಿ ನೀಡಿ, ನಂತರ ಹೆಚ್.ಕೆ. ಸೊಸೈಟಿಯಲ್ಲಿ ಉದ್ಯಮಿಗಳ ಜತೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ಬಸವ ಕಲ್ಯಾಣಕ್ಕೆ ಭೇಟಿ ನೀಡಿ, ಬಸವ ಕಲ್ಯಾಣದಿಂದ ಹೈದರಾಬಾದ್‌ ಮೂಲಕ ದೆಹಲಿಗೆ ವಾಪಸಾಗಲಿದ್ದಾರೆ. 


ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.