ಮಗಳ ಸಾವಿಗೆ ನ್ಯಾಯ ಕೊಡಿಸಿ; ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಮಧು ಪೋಷಕರ ಮನವಿ
ಬಾಲಕಿಯ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು, ಅಗತ್ಯವಿದ್ದರೆ ಸಿಐಡಿ ತನಿಖೆಯನ್ನು ನಡೆಸುವಂತೆ ಗೃಹ ಸಚಿವರಿಗೆ ಕರೆ ಮಾಡಿ ಸೂಚಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
ರಾಯಚೂರು: ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ರಾಯಚೂರಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಸಂಶಯಾಸ್ಪದವಾಗಿ ಸಾವನ್ನಪ್ಪಿದ ನಗರದ ನವೋದಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮಧು ಪತ್ತಾರ್(23) ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ ಮಧು ಪೋಷಕರಿಗೆ ನ್ಯಾಯ ಒದಗಿಸುವಾಗಿ ಭರವಸೆ ನೀಡಿದ ಸಿದ್ದರಾಮಯ್ಯ, ಸ್ಥಳದಲ್ಲೇ ಗೃಹ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಕರೆ ಮಾಡಿ ಪ್ರಕರಣದ ಕುರಿತು ತ್ವರಿತವಾಗಿ ಉನ್ನತ ತನಿಖೆ ಮಾಡಿಸುವಂತೆ ಸೂಚಿಸಿದರು.
ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆ ಮೂಲಕ ತಿಳಿಸಿರುವ ಸಿದ್ದರಾಮಯ್ಯ, ರಾಯಚೂರಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ವಿದ್ಯಾರ್ಥಿನಿ ಮಧು ಪತ್ತಾರ್ ಅವರ ಪೋಷಕರು ನನ್ನನ್ನು ಭೇಟಿ ಮಾಡಿ, ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು. ಬಾಲಕಿಯ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು, ಅಗತ್ಯವಿದ್ದರೆ ಸಿಐಡಿ ತನಿಖೆಯನ್ನು ನಡೆಸುವಂತೆ ಸ್ಥಳದಲ್ಲೇ ದೂರವಾಣಿ ಕರೆಮಾಡಿ ಗೃಹ ಸಚಿವರಿಗೆ ತಿಳಿಸಿದ್ದೇನೆ ಎಂದಿದ್ದಾರೆ.