ರಾಜ್ಯದಲ್ಲಿ ಮತ್ತೆ ಅಬ್ಬರಿಸಿದ ವರುಣ, ಸಿಡಿಲು ಬಡಿದು ಇಬ್ಬರ ಸಾವು
ವಾಯುಭಾರ ಕುಸಿತದ ಕಾರಣ ಇನ್ನೂ ಒಂದೆರಡು ದಿನ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ.
ಬೆಂಗಳೂರು: ವಾಯುಭಾರ ಕುಸಿತದ ಕಾರಣ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವರುಣ ಮತ್ತೆ ಅಬ್ಬರಿಸಿದ್ದಾನೆ. ಸ್ವಲ್ಪ ಮಟ್ಟಿಗೆ ಇಳಿಮುಖ ಕಂಡಿದ್ದ ವರುಣ ಸೋಮವಾರ ಮತ್ತೆ ಅಬ್ಬರಿಸಿದ್ದು, ಬಹುತೇಕ ಕಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಇದೇ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರಾಮನೋಡ್ಡಂಪಲ್ಲಿಯಲ್ಲಿ ಮಧ್ಯಾಹ್ನ ಜಾನುವಾರು ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದು ನರಸಿಂಹಪ್ಪ (60), ಸದಾಶಿವ (48) ಎಂಬ ಇಬ್ಬರು ಸಾವನ್ನಪ್ಪಿದ್ದಾರೆ.
ಇನ್ನು ಕೆಲವು ಕಡೆ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯ ಕಾರಣ ಕೋಟ್ಯಾಂತರ ಮೌಲ್ಯದ ಬೆಲೆ ಹಾನಿಯಾಗಿದೆ.
ವಾಯುಭಾರ ಕುಸಿತದ ಕಾರಣ ಇನ್ನೂ ಒಂದೆರಡು ದಿನ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.