ರಾಮನಗರ ಉಪ ಚುನಾವಣೆಗೆ ಬಿಗ್ ಟ್ವಿಸ್ಟ್; ಜೆಡಿಎಸ್`ಗೆ ನನ್ನ ಬೆಂಬಲ ಎಂದ ಬಿಜೆಪಿ ಅಭ್ಯರ್ಥಿ!
ನನಗೆ ಬಿಜೆಪಿ ಸಹವಾಸವೇ ಬೇಡ. ನಾನು ಮೂಲತಃ ಕಾಂಗ್ರೆಸ್ಸಿನವನು, ನನ್ನ ಸಂಪೂರ್ಣ ಬೆಂಬಲವನ್ನು ಜೆಡಿಎಸ್ ಅಭ್ಯರ್ಥಿಗೆ ನೀಡುತ್ತೇನೆ ಎಂದು ಎಲ್ಹೇ.ಚಂದ್ರಶೇಖರ್ ಹೇಳಿದ್ದಾರೆ.
ಬೆಂಗಳೂರು: ರಾಮನಗರ ಉಪನಾವನೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಲ್. ಚಂದ್ರಶೇಖರ್ ಅವರು ಇಂದು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಇದರಿಂದ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ಗೆಲುವು ಅನಾಯಾಸವಾಗಿದೆ.
ಈ ಬಗ್ಗೆ ಬೆಂಗಳೂರಿನ ಸದಾಶಿವನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಂದ್ರಶೇಖರ್, ರಾಮನಗರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನ್ನನು ಕರೆದು ಟಿಕೆಟ್ ನೀಡಿದ್ದರು. ಆದರೆ ಇದುವರೆಗೂ ನನ್ನ ಪರ ಪ್ರಚಾರಕ್ಕೆ ಯಾರೂ ಬಂದಿಲ್ಲ. ಚುನಾವಣೆ ಖರ್ಚು ವೆಚ್ಚ ನೋಡಿಕೊಲ್ಲುವುದಾಗಿಯೂ ಯಡಿಯೂರಪ್ಪ ಹೇಳಿದ್ದರು. ಆದರೆ ಈಗ ಯಾರೂ ಕೈಗೆ ಸಿಗುತ್ತಿಲ್ಲ. ಯದಿಯುರಪ್ಪ್ ಅವರು ಬಿಜೆಪಿ ಧ್ವಜ ಕೊಟ್ಟು ಬೀದಿಗೆ ಬಿಟ್ಟರು ಎಂದು ಚಂದ್ರಶೇಖರ್ ಆರೋಪಿಸಿದರು.
ಬಿಜೆಪಿಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಸಿ.ಪಿ ಯೋಗೇಶ್ವರ್ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಆರ್.ಅಶೋಕ್ ರಾಮನಗರದಲ್ಲಿ ಗಾಡಿ ನಿಲ್ಲಿಸದೇ ಮಂಡ್ಯಕ್ಕೆ ಹೋಗುತ್ತಾರೆ, ಬಳ್ಳಾರಿ, ಶಿವಮೊಗ್ಗದಲ್ಲಿ ಪ್ರಚಾರ ಮಾಡುವ ಬಿಜೆಪಿ ನಾಯಕರು, ರಾಮನಗರದಲ್ಲಿ ಬಂದು ಒಂದು ದಿನವೂ ಪ್ರಚಾರ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, 15 ದಿನದಲ್ಲಿ ಬಿಜೆಪಿ ಬಂಡವಾಳ ಬಯಲಾಗಿದೆ. ನನಗೆ ಬಿಜೆಪಿ ಸಹವಾಸವೇ ಬೇಡ. ನಾನು ಮೂಲತಃ ಕಾಂಗ್ರೆಸ್ಸಿನವನು, ನನ್ನ ಸಂಪೂರ್ಣ ಬೆಂಬಲವನ್ನು ಜೆಡಿಎಸ್ ಅಭ್ಯರ್ಥಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಈಗಾಗಲೇ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದ ಚಂದ್ರಶೇಖರ್, ಅಭ್ಯರ್ಥಿಯ ಕಷ್ಟ ಕೇಳಲಾಗದ ಪಕ್ಷ, ಶಿಸ್ತಿನ ಪಕ್ಷವೇ? ಇಡು ಬಿಜೆಪಿಯ ತತ್ವ, ಸಿದ್ಧಾಂತವೇ? ಎಂದು ಚಂದ್ರಶೇಖರ್ ಪ್ರಶ್ನಿಸಿದರು.