ಹೈಕಮಾಂಡ್ ಒಪ್ಪಿಗೆ ನೀಡಿದರೆ 200 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧ
Prabhu Chavan : ಲೋಕಸಭಾ ಕೇತ್ರದ ಸಂಸದ ಸದಸ್ಯರು ಹಾಗೂ ಕೇಂದ್ರದ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ಅವರು ಸ್ವತಃ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರು ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದು ಬಹಿರಂಗವಾಗಿದೆ.
ಬೀದರ್: ಹೀಗಿರುವಾಗ ನಾನು ಕಾಂಗ್ರೆಸ್ ನಾಯಕರ ಜೊತೆಗೆ ಸೇರಿಕೊಂಡು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದೇನೆ ಎಂದು ಆರೋಪಿಸಿರುವುದು ಗಮನಿಸಿದರೆ "ಉಲ್ಟಾ ಚೋರ್ ಕೋತ್ವಾಲ್ ಕೊ ಡಾಟೆ" ಎಂಬಂತಾಗಿದೆ. ಇತ್ತೀಚೆಗೆ ಭಗವಂತ ಖೂಬಾ ತಲೆಬುಡವಿಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರ ಬಗ್ಗೆ ಎಲ್ಲೆಡೆಯಿಂದ ಬರುತ್ತಿರುವ ಅತೃಪ್ತಿ, ಅಸಮಾಧಗಳನ್ನು ಕಂಡು ಹತಾಶರಾಗಿ ಹೀಗೆಲ್ಲ ಮಾತನಾಡುತ್ತಿದ್ದಾರೆ ಎನಿಸುತ್ತದೆ.
ನಾನು ಮೂರು ದಶಕದಿಂದ ಬಿಜೆಪಿ ನಿಷ್ಠ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷವನ್ನೇ ನನ್ನ ತಾಯಿ ಎಂದು ಭಾವಿಸಿ ನಿಷ್ಟೆಯಿಂದ ದುಡಿಯುತ್ತಿದ್ದೇನೆ. ಜನರ ಸೇವೆ, ಸಮಾಜದ ಸೇವೆಗೆ ಸಮರ್ಪಿಸಿಕೊಂಡು ಹಗಲಿರುಳು ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಔರಾದ್ ವಿಧಾನಸಭೆ ಕ್ಷೇತ್ರದ ಜನರು ನನಗೆ ನಾಲ್ಕನೇ ಬಾರಿ ಆಶೀರ್ವಾದ ಮಾಡಿ ವಿಧಾನಸಭೆಗೆ ಕಳಿಸಿದ್ದಾರೆ.
ಪಕ್ಷದ ವರಿಷ್ಠರು ನನ್ನ ಸೇವೆಗೆ ಗುರುತಿಸಿ ಎರಡು ಬಾರಿ ಮಂತ್ರಿ ಸ್ಥಾನ ಸಹ ಕೊಟ್ಟಿದ್ದಾರೆ. ಕ್ಷೇತ್ರದ ಜನರ ಋಣ, ಪಕ್ಷದ ಋಣ ತೀರಿಸಲು ಕೊನೆಯುಸಿರು ಇರುವವರೆಗೂ ದುಡಿಯುವ ಸಂಕಲ್ಪ ಮಾಡಿ ಕೆಲಸ ಮಾಡುತ್ತಿದ್ದೇನೆ. ಆದರೆ ಸದಾ ಪಕ್ಷದವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿರುವ ಭಗವಂತ ಖೂಬಾ ಅವರು ನಾನು ಹೊಂದಾಣಿಕೆ ರಾಜಕಾರಣ ಮಾಡುತ್ತಿರುವೆ ಎಂದು ಹೇಳಿ ನನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದಾರೆ. ಖೂಬಾ ಅವರ ಹೇಳಿಕೆ ನಾನು ಖಂಡಿಸುತ್ತೇನೆ.
ಅವರಿಗೆ ದಮ್ ಇದ್ದರೆ ನಾನು ಹೊಂದಾಣಿಕೆ ರಾಜಕಾರಣ ಮಾಡಿರುವುದನ್ನು ಸಾಬೀತುಪಡಿಸಲಿ. ಖೂಬಾ ನನ್ನ ವಿರುದ್ಧ ಸುಳ್ಳು, ಅರ್ಥಹೀನ ಆರೋಪ ಮಾಡಿದ್ದಾರೆ. ಈ ಬಗ್ಗೆ ವರಿಷ್ಠರ ಜೊತೆಗೆ ಮಾತನಾಡುವೆ. ವರಿಷ್ಠರು ಒಪ್ಪಿಗೆ ನೀಡಿದರೆ ಖೂಬಾ ವಿರುದ್ಧ 200 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸ್ಪಷ್ಟವಾಗಿ ಹೇಳುತ್ತೇನೆ.
ಭಗವಂತ ಖೂಬಾ ಅವರ ಹೇಳಿಕೆ ನೋಡಿದರೆ "ಬೇಲಿಯೇ ಎದ್ದು ಹೊಲ ಮೇಯ್ದಂತೆ" ಎಂಬ ಮಾತು ನೆನಪಿಗೆ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಗೆದ್ದಿರುವ ಖೂಬಾ ಲಕ್ಕಿಮ್ಯಾನ್. ಅವರಿಗೆ ಪಕ್ಷ, ಸಂಘಟನೆ ಏನೂ ಗೊತ್ತಿಲ್ಲ. ಪಕ್ಷದ ಯಾವೊಬ್ಬ ಕಾರ್ಯಕರ್ತರಿಗೂ ಬೆಳೆಸಿಲ್ಲ.
ಏನಿದ್ದರೂ ಅವರ ಪರಿವಾರ ಬೆಳೆಸುವ ಕೆಲಸ ಮಾಡಿದ್ದಾರೆ. ಇಲಾಖೆಗೊಬ್ಬ ಗುತ್ತಿಗೆದಾರರನ್ನು ತಮ್ಮ ಪರಿವಾರದವರಿಗೆ ನಿಯೋಜಿಸಿ ಹಣ ಗಳಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡುತ್ತ ಸ್ವತಃ ಕಾಂಗ್ರೆಸ್ ಇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ತಾನು ತಪ್ಪು ಮಾಡಿ ಮತ್ತೊಬ್ಬರ ಮೇಲೆ ಆರೋಪ ಹೊರಿಸುತ್ತಿರುವುದು ಸಹಿಸಲಾಗದು ಎಂದು ಎಚ್ಚರಿಕೆ ನೀಡುತ್ತೇನೆ.
ಭಗವಂತ ಖೂಬಾಗೆ ರಾಜಕೀಯಕ್ಕೆ ಕರೆತಂದು ಎಲ್ಲರಿಗೂ ಪರಿಚಯಿಸಿದ್ದವನೇ ನಾನು. 2008ರಲ್ಲಿ ನಾನು ಮೊದಲ ಬಾರಿ ಔರಾದ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಖೂಬಾ ಅವರಿಗೆ ಕ್ಷೇತ್ರದ ಚುನಾವಣೆ ಉಸ್ತುವಾರಿ ಮಾಡಲಾಯಿತು. ನಂತರ ಇತರೆ ಜವಾಬ್ದಾರಿ ಕೊಡಲಾಯಿತು. 2010ರಲ್ಲಿ ಸುಭಾಷ ಕಲ್ಲೂರ್ ಜಿಲ್ಲಾ ಅಧ್ಯಕ್ಷರಿದ್ದಾಗ ನಾನೇ ಖೂಬಾ ಅವರಿಗೆ ಜಿಲ್ಲಾ ಉಪಾಧ್ಯಕ್ಷ ಮಾಡಿಸಿದ್ದೇನೆ.
ಇನ್ನು 2014 ರಲ್ಲಿ ಲೋಕಸಭೆ ಚುನಾವಣೆ ವೇಳೆ ಇವರಿಗೆ ಬಿಜೆಪಿ ಟಿಕೆಟ್ ಕೊಡುವಂತೆ ವರಿಷ್ಠರ ಮೇಲೆ ಒತ್ತಡ ಹೇರಿದ ಮುಂಚೂಣಿಯಲ್ಲಿ ನಾನೇ ಇದ್ದೇನೆ. ಖೂಬಾಗೆ ಟಿಕೆಟ್ ಕೊಡದಿದ್ದರೆ ನಾನು ವಿಷ ಸೇವಿಸುವೆ ಎಂದು ವರಿಷ್ಠರಿಗೆ ಹೇಳಿದ್ದೇನೆ. ಖೂಬಾ ಅವರಿಗೆ ಟಿಕೆಟ್ ಸಿಕ್ಕಿದ ನಂತರ ಅವರ ಗೆಲುವಿಗಾಗಿ ತನು-ಮನ-ಧನದಿಂದ ದುಡಿದಿದ್ದೇನೆ.
ಇದನ್ನೂ ಓದಿ-ಆರು ಗಂಟೆಗಳ ಕಾಲ ನಿರಂತರ ಶೋಧಕಾರ್ಯ
ಆದರೆ ಗೆದ್ದ ಬಳಿಕ ಭಗವಂತ ಖೂಬಾ ಅಧಿಕಾರದ ದರ್ಪ, ಅಹಂಕಾರದಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಲು ಆರಂಭಿಸಿದ್ದಾರೆ. ಆರೇಳು ವರ್ಷಗಳಿಂದ ನನಗೆ ನನಗೆ ಎಲ್ಲಿಲ್ಲದ ಟಾರ್ಚರ್ ಕೊಡುತ್ತಿದ್ದಾರೆ. ಇವರಿಗೆ ಪಕ್ಷ, ಪಕ್ಷದ ಕಾರ್ಯಕರ್ತರು, ನಾಯಕರ ಬಗ್ಗೆ ಕಿಂಚಿತ್ತು ಕಾಳಜಿ, ಕಳಕಳಿ ಇಲ್ಲ ಎಂಬುದಕ್ಕೆ ನಾನೇ ಉದಾಹರಣೆ ಆಗಿದ್ದೇನೆ.
ಭಾರತಕ್ಕೆ ವಿಶ್ವ ಗುರುವಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹಗಲಿರುಳು ದುಡಿಯುತ್ತಿದ್ದಾರೆ. ವಿಶ್ವ ಮೆಚ್ಚಿದ ನಾಯಕರಾಗಿದ್ದಾರೆ. ಆದರೆ ಇಂಥ ಮಹಾನ್ ನಾಯಕರಿರುವ ಕೇಂದ್ರ ಸಚಿವ ಸಂಪುಟದಲ್ಲಿ ಬಿಜೆಪಿಗೇ ದ್ರೋಹ ಬಗೆಯುತ್ತಿರುವ ಭಗವಂತ ಖೂಬಾ ಅವರು ಸಚಿವರಾಗಿರುವುದು ಅತ್ಯಂತ ನೋವು ತಂದಿದೆ.
ತಾಯಿಗೆ ಸಮಾನ ಎಂದು ತಿಳಿದು ನಾವೆಲ್ಲ ಬಿಜೆಪಿಯಲ್ಲಿ ಸಕ್ರಿಯವಾಗಿದ್ದೇವೆ. ಆದರೆ ಬಿಜೆಪಿಯಲ್ಲೇ ಇದ್ದುಕೊಂಡು, ಬಿಜೆಪಿಯ ವಿರುದ್ಧವಾಗಿ ಕೆಲಸ ಮಾಡುವ ಮೂಲಕ ಭಗವಂತ ಖೂಬಾ ಅವರು ತಾಯಿಗೆ ಧೋಖಾ ಮಾಡಿದ್ದಾರೆ. ಇಂಥವರು ಸರ್ಕಾರದ ಉನ್ನತ ಸ್ಥಾನದಲ್ಲಿ ಇದ್ದಿರುವುದು ಸೋಜಿಗದ ಸಂಗತಿ ಎನಿಸಿದೆ. ಇದು ಬಿಜೆಪಿಯ ನಿಷ್ಠಾವಂತ ಅಸಂಖ್ಯಾತ ಕಾರ್ಯಕರ್ತರಿಗೆ ಆಘಾತ ತಂದಿದೆ.
ಭಗವಂತ ಖೂಬಾ ಅವರಿಗೆ ಸ್ವಂತ ವರ್ಚಸ್ಸು ಇಲ್ಲ. ಸಂಘಟನಾ ಶಕ್ತಿ ಇಲ್ಲವೇ ಇಲ್ಲ. ಮೋದಿಜೀ ಅಲೆಯಲ್ಲಿ ಗೆದ್ದಿದ್ದೇನೆ. ಇನ್ಮುಂದೆ ನನಗ್ಯಾರೂ ಕೈಹಿಡಿಯುವವರಿಲ್ಲ ಎಂದು ದರ್ಪದ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಸ್ವಾರ್ಥ, ವೈಯಕ್ತಿಕ ಸ್ವಾರ್ಥಕ್ಕಾಗಿ ತಮ್ಮದೇ ಗುಂಪು ಕಟ್ಟಿಕೊಂಡು ತಿರುಗುತ್ತಿದ್ದಾರೆ. ಅನೇಕರ ತ್ಯಾಗ, ಶ್ರಮದಿಂದ ಬೀದರ್ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಲಾಗಿದೆ. ಆದರೆ ಖೂಬಾ ಸಂಸದ, ಸಚಿವರಾದ ಮೇಲೆ ಬೀದರ್ ಬಿಜೆಪಿ ಒಡೆದು ಹೋಳಾಗಿದೆ. ನಿತ್ಯ ಗುಂಪುಗಾರಿಕೆ ಮಾಡುವ ಮೂಲಕ ಖೂಬಾ ಅವರು ಜಿಲ್ಲೆಯಲ್ಲಿ ಬಿಜೆಪಿ ಹಾಳು ಮಾಡಲು ಮುಂದಾಗಿದ್ದಾರೆ.
ತೀರ ಹಿಂದುಳಿದ ಲಂಬಾಣಿ(ಬAಜಾರಾ) ಸಮುದಾಯಕ್ಕೆ ಸೇರಿದ ನಾನು ಔರಾದ್ ಪರಿಶಿಷ್ಟ ಜಾತಿ(ಎಸ್‌ಸಿ) ಮೀಸಲು ವಿಧಾನಸಭೆ ಕ್ಷೇತ್ರದಿಂದ 2008, 2013, 2018 ಹಾಗೂ 2023ರಲ್ಲಿ ಸತತ ನಾಲ್ಕನೇ ಬಾರಿ ಜಯ ಗಳಿಸಿದ್ದೇನೆ. ಕ್ಷೇತ್ರದ ಜನರನ್ನೇ ದೇವರೆಂದು ನಂಬಿ ಕೆಲಸ ಮಾಡುತ್ತಿರುವ ಕಾರಣ ಜನರು ನನಗೆ ಸತತ ಆಶೀರ್ವಾದ ಮಾಡುತ್ತಿದ್ದಾರೆ.
ಇದಕ್ಕೆ ನಾನು ಚಿರಋಣಿಯಾಗಿರುವೆ. ನನ್ನ ಉಸಿರು ಇರುವವರೆಗೆ ಕ್ಷೇತ್ರ ಜನರ ಸೇವೆ ಮಾಡುತ್ತೇನೆ. ಎಲ್ಲರ ಹಿತ, ಅಭಿವೃದ್ಧಿಯ ಮಂತ್ರದೊAದಿಗೆ ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ಸೇವೆ ಪರಿಗಣಿಸಿ ಮಾನ್ಯ ಬಿ.ಎಸ್.ಯಡಿಯೂರಪ್ಪಾಜೀ ಹಾಗೂ ಮಾನ್ಯ ಬಸವರಾಜ ಬೊಮ್ಮಾಯಿಜೀ ಸರ್ಕಾರದಲ್ಲಿ ಪಶು ಸಂಗೋಪನೆಯ ಸಚಿವನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಈ ವೇಳೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಸೇರಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದೇನೆ.
2018ರ ಚುನಾವಣೆ ವೇಳೆ ಭಗವಂತ ಖೂಬಾ ಅವರು ನನಗೆ ಟಿಕೆಟ್ ಸಿಗದಂತೆ ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ಪಕ್ಷದ ವರಿಷ್ಠರು ನನ್ನ ಕಾರ್ಯ, ಪಕ್ಷನಿಷ್ಠೆ ಮನ್ನಿಸಿ ಟಿಕೆಟ್ ಕೊಟ್ಟರು. ನನಗೆ ಸೋಲಿಸುವ ದುರುದ್ದೇಶದಿಂದ ಭಗವಂತ ಖೂಬಾ ಅವರು ಕ್ಷೇತ್ರದಲ್ಲಿ ಸಾಕಷ್ಟು ಕುತಂತ್ರಗಳು ಮಾಡಿದರು. ಆದರೆ ಮತದಾರರು ಖೂಬಾ ಮತ್ತು ಅವರ ಟೀಮ್ ಕುತಂತ್ರ ಅರಿತು ನನಗೆ ಭರ್ಜರಿ ಜಯ ತಂದುಕೊಟ್ಟು ಖೂಬಾ ಅವರಿಗೆ ಮುಖಭಂಗ ಮಾಡಿದರು. ಇಷ್ಟಾದರೂ ಖೂಬಾ ಬಿದ್ದರೆ ಮೀಸೆ ಮಣ್ಣಾಗಿಲ್ಲ ಎಂಬAತೆ ಸತತ ನನಗೆ ಕಿರುಕುಳ ನೀಡುವ ಪ್ರಯತ್ನ ಮಾಡಿದರು. ನಾನು ಸಚಿವನಾಗಿದ್ದ ವೇಳೆ ಉತ್ತಮವಾಗಿ ಕೆಲಸ ಮಾಡದಂತೆ ನಿರಂತರ ಟಾರ್ಚರ್ ನೀಡಿದ್ದಾರೆ.
2023ರ ಚುನಾವಣೆ ಸಂದರ್ಭದಲ್ಲಿ ಸಹ ಭಗವಂತ ಖೂಬಾ ಅವರು ನನ್ನ ಟಿಕೆಟ್ ಕಟ್ ಮಾಡಲು ಸಾಕಷ್ಟು ಯತ್ನ ಮಾಡಿದರು. ಖೂಬಾ ಅವರ ನಿರ್ದೇಶನದಂತೆಯೇ ಅವರ ಕೆಲ ಚೇಲಾಗಳು ನನ್ನ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಿದರು. ಟಿಕೆಟ್ ಕೊಡದಂತೆ ಒತ್ತಾಯಿಸಿದರು. ನನ್ನ ವಿರುದ್ಧ ಕೆಲಸ ಮಾಡುವವರಿಗೆ ಸ್ವತಃ ಖೂಬಾ ಅವರೇ ಸದಾ ಪ್ರೇರಣೆ ನೀಡುತ್ತ ಬಂದಿದ್ದಾರೆ. ಖೂಬಾ ಮತ್ತವರ ಟೀಮ್ ಮಾಡಿದ ಷಡ್ಯಂತ್ರಕ್ಕೆ ವರಿಷ್ಠರು ತಲೆಕೆಡಿಸಿಕೊಳ್ಳದೇ ಪಕ್ಷ ನಿಷ್ಠನಾದ ನನಗೆ ಮತ್ತೆ ಟಿಕೆಟ್ ಕೊಟ್ಟರು. ಜನರ ಆಶೀರ್ವಾದಿಂದ ಈ ಚುನಾವಣೆಯಲ್ಲಿ ಸಹ ಗೆದ್ದು ಬಂದಿದ್ದೇನೆ.
ಆದರೆ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಭಗವಂತ ಖೂಬಾ ಭಾರಿ ಪ್ರಯತ್ನ ಮಾಡಿದರು. 33 ಬೆಂಬಲಿಗರಿಗೆ ಪಕ್ಷ ವಿರೋಧಿ ಕೆಲಸಕ್ಕೆ ಸಿದ್ಧಮಾಡಿದರು. 300 ಜನರ ಗುಂಪು ಕಟ್ಟಿಸಿ ನನ್ನ ವಿರುದ್ಧ ಪ್ರಚಾರ ಮಾಡಿಸಿದರು. ಕಾಂಗ್ರೆಸ್ ಅಭ್ಯರ್ಥಿಗೆ ಎಲ್ಲ ರೀತಿಯಿಂದ ಗೆಲ್ಲಿಸಲು ಸಹಕಾರ ನೀಡಿರುವುದು ರಹಸ್ಯವಾಗಿ ಉಳಿದಿಲ್ಲ. ಇವತ್ತು ಅದೇ ಪಕ್ಷ ವಿರೋಧಿಗಳನ್ನು ತಮ್ಮ ಜೊತೆಯಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ ಇದು ಪಕ್ಷನಿಷ್ಟೆನಾ ?
ನನಗೆ ಅವಿರತವಾಗಿ ಟಾರ್ಚರ್ ಮಾಡಿ ಕಿರುಕುಳ ಕೊಟ್ಟು ಬಿಜೆಪಿಗೇ ದ್ರೋಹ ಬಗೆದಿದ್ದಾರೆ. ಖೂಬಾ ಅವರು ಪಕ್ಷ ದ್ರೋಹಿ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನ ಮೇಲೆ ಎರಡು ಬಾರಿ ಸಂಸದರಾದ ಅವರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧವೇ ಕೆಲಸ ಮಾಡಿ ಮೋದಿ ಅವರಿಗೂ ದ್ರೋಹ ಮಾಡಿದ್ದಾರೆ.
ಪಕ್ಷದಲ್ಲಿದ್ದುಕೊಂಡೇ ಮೇಲಾಗಿ ಕೇಂದ್ರ ಸಚಿವ ಸಂಪುಟದ ಸದಸ್ಯರಾಗಿ ಉನ್ನತ, ಜವಾಬ್ದಾರಿಯುತವಾದ ಸ್ಥಾನದಲ್ಲಿರುವ ಖೂಬಾ ಅವರು ಈ ರೀತಿ ಪಕ್ಷದ ವಿರುದ್ಧ ಕೆಲಸ ಮಾಡಿರುವುದು ದುರಂತದ ಸಂಗತಿ. ಇಂಥ ಸಂಸದರನ್ನು ದೇಶದ ಇತಿಹಾಸದಲ್ಲಿಯೇ ನಾನು ನೋಡಿಲ್ಲ. ಔರಾದ್‌ನಲ್ಲಿ ನನ್ನ ಸೋಲಿಗೆ ಇನ್ನಿಲ್ಲದ ಪ್ರಯತ್ನ ಮಾಡಿದರು.
ಇದನ್ನೂ ಓದಿ-ವಿ.ಸೋಮಣ್ಣನವರೇ ಸಂತೋಷ ಕೂಟದ ಪ್ರಯತ್ನಕ್ಕೆ ನೀವು 3ನೇ ಬಲಿಪಶು: ಕಾಂಗ್ರೆಸ್
ಆದರೆ ಜನಾಶೀರ್ವಾದ ನನಗಿದ್ದ ಕಾರಣದಿಂದ ಖೂಬಾ ಯಾವುದೇ ಆಟ ನಡೆಯಲಿಲ್ಲ. ಈ ಚುನಾವಣೆ ಕಾಂಗ್ರೆಸ್ ವರ್ಸೆಸ್ ಬಿಜೆಪಿ ಆಗಿರಲಿಲ್ಲ. ಇದು ಬಿಜೆಪಿ ನಿಷ್ಠಾವಂತರ ತಂಡ ವರ್ಸೆಸ್ ಭಗವಂತ ಖೂಬಾ ಮಧ್ಯೆದ ಚುನಾವಣೆ ಆಗಿತ್ತು. ಆದರೆ ಜನತೆ ಈ ಯುದ್ದದಲ್ಲಿ ನನ್ನ ಕೈಬಿಡಲಿಲ್ಲ. ಖೂಬಾ ಅವರು ನನಗೆ ಕೊಟ್ಟ ಟಾರ್ಚರ್ ಅಷ್ಟಿಷ್ಟಲ್ಲ. ಔರಾದ್ ಮಾತ್ರವಲ್ಲದೆ ಬೀದರ್ ಉತ್ತರ ಕ್ಷೇತ್ರ, ಆಳಂದ ವಿಧಾನಸಭೆ ಕ್ಷೇತ್ರಗಳಲ್ಲಿ ಸಹ ಬಿಜೆಪಿ ವಿರುದ್ಧವೇ ಖೂಬಾ ಕೆಲಸ ಮಾಡಿದ್ದಾರೆ.
ಬಿಜೆಪಿಯಲ್ಲಿದ್ದುಕೊಂಡು ಬಿಜೆಪಿ ವಿರುದ್ಧ ಕೇಂದ್ರ ಸಚಿವರೇ ಕೆಲಸ ಮಾಡುವುದೆಂದರೆ ಪಕ್ಷಕ್ಕೆ, ಸಮಾಜಕ್ಕೆ ಇವರು ಏನು ಸಂದೇಶ ಕೊಡುತ್ತಿದ್ದಾರೆ? ಎಂಬ ಪ್ರಶ್ನೆ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಕಾಡುತ್ತಿದೆ. ಬಿಜೆಪಿ ವರಿಷ್ಠರು ಭಗವಂತ ಖೂಬಾ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೆಸರು ಹಾಕಿದ್ದರು. ಆದರೆ ಖೂಬಾ ಅವರು ಔರಾದ್ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲೇ ಇಲ್ಲ. ಹೈಕಮಾಂಡ್‌ಗಿAತ ಖೂಬಾ ದೊಡ್ಡವರಾ? ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷಕ್ಕಿಂತ ರಾಷ್ಟç ದೊಡ್ಡದು ಎಂಬ ತತ್ವದಲ್ಲಿ ಬಿಜೆಪಿ ನಡೆಯುತ್ತಿದೆ. ಆದರೆ ಭಗವಂತ ಖೂಬಾ ಅವರಿಗೆ ಇದ್ಯಾವುದು ಅನ್ವಯವೇ ಇಲ್ಲ ಎಂಬಂತಾಗಿದೆ.
ಖೂಬಾ ಅವರು ಮುಂದೆ ಪಕ್ಷ ಹಾಗೂ ಪಕ್ಷದ ವರಿಷ್ಟರ ಆದೇಶಗಳಿಗೆ ಬೆಲೆ ಇಲ್ಲದಂತಾಗಿದೆ. ಸ್ಟಾರ್ ಪ್ರಚಾರಕರಾಗಿದ್ದುಕೊಂಡು ಅದೇ ಪಕ್ಷದ ವಿರುದ್ಧವೇ ಕೆಲಸ ಮಾಡಿದರೆ ಗತಿ ಏನು? ಖೂಬಾ ಅವರಂಥ ಪಕ್ಷ ವಿರೋಧಿಗಳ ಮೇಲೆ ಕೂಡಲೇ ಕ್ರಮ ಜರುಗಿಸುವ ಅಗತ್ಯವಿದೆ. ಇಲ್ಲದಿದ್ದರೆ ಬರುವ ಕೆಲವೇ ದಿನಗಳಲ್ಲಿ ಬೀದರ್ ಜಿಲ್ಲೆಯ ಬಿಜೆಪಿಗೆ ಬಹುದೊಡ್ಡ ಡ್ಯಾಮೇಜ್ ಆಗುವುದು ಖಚಿತವೆನಿಸುತ್ತಿದೆ.
ಭಗವಂತ ಖೂಬಾ ಅವರಲ್ಲಿ ರಾಜಕೀಯದ ಸ್ವಸಾಮರ್ಥ್ಯ, ಸ್ವಶಕ್ತಿ ಏನೂ ಇಲ್ಲ. ಸುಮ್ಮನೆ ಮೋದಿ ಜೀ ಅವರ ಹೆಸರಿನ ಮೇಲೆ ಗೆದ್ದು ಬರುತ್ತಿದ್ದಾರೆ. ಕೇಂದ್ರದ ಮುಂದೆ ಏನೇನೋ ಸುಳ್ಳು ಹೇಳಿ, ಷಡ್ಯಂತ್ರ ಮಾಡಿಕೊಂಡು ಸಚಿವರಾಗಿದ್ದಾರೆ. ಆದರೆ ಸಚಿವರಾದ ಮೇಲೆ ಏನೇನೂ ಕೆಲಸ ಮಾಡಿಲ್ಲ. ಕೇವಲ ಮಜಾ ಮಾಡಲು, ಪಕ್ಷದ ವಿರುದ್ಧ ಕೆಲಸ ಮಾಡಲು ಇವರು ಮಂತ್ರಿ ಆದಂತಿದೆ. ಇವರ ಅವಧಿಯಲ್ಲಿ ಬೀದರ್ ಜಿಲ್ಲೆಯಲ್ಲಿ ನಡೆದಿರುವ ಪ್ರಮುಖ ರಾಷ್ಟಿçÃಯ ಹೆದ್ದಾರಿ ಕೆಲಸ ಸಂಪೂರ್ಣ ಕಳಪೆಯಾಗಿವೆ. ನೂರಾರು ಕೋಟಿ ಖರ್ಚು ಮಾಡಿದರೂ ಹೆದ್ದಾರಿ ಸರಿಯಾಗಿ ಮಾಡಿಲ್ಲ. ಈ ಬಗ್ಗೆ ಖೂಬಾ ಅವರು ಒಮ್ಮೆಯೂ ಚಕಾರ ಎತ್ತಿಲ್ಲ. ಇವರು ಸುಮ್ಮನಿರುವುದು ನೋಡಿದರೆ ಗುತ್ತಿಗೆ ಸಂಸ್ಥೆಯವರೊAದಿಗೆ ಏನಾದರೂ ಡೀಲ್ ಮಾಡಿಕೊಂಡಿದ್ದಾರಾ? ಎಂಬ ಪ್ರಶ್ನೆ, ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ.
ಔರಾದ್‌ನ ಆರಾಧ್ಯದೈವ ಅಮರೇಶ್ವರ ದೇವಸ್ಥಾನದ ಮಹಾದ್ವಾರ ನಿರ್ಮಾಣ ಕೆಲಸಕ್ಕೆ ಟ್ರಸ್ಟ್ನವರ ಜೊತೆಗೆ ಚರ್ಚಿಸಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಅಧಿಕಾರಿಗಳಿಗೆ ಕರೆ ಮಾಡಿ ಕೆಲಸ ನಿಲ್ಲಿಸಿದ್ದೀರಿ. ನಂತರ ನಾನು ಕೇತ್ರದಲ್ಲಿರದ ವೇಳೆ ನೀವು ಮತ್ತೊಮ್ಮೆ ಭೂಮಿ ಪೂಜೆ ಮಾಡುತ್ತೀರಿ, ನನಗೂ ಕೆಲಸ ಮಾಡಲು ಬಿಡದೇ ನೀವಾದರೂ ಏಕೆ ಆರಂಭಿಸಿಲ್ಲ. ಪವಿತ್ರ ದೇವಸ್ಥಾನದ ವಿಷಯದಲ್ಲಿಯೂ ರಾಜಕೀಯ ಮಾಡುವುದನ್ನು ಜನತೆಯಷ್ಟೇ ಅಲ್ಲ ದೇವರು ಕೂಡ ಕ್ಷಮಿಸಲಾರ.
ನಾನು ಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಸತತವಾಗಿ ಖೂಬಾ ಅವರು ಅಡ್ಡಗಾಲು ಹಾಕಿದ್ದಾರೆ. ಬೀದರ್-ಕಮಲನಗರ ಸಿಮೆಂಟ್ ರಾಷ್ಟಿçÃಯ ಹೆದ್ದಾರಿ ಕೆಲಸ ತೀರ ಕಳಪೆ ನಡೆದಿದೆ ಎಂದು ಜನತೆ ಹಾಗೂ ಸಂಘ ಸಂಸ್ಥೆಗಳು ಆರೋಪಿಸುತ್ತಿವೆ. ಕೆಲಸ ಮಾಡಿದ ವರ್ಷದಲ್ಲೇ ಹಾಳಾಗಿದ್ದು, ಈಗ ಅನೇಕ ಕಡೆ ಬಿರುಕು ಬಿಟ್ಟು ದುರಸ್ತಿಗೆ ಬಂದಿದೆ. ಇದು ಎಂಥ ವ್ಯವಸ್ಥೆ? ನಮ್ಮ ಕೆಲಸದಲ್ಲಿ ಮೂಗು ತೂರಿಸುವ ಖೂಬಾ ಅವರು ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನದಲ್ಲಿ ಆದ್ಯತೆ ನೀಡಿಲ್ಲ. ಬೀದರ್-ಔರಾದ್ ರಾಷ್ಟಿçÃಯ ಹೆದ್ದಾರಿ, ಬೀದರ್-ಹುಮನಾಬಾದ್ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಸಹ ಕಳಪೆ ನಡೆದಿದೆ. ಏಕೆ ಖೂಬಾ ಸುಮ್ಮನಿದ್ದಾರೆ ಹೇಳಲಿ? ನನ್ನ ಹೆಸರು ಹಾಳು ಮಾಡಲು ರಾಜ್ಯ ಸರ್ಕಾರದ ಹಲವು ಯೋಜನೆಗಳ ಅನುಷ್ಠಾನಕ್ಕೆ ಖೂಬಾ ಅಡ್ಡಗಾಲು ಹಾಕಿದ್ದಾರೆ.
ಔರಾದ್ ತಾಲೂಕಿನ 200 ಕೋಟಿ ರೂ. ಜೆಜೆಎಂ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಅಡ್ಡಿ ಮಾಡಿದ್ದಾರೆ. ಈ ಕಾಮಗಾರಿ ಟೆಂಡರ್‌ಗಳನ್ನು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಐದಾರು ಬಾರಿ ರೀ ಟೆಂಡರ್ ಮಾಡಿಸಿದ್ದಾರೆ. ನಾನು ಕೆಲಸ ಮಾಡಿಲ್ಲ ಎಂದು ಗೂಬೆ ಕೂರಿಸಲು ಈ ರೀತಿ ಖೂಬಾ ಮಾಡಿದ್ದಾರೆ. ಔರಾದ್‌ನಲ್ಲಿ ಕೇಂದ್ರ-ರಾಜ್ಯ ಸರ್ಕಾರದ ಸಹಭಾಗಿತ್ವದ ಸಿಪೆಟ್ ಕಾಲೇಜು ಆರಂಭಕ್ಕೆ ಚಾಲನೆ ನೀಡಿ ಒಂದು ವರ್ಷವಾಗಿದೆ. ಆದರೆ ಈವರೆಗೆ ಕಾಮಗಾರಿ ಆರಂಭಗೊAಡಿಲ್ಲ. ಖೂಬಾ ಅವರು ಇದರ ಬಗ್ಗೆ ಒಂದೂ ಮಾತನಾಡಿಲ್ಲ. ಬದಲಾಗಿ ನಿತ್ಯ ಸುಳ್ಳು ಹೇಳುತ್ತ ಜನರಿಗೆ ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ. ಭಗವಂತ ಖೂಬಾ ಸದಾ ಸ್ವಾರ್ಥ ಸಾಧನೆ ಮಾಡಿಕೊಂಡವರು. ಅವರೊಬ್ಬ ಅವಕಾಶವಾದಿ, ಸಮಯಸಾಧಕ ರಾಜಕಾರಣಿ. ಸದಾ ತಮ್ಮ ಹಿತವನ್ನೇ ನೋಡಿದ್ದಾರೆ.
ನನ್ನ ಜತೆಯಲ್ಲಿದ್ದ ಹಲವಾರು ಕಾರ್ಯಕರ್ತರು, ಮುಖಂಡರನ್ನು ಬೆಳೆಸಿದ್ದೇನೆ. ಆದರೆ ಭಗವಂತ ಖೂಬಾ ಅವರು ತಮ್ಮ 9 ವರ್ಷದ ಅವಧಿಯಲ್ಲಿ ಯಾರಿಗೂ ಬೆಳೆಸಿಲ್ಲ. ನಾನು ಸಣ್ಣ, ಹಿಂದುಳಿದ ಲಂಬಾಣಿ ಜಾತಿಗೆ ಸೇರಿದವನಾದ ಕಾರಣ ಭಗವಂತ ಖೂಬಾ ಅವರು ಅನೇಕ ಬಾರಿ ಹೀಯಾಳಿಸಿದ್ದಾರೆ. ಅವರು ಮೇಲ್ವರ್ಗದವರಾದ ಕಾರಣ ಕೆಳ ವರ್ಗದವರಿಗೆ ಅತೀ ಕೀಳಾಗಿ ಕಾಣುತ್ತಾರೆ. ಕೇಂದ್ರ ಸಚಿವರಾಗಿದ್ದುಕೊಂಡು ಜಾತಿವಾದಿತನ ಮಾಡುವುದು ಖಂಡನೀಯ. ಇಂಥವರು ಕೇಂದ್ರ ಸಂಪುಟದಲ್ಲೇ ಇದ್ದಿರುವುದು ದುರಂತದ ಸಂಗತಿ ಎನಿಸಿದೆ.
ಭಗವಂತ ಖೂಬಾ ಅವರ ಮನಸ್ಥಿತಿ ಸರಿಯಿಲ್ಲ. ಇತ್ತೀಚೆಗೆ ಬೀದರ್ ಬಿಜೆಪಿಯನ್ನೇ ಇವರು ಹಾಳು ಮಾಡುತ್ತಿದ್ದಾರೆ. ಪಕ್ಷದ ಸಂಘಟನೆ ಮಾಡುವುದೇ ಖೂಬಾ ಮರೆತಿದ್ದಾರೆ. ವಿವಿಧ ಜಿಲ್ಲೆಗಳಿಗೆ ಭೇಟಿ ಮಾಡಿಲ್ಲ. ಎಲ್ಲೂ ಕಾರ್ಯಕರ್ತರ ಭೇಟಿ ಮಾಡಿಲ್ಲ. ಸಚಿವರಾಗಿರುವುದು ಅವರ ಮನೆ ಕೆಲಸ ಮಾಡಿಕೊಳ್ಳಲು ಮಾತ್ರ ಸೀಮಿತವಾಗಿದೆ. ಕೇಂದ್ರ ಮಂತ್ರಿ ಆಗಿದ್ದುಕೊಂಡು ಬಿಜೆಪಿ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ.
ಭಗವಂತ ಖೂಬಾ ಅವರ ಜೊತೆಗಿರುವ ಜನರು ಸರಿಯಿಲ್ಲ. ಕೆಲ ಗುಂಡಾಗಳನ್ನು ಖೂಬಾ ಅವರು ಇಟ್ಟುಕೊಂಡು ಎಲ್ಲ ಕಡೆ ಸುತ್ತಾಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಇವರಿಂದ ನನ್ನ ಜೀವಕ್ಕೂ ಅಪಾಯ ಬರಬಹುದಾಗಿದೆ. ಈ ಆತಂಕ ನನಗೆ ಕಾಡುತ್ತಿದೆ. ಖೂಬಾ ಅವರು ನೀಚ ಮನಸ್ಥಿತಿ ಹೊಂದಿದ್ದಾರೆ. ಅವರಲ್ಲಿ ಬಿಜೆಪಿ ತತ್ವ, ಸಿದ್ಧಾಂತಗಳೇ ಇಲ್ಲ. ಅವರಲ್ಲಿ ಕಾಂಗ್ರೆಸ್ ಸಂಸ್ಕೃತಿ ಹಾಸುಹೊಕ್ಕಿವೆ. ಇವರ ಕುಟುಂಬ ಮೂಲತಃ ಕಾಂಗ್ರೆಸ್ ನಿಂದ ಬಂದಿರುವುದೇ ಇದಕ್ಕೆ ಕಾರಣ.
ಕೇವಲ ಕೇವಲ ನರೇಂದ್ರ ಮೋದಿಜೀ ಅವÀರ ಹೆಸರಿನಲ್ಲಿ ಭಗವಂತ ಖೂಬಾ ಗೆಲ್ಲುತ್ತಿದ್ದಾರೆ. ಅವರ ಸ್ವಶಕ್ತಿ, ಸ್ವಸಾಮರ್ಥ್ಯ ಏನೂ ಇಲ್ಲ. ಬೇಕಾದರೆ ಈ ಬಗ್ಗೆ ತಾವು ಖುದ್ದು ಮಾಹಿತಿ ಪಡೆದು ಅರಿತುಕೊಳ್ಳಬೇಕು. ನಾವೆಲ್ಲ ಅವರ ಚುನಾವಣೆಯಲ್ಲಿ ಹಗಲಿರುಳು ಕೆಲಸ ಮಾಡಿ ಗೆಲ್ಲಿಸಲು ಪ್ರಯತ್ನಿಸುತ್ತೇವೆ. ಆದರೆ ಖೂಬಾ ಅವರು ಮಾತ್ರ ನಮ್ಮ ಚುನಾವಣೆಯಲ್ಲಿ ಸೋಲಿಸಲು ಅವಿರತ ಪ್ರಯತ್ನ ಮಾಡುತ್ತಾರೆ. ಇಂಥ ಪಕ್ಷ ವಿರೋಧಿ ಕೆಲಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಕೆಲ ವರ್ಷಗಳಲ್ಲಿ ಖೂಬಾ ಅವರು ಬೀದರ್ ಬಿಜೆಪಿಯಲ್ಲಿ ಗುಂಪುಗಾರಿಕೆ, ಭಿನ್ನಮತ ಸೃಷ್ಟಿಸಿದ್ದಾರೆ.
ಅವರಿಂದ ಪಕ್ಷಕ್ಕೆ, ಜಿಲ್ಲೆಗೆ, ಸಮಾಜಕ್ಕೆ ಏನೇನೂ ಲಾಭ ಇಲ್ಲ. ಮೇಲಾಗಿ ಪಕ್ಷ ವಿರೋಧಿ ಕೆಲಸಗಳು ಮಾಡುತ್ತ, ಪಕ್ಷಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಇದೆಲ್ಲ ವಾಸ್ತವ ಜನರು ಅರಿತಿರುವ ಕಾರಣಕ್ಕೆ ಎಲ್ಲೆಡೆ ಅವರ ವಿರೋಧಿ ಅಲೆ ಎದ್ದಿದೆ. ಇಂಥ ಸಂಸದರು, ಸಚಿವರೇ ನಮಗೆ ಬೇಡ ಎಂದು ಹೇಳುತ್ತಿದ್ದಾರೆ. ಹೀಗಾಗಿ ವರಿಷ್ಠರು ಇತ್ತ ಚಿತ್ತ ಹರಿಸಿ, ವಾಸ್ತವ ಏನಿದೆ ಎಂಬುದು ಅರಿಯಬೇಕು. ಬೀದರ್ ಕ್ಷೇತ್ರದಿಂದ ಮತ್ತೆ ಬಿಜೆಪಿ ಗೆಲ್ಲಬೇಕು, ಮೋದಿಜೀ ಅವರ ಕೈ ಬಲಪಡಿಸಬೇಕು ಎಂದಾದರೆ ಯಾವುದೇ ಕಾರಣಕ್ಕೂ 2024ರ ಚುನಾವಣೆಯಲ್ಲಿ ಭಗವಂತ ಖೂಬಾ ಅವರಿಗೆ ಟಿಕೆಟ್ ನೀಡಬಾರದು.
ಖೂಬಾ ಬದಲಾಗಿ ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್ ನೀಡಿ ಹೊಸ ಅಧ್ಯಾಯ ಆರಂಭಿಸಬೇಕು. ಭಗವಂತ ಖೂಬಾ ಅವರ ವಿರುದ್ಧ ಬೇಗ ಕ್ರಮ ಕೈಗೊಂಡಷ್ಟು ಪಕ್ಷದ ಡ್ಯಾಮೇಜ್ ಕಂಟ್ರೋಲ್ ಅಷ್ಟು ಹೆಚ್ಚೆಚ್ಚು ಮಾಡಬಹುದು ಎಂಬುದು ಪಕ್ಷ ನಿಷ್ಠ ಕಾರ್ಯಕರ್ತರ ಬೇಡಿಕೆಯಾಗಿದೆ.
ಬಸವಕಲ್ಯಾಣ ಶಾಸಕರಾದ ಶರಣು ಸಲಗರ ಅವರು ಮರಾಠ ಸಮಾಜಕ್ಕೆ ಎಂಪಿ ಟಿಕೆಟ್ ನೀಡಬೇಕೆಂಬ ಆಗ್ರಹ ಮಾಡಿದ್ದಾರೆ. ಬರುವ ದಿನಗಳಲ್ಲಿ ಪಕ್ಷದ ಇನ್ನಷ್ಟು ನಾಯಕರು, ಕಾರ್ಯಕರ್ತರು ಈ ಬೇಡಿಕೆ ಮಂಡಿಸುವ ಸಾಧ್ಯತೆಗಳಿವೆ. ನಾನು ಪಕ್ಷದ ವಿರುದ್ಧ ಯಾವುದೇ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ಪಕ್ಷ ವಿರೋಧಿ ಕೆಲಸ ಮಾಡುತ್ತಿರುವವರ ವಿರುದ್ಧ ನಿರಾತಂಕವಾಗಿ ಧ್ವನಿ ಎತ್ತುವೆ. ನನಗೆ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಹೇಳಬಯಸುತ್ತೇನೆ.
- ಪ್ರಭು ಚವ್ಹಾಣ್
ಔರಾದ್ ಬಿಜೆಪಿ ಶಾಸಕರು ಹಾಗೂ
ಮಾಜಿ ಪಶು ಸಂಗೋಪನೆ ಸಚಿವರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.