ಇಂದು ವಿಧಾನ ಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಸ್ಮರಣಾರ್ಥ ದಿನ
ಇಂದು ಆಧುನಿಕ ಕರ್ನಾಟಕದ ನಿರ್ಮಾತೃಗಳಲ್ಲಿ ಒಬ್ಬರಾದ ಕೆಂಗಲ್ ಹನುಮಂತಯ್ಯನವರು 38 ಸ್ಮರಣಾರ್ಥ ದಿನ. ಹೆಚ್ಚಾಗಿ ಇವರನ್ನು ವಿಧಾನ ಸೌಧದ ನಿರ್ಮಾಣಕ್ಕಾಗಿ ಸ್ಮರಿಸಲಾಗುತ್ತದೆ. ರಾಜ್ಯದ ಎರಡನೇ ಮುಖ್ಯಮಂತ್ರಿಯೂ ಆಗಿ ಕಾರ್ಯನಿರ್ವಹಿಸಿದ್ದ ಇವರು ರಾಜ್ಯದ ಏಕೀಕರಣಕ್ಕಾಗಿ ಹೋರಾಟವನ್ನು ನಡೆಸಿದರು.
ಸ್ವತಂತ್ರ ಭಾರತದ ಪ್ರಮುಖ ರಾಜಕಾರಣಿಗಳಲ್ಲಿ ಕೆಂಗಲ್ ಹನುಮಂತಯ್ಯನವರು ಒಬ್ಬರು.ಬೆಂಗಳೂರು ಜಿಲ್ಲೆಯಲ್ಲಿನ ಲಕ್ಕಪ್ಪನಪಳ್ಳಿಯಲ್ಲಿ 1908ರಲ್ಲಿ ಒಕ್ಕಲಿಗ ಕುಟುಂಬವೊಂದರಲ್ಲಿ ಜನಿಸಿ ಮುಂದೆ 1930 ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನಿಂದ ಬಿಎ ಪದವಿಯನ್ನು ಪಡೆದರು.ನಂತರ ಪೂನಾ ಲಾ ಕಾಲೇಜಿನಿಂದ ಕಾನೂನು ಪದವಿಯನ್ನು ಪಡೆದರು. ಅದೇ ವರ್ಷ ಅವರು ವಕೀಲಿ ವೃತ್ತಿಗೆ ಕಾಲಿಟ್ಟಿದ್ದರು. ಮಹಾತ್ಮಾ ಗಾಂಧಿಯವರಿಂದ ಪ್ರೇರಿತರಾಗಿ ಸ್ವಾತಂತ್ರ್ಯಹೋರಾಟಕ್ಕಿಳಿದು ಒಂಬತ್ತಕಿಂತಲೂ ಹೆಚ್ಚು ಬಾರಿ ಬಂಧನಕ್ಕೊಳಗಾದರು.
ಸುದೀರ್ಘ ಹೋರಾಟದ ನಂತರ ಭಾರತವು 1947 ರ ಅಗಸ್ಟ್ 15 ರಂದು ಸ್ವತಂತ್ರವಾಯಿತು. ರಾಜಕಾರಣದಲ್ಲಿ ಅದಾಗಲೇ ಸುವಿಖ್ಯಾತರಾಗಿದ್ದ ಕೆಂಗಲ್ ಹನುಮಂತರಾಯರನ್ನು ಒಮ್ಮತದಿಂದ 'ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ'ರನ್ನಾಗಿ 1948 ರಲ್ಲಿ ಆರಿಸಲಾಯಿತು. 1951 ರಲ್ಲಿ ಮೈಸೂರು ರಾಜ್ಯಕ್ಕೆ ಕೆಂಗಲ್ ಹನುಮಂತಯ್ಯನನವರು ಎರಡನೆ ಮುಖ್ಯಮಂತ್ರಿಯಾದರು. ದೂರದೃಷ್ಟಿಯುಳ್ಳ ನಾಯಕನಾಗಿ ಅವರು ಅನೇಕ ಸಾಧನೆಗಳನ್ನು ಮಾಡಿದರು. ಬೆಂಗಳೂರಿನಲ್ಲಿ ದೇಶದಲ್ಲೇ ಅತಿ ದೊಡ್ಡದಾದ ಶಾಸಕಾಂಗ ಮತ್ತು ಆಡಳಿತ ಕಚೇರಿಯ ಭವ್ಯ ವಿಧಾನಸೌಧ ಕಟ್ಟಡವನ್ನು ನಿರ್ಮಿಸಿದರು. ವಿಶೇಷವೆಂದರೆ ಇದರ ಕಲ್ಪನೆ ಮತ್ತು ನಿರ್ಮಾಣ ಪೂರ್ಣತಃ ಅವರದೇ ಆಗಿದೆ. ಈ 'ಗ್ರಾನೈಟ್ ಕಟ್ಟಡ ರಚನೆ'ಯು 'ದ್ರಾವಿಡ ಶೈಲಿ'ಯನ್ನು ಈ ಕಟ್ಟಡ ಹೊಂದಿದೆ. ಈ ಕಟ್ಟಡದ ಸೌಂದರ್ಯವನ್ನು ಕಂಡು ಆಗಿನ ಪ್ರಧಾನಿ ಜವಾಹರಲಾಲ್ ನೆಹರುರವರು 'ಈ ಕಟ್ಟಡವನ್ನು ನೋಡಿ ಮಂತ್ರಮುಗ್ಧನಾದೆ' ಎಂದು ಹೇಳಿದ್ದರು.
ಅವರು1971 ರ ಜನವರಿಯಲ್ಲಿ ಕೇಂದ್ರ ಸರಕಾರದಲ್ಲಿ ರೈಲು ಇಲಾಖೆಯ ಕ್ಯಾಬಿನೆಟ್ ದರ್ಜೆ ಮಂತ್ರಿಯಾದರು.ಅವರ ಅವಧಿಯಲ್ಲಿ 'ಭಾರತೀಯ ರೇಲ್ವೆ ಅಲ್ಪಾವಧಿಯಲ್ಲೇ ದಕ್ಷ ಆಡಳಿತವನ್ನು ನೀಡಿ ಸಾಧನೆ ಮೆರೆದರು'. ಅವರ ರಾಜಕೀಯ ಕಾರ್ಯಾವಧಿಯು ಪ್ರಾಮಾಣಿಕ , ದಕ್ಷ ಆಡಳಿತ, ಗ್ರಾಮೀಣ ಮತ್ತು ದುರ್ಬಲ ವರ್ಗಗಳ ಜೀವನಸುಧಾರಣೆ , ಪ್ರಜಾಪ್ರಭುತ್ವದಲ್ಲಿ ಯುವಜನತೆಯ ತರಬೇತಿ ಮತ್ತು ಸಾಂಪ್ರದಾಯಿಕ ಮೌಲ್ಯಗಳ ಶಿಕ್ಷಣಕ್ಕಾಗಿ ಸಾಂಸ್ಕೃತಿಕ ಇಲಾಖೆಯ ರಚನೆಗಳನ್ನು ಒಳಗೊಂಡಿತ್ತು.1980 ಡಿಸೆಂಬರ್ 1 ರಂದು ಅವರು ತಮ್ಮ 72 ವಯಸ್ಸಿನಲ್ಲಿ ಕೊನೆಯುಸಿರೆಳೆದರು.