ಬೆಂಗಳೂರು: ಕರ್ನಾಟಕ ರಾಜ್ಯವು ಅಧಿಕೃತವಾಗಿ ನಾಡಧ್ವಜವನ್ನು ಹೊಂದುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ ಇಟ್ಟಿದೆ. ಆ ನಿಟ್ಟಿನಲ್ಲಿ ಪಾಟೀಲ್ ಪುಟ್ಟಪ್ಪನವರ ನೇತೃತ್ವದ ಸಮಿತಿಗೆ ಧ್ವಜದ ರೂಪುರೇಷೆ ಸಿದ್ದಪಡಿಸುವ ಜವಾಬ್ದಾರಿ ನೀಡಿತ್ತು. ಈಗ ಸಂಪೂರ್ಣ ವರದಿ ಸಿದ್ದಪಡಿಸಿರುವ ನಾಡ ಧ್ವಜ ಸಮಿತಿಯು ತಿಂಗಳೊಳಗೆ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಅದರ ಭಾಗವಾಗಿ ನಾಳೆ ನಾಡಧ್ವಜ ಆಯ್ಕೆ ಸಮಿತಿಯು ಸಭೆಯನ್ನು ನಡೆಸಲಿದೆ. 


COMMERCIAL BREAK
SCROLL TO CONTINUE READING

ಸಮಿತಿಯು ಈಗಾಗಲೇ ಹಳದಿ, ಬಿಳಿ, ಕೆಂಪು ಬಣ್ಣದ ನಡುವೆ ರಾಜ್ಯ ಸರ್ಕಾರದ ಲಾಂಛನವಿರುವ ಧ್ವಜವನ್ನು ಅಂತಿಮ ಗೊಳಿಸಿದೆ. ಈಗಿರುವ ಕನ್ನಡ ಧ್ವಜ ಕನ್ನಡ ಪಕ್ಷದ್ದು ಆಗಿರುವುದರಿಂದ ಈ ಹಿನ್ನೆಲೆಯಲ್ಲಿ ಪ್ರಸ್ತುತವಿರುವ ಧ್ವಜವನ್ನು  ಬದಲಾಯಿಸಲು ಸಮಿತಿ ಶಿಫಾರಸ್ಸಿನಲ್ಲಿ ಪ್ರಸ್ತಾಪಿಸಿದೆ ಎಂದು ಹೇಳಲಾಗುತ್ತಿದೆ.


ಪ್ರತ್ಯೇಕ ಧ್ವಜದ ವಿಚಾರವಾಗಿ ಇಂದೇ ನಡೆಯಬೇಕಿದ್ದ ಸಮಿತಿಯ ಸಭೆಯು ಬಜೆಟ್ ಹಿನ್ನಲೆಯಲ್ಲಿ ನಾಳೆಗೆ ಮುಂದೂಡಲಾಗಿದೆ,ಮತ್ತು ಪ್ರತ್ಯೇಕ ಧ್ವಜದ ವಿಚಾರವಾಗಿ ಇರುವ ಕಾನೂನು ತೊಡಕುಗಳ ಬಗ್ಗೆಯೂ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಿದೆ, ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಕಾನೂನು ಇಲಾಖೆಯ ಅಭಿಪ್ರಾಯ ಪಡೆದ ನಂತರ ಪ್ರತ್ಯೇಕ ಧ್ವಜದ ವರದಿಯನ್ನು ಸಚಿವೆ ಉಮಾಶ್ರೀಯವರಿಗೆ ಸಲ್ಲಿಸಲಿದೆ. ಇದರ ನಂತರ ರಾಜ್ಯ ಸರ್ಕಾರವು ಈ ವರದಿಗೆ ಸಂಪುಟದಲ್ಲಿ ಒಪ್ಪಿಗೆ ಸೂಚಿಸಿ ನಂತರ ಅದನ್ನು ಕೇಂದ್ರ ಸರ್ಕಾರಕ್ಕೆ ರವಾನಿಸುವ ಸಾಧ್ಯತೆ ಇದೆ. ಒಂದು ವೇಳೆ ಅದಕ್ಕೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದ್ದೆ ಆದಲ್ಲಿ ಜಮ್ಮು ಕಾಶ್ಮೀರದ ನಂತರ ಅಧಿಕೃತವಾಗಿ ಪ್ರತ್ಯೇಕ ಧ್ವಜ ಹೊಂದಲಿರುವ ಎರಡನೇಯ ರಾಜ್ಯವೆಂದು ಖ್ಯಾತಿ ಪಡೆಯಲಿದೆ.