ಮೈಸೂರು: ಜಿಲ್ಲೆಯ ಕ್ಷೇತ್ರವಾರು ಪ್ರತ್ಯೇಕ ಸಭೆಗಳನ್ನು ಮಾಡಿ, ಆಯಾ ಶಾಸಕರನ್ನೊಳಗೊಂಡು ಸಭೆ ನಡೆಸಿ ಅಲ್ಲಿನ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕಿದೆ. ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಿ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್  (ST Somashekhar) ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. 


COMMERCIAL BREAK
SCROLL TO CONTINUE READING

ಮಳೆ ಹಾಗೂ ಪ್ರವಾಹದಿಂದಾಗಿ ಉಂಟಾಗಿರುವ ಹಾನಿ, ಕೈಗೊಂಡಿರುವ ಕ್ರಮಗಳು ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 


ಕಳೆದ ವರ್ಷ ಹಾಗೂ ಈ ಬಾರಿ ಎಲ್ಲೆಲ್ಲಿ ಹಾನಿಯಾಗಿದೆ ಎಂಬ ಬಗ್ಗೆ ಮುಂದಿನ ವಾರ ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಶಾಶ್ವತ ಪರಿಹಾರಕ್ಕಾಗಿ ಆಗ್ರಹಗಳು ಕೇಳಿಬರುತ್ತಿದ್ದು, ಆಯಾ ಕ್ಷೇತ್ರದಲ್ಲಿಯೇ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. 


ಇನ್ನು ಹಾನಿ ಬಗ್ಗೆ ಸಂಪೂರ್ಣ ಲೆಕ್ಕಾಚಾರ ಆಗಿಲ್ಲ. ಈ ಬಗ್ಗೆ ಪರಿಶೀಲನೆ ಆಗುತ್ತಿದೆ. ಕಳೆದ ಬಾರಿ ಹಾನಿಗೊಳಗಾಗಿ ಪರಿಹಾರ ಸಿಗದವರ ಬಗ್ಗೆ ಮಾಹಿತಿ ಬಂದಿದೆ. ಅವರಿಗೆ ಶೀಘ್ರದಲ್ಲಿಯೇ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಲೂ ಸೂಚಿಸಲಾಗಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು. 


ಪ್ರವಾಹಪೀಡಿತ ಪ್ರದೇಶಗಳ ಸಂತ್ರಸ್ತ ರೈತರನ್ನು (Farmers) ಶಾಶ್ವತವಾಗಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುವ ಬಗ್ಗೆ ಜಿಲ್ಲಾಡಳಿತ ಸಿದ್ಧವಿದ್ದು, ಜನ ಒಪ್ಪುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಆಯಾ ಕ್ಷೇತ್ರದ ಜನಪ್ರತಿನಿಧಿಗಳ ಸಹಕಾರವೂ ಅಷ್ಟೇ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಭೆ ಕರೆದ ವೇಳೆ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು. 


ಜಿಲ್ಲೆಯ ಜಲಾಶಯಗಳ ಸ್ಥಿತಿಗತಿಗಳು, ಜಲಾಶಯಗಳ ತೀರದ ಪ್ರದೇಶಗಳ ಸಮಸ್ಯೆ, ಜೀವಹಾನಿ, ಮನೆ ಹಾನಿ, ಬೆಳೆ ಹಾನಿ, ಪ್ರಾಣಿ ಹಾನಿ, ಮಳೆ-ಗಾಳಿಗೆ ವಿದ್ಯುತ್ ಪರಿಕರಗಳ ಹಾನಿಯ ವಿವರ, ಪ್ರವಾಹಕ್ಕೊಳಗಾಗಿ ತೊಂದರೆಗೀಡಾದ ಗ್ರಾಮಗಳು ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. 


ಸತರ ಮೂರು ವರ್ಷಗಳಿಂದ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ವಿಧಾನಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ಪ್ರಶ್ನೆ ಮಾಡಿದರು. 
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳಾದ ಅಭಿರಾಂ ಜಿ. ಶಂಕರ್, ಮಳೆಗಾಲದಲ್ಲಿ ನೀರು ನುಗ್ಗುವ ಭಾಗಗಳಲ್ಲಿ ಸ್ಥಳಾಂತರ ಮಾಡಲಾಗುತ್ತಿದೆ. ಈ ಪ್ರದೇಶದವರನ್ನು ಸ್ಥಳಾಂತರ ಮಾಡಲು ಜಾಗ ನೀಡಲು ಜಿಲ್ಲಾಡಳಿತ ಸಿದ್ಧವಿದ್ದರೂ ಸಹ ಸಾರ್ವಜನಿಕರು ಒಪ್ಪುತ್ತಿಲ್ಲ. ಜನ ಒಪ್ಪಿದರೆ ನಾವು ಜಾಗ ಕೊಡುತ್ತೇವೆ ಎಂದು ಹೇಳಿದರು.


ನಂಜನಗೂಡು ಕ್ಷೇತ್ರದಲ್ಲಿ ಪ್ರವಾಹದ ನೀರು ನುಗ್ಗುವ ಸಮಸ್ಯೆ ಬಹಳವೇ ಇದ್ದು, ನಗರದ ಹೊರ ವಲಯದಲ್ಲಿ ಜಾಗ ಕೊಟ್ಟರೆ ಒಪ್ಪುತ್ತಿಲ್ಲ ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ನಂಜನಗೂಡು ಶಾಸಕರಾದ ಹರ್ಷವರ್ಧನ್, ಪ್ರತಿ ಬಾರಿಯೂ ಮಳೆ ಸಂದರ್ಭದಲ್ಲಿ ಕಬಿನಿ ಜಲಾಶಯದಿಂದ ಬರುವ ನೀರಿನಿಂದ ಬಹಳವೇ ತೊಂದರೆಯಾಗುತ್ತಿದ್ದು, ಪ್ರವಾಹ ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಲು ಅನುದಾನ ಕೇಳುತ್ತಿದ್ದು, ಬಿಡುಗಡೆಯಾಗಿಲ್ಲ. ಆದಷ್ಟು ಶೀಘ್ರವಾಗಿ ಹಣ ಬಿಡುಗಡೆಯಾಗಬೇಕು. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ನೀಡಬೇಕು ಎಂದು ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದರು. 


ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ಕಳೆದ ಬಾರಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಾದವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.ಇದಕ್ಕೆ ಇರುವ ತಾಂತ್ರಿಕ ಕಾರಣಗಳು ಏನು ಎಂಬುದರ ಬಗ್ಗೆ ಗಮನಹರಿಸಬೇಕು. ಮನೆ ಹಾನಿಗೆ ಸಂಬಂಧಪಟ್ಟಂತೆ ಈಗಲೇ ವರದಿ ಕೊಡುವ ಕೆಲಸ ಆಗಬಾರದು. ಮಳೆ ಇನ್ನೂ ಇರುವುದರಿಂದ ನೆನೆದು ಭಾಗಶಃ ಹಾನಿಗೊಳಗಾದ  ಮನೆಗಳು ಮತ್ತೆ ಸಂಪೂರ್ಣವಾಗಿ ಬೀಳುವ ಸಾಧ್ಯತೆ ಇರುತ್ತದೆ. ಒಮ್ಮೆ ಇವರಿಗೆ ಭಾಗಶಃ ಹಾನಿಯ ಪರಿಹಾರ ಸಿಕ್ಕರೆ, ಬಳಿಕ ಮನೆ ಸಂಪೂರ್ಣವಾಗಿ ಹಾನಿಯಾದರೆ ಪರಿಹಾರ ಸಿಗುವುದಿಲ್ಲ. ಈ ಬಗ್ಗೆಯೂ ಗಮನಹರಿಸಿ ಎಂದು ಮನವಿ ಮಾಡಿದರು. 


30 ಕೋಟಿ ರೂಪಾಯಿ ಅನುದಾನ ಬಂದಿದ್ದು, ಅದರಲ್ಲಿ 14 ಕೋಟಿ 14 ಲಕ್ಷ ರೂಪಾಯಿಯನ್ನು ನಿಗಮಕ್ಕೆ ಬಿಡುಗಡೆ ಮಾಡಿದ್ದು, ಇನ್ನೂ 16 ಕೋಟಿ ರುಪಾಯಿ ಜಿಲ್ಲಾಡಳಿತ ಬಳಿ ಇದೆ. ಅಗತ್ಯ ಇರುವ ಕಡೆ ಅನುದಾನ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ನಾಳೆ ಮೈಸೂರು ಕೋವಿಡ್ ಸಂಬಂಧ ಸಭೆ :
ಬೆಂಗಳೂರಿನಲ್ಲಿ ಈಗಾಗಲೇ ಕೋವಿಡ್ 19 (Covid 19) ನಿಯಂತ್ರಣ ಸಂಬಂಧ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳ ಸಹಕಾರವನ್ನೂ ಪಡೆದು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿರುವುದರಿಂದ ಸಾವಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ಶನಿವಾರ ಮೈಸೂರು ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ಸಭೆ ಕರೆಯಲಾಗಿದ್ದು, ಅಲ್ಲಿ ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು. 


ಆಸ್ತಿ ಹಾನಿ ಮಾಡಿದವರ ಆಸ್ತಿ ಮುಟ್ಟುಗೋಲಿಗೆ ಚಿಂತನೆ :
ಬೆಂಗಳೂರು ಗಲಭೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಯಾರು ಆಸ್ತಿ-ಪಾಸ್ತಿ ಹಾನಿ ಮಾಡಿದ್ದಾರೆಯೋ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಈಗಾಗಲೇ ಚಿಂತನೆ ನಡೆದಿದೆ. ಸರ್ಕಾರ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಕ್ರಮವಹಿಸಲಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು. 


ದಸರಾ ಸಿದ್ಧತೆ ಬಗ್ಗೆ ನೋಡಲಾಗಿಲ್ಲ :
ಸದ್ಯ ಕೋವಿಡ್ ಹಾಗೂ ಮಳೆ ಪ್ರವಾಹದ ಸಂದರ್ಭದಲ್ಲಿ ಇದರ ರಕ್ಷಣೆ ಕಾರ್ಯ ಭರದಿಂದ ಸಾಗಿದೆ. ಸಾವು-ನೋವಿನ ಸಂಖ್ಯೆಗಳು ಹೆಚ್ಚುತ್ತಿರುವುದರಿಂದ ಇವುಗಳ ಬಗ್ಗೆಯೇ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ. ಹಾಗಾಗಿ ಇನ್ನೂ ದಸರಾ (Dasara) ಸಿದ್ಧತೆ ಬಗ್ಗೆ ಚಿಂತನೆ ನಡೆಸಿಲ್ಲ. ಮುಂದಿನ ವಾರ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. 


ಬೆಳೆ ಹಾನಿ ಸಮೀಕ್ಷೆ ಮೊಬೈಲ್ ಆ್ಯಪ್ ಬಿಡುಗಡೆ :
ಮಳೆ, ಪ್ರವಾಹ ಹಾಗೂ ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಉಂಟಾಗುವ ಬೆಳೆಹಾನಿ ಬಗ್ಗೆ ರೈತರೇ ಸ್ವತಃ ಸಮೀಕ್ಷೆ ವರದಿ ಸಲ್ಲಿಸುವ ಆ್ಯಪ್ ಮಾಹಿತಿಯುಳ್ಳ ಕೈಪಿಡಿಯನ್ನು ಸಚಿವರಾದ ಸೋಮಶೇಖರ್ ಬಿಡುಗಡೆಗೊಳಿಸಿದರು.