`ಕಲ್ಯಾಣ ಕರ್ನಾಟಕ ಉತ್ಸವ`; ಕಲಬುರಗಿಯಲ್ಲಿ ಸಿಎಂ ಬಿಎಸ್ವೈ ಧ್ವಜಾರೋಹಣ
ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.
ಕಲಬುರಗಿ: ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವಾಗಿ ಆಚರಿಸಲಾಗುತ್ತಿದ್ದ ಸೆಪ್ಟೆಂಬರ್ 17ನ್ನು ಇನ್ನುಮುಂದೆ 'ಕಲ್ಯಾಣ ಕರ್ನಾಟಕ' ದಿನವಾಗಿ ಆಚರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈವರೆಗೂ ಸೆಪ್ಟೆಂಬರ್ 17ನ್ನು ಹೈದರಾಬಾದ್-ಕರ್ನಾಟಕ ವಿಮೋಚನಾ ದಿನವಾಗಿ ಆಚರಿಸುತ್ತಿದ್ದ ಬಳ್ಳಾರಿ, ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 'ಕಲ್ಯಾಣ ಕರ್ನಾಟಕ ಉತ್ಸವ' ದಿನವಾಗಿ ಆಚರಿಸಲಾಯಿತು.
'ಕಲ್ಯಾಣ ಕರ್ನಾಟಕ ಉತ್ಸವ'ದ ಅಂಗವಾಗಿ ಇಂದು ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಲ್ಯಾಣ ಕರ್ನಾಟಕ(ಈ ಹಿಂದಿನ ಹೈದರಾಬಾದ್ ಕರ್ನಾಟಕ)ವನ್ನು ಉದ್ದೇಶಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ 371ಜೆ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದ ಸಿಎಂ ಯಡಿಯೂರಪ್ಪ, ಶರಣ ಇತಿಹಾಸದ ಪರಂಪರೆ ಹೊಂದಿರುವ ಈ ಪ್ರದೇಶವನ್ನು 71 ವರ್ಷಗಳಿಂದ ಹೈದರಾಬಾದ್-ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಇಂದು 'ಕಲ್ಯಾಣ ಕರ್ನಾಟಕ'ವಾಗಿ ಮರುನಾಮಕರಣ ಅನ್ವರ್ಥವಾಗಿದೆ. ಈ ಪ್ರದೇಶದ ಗತವೈಭವವನ್ನು ಮುಂದಿನ ದಿನಗಳಲ್ಲಿ ಪಠ್ಯ ಪುಸ್ತಕದಲ್ಲಿ ಸೇರಿಸಲಾಗುವುದು ಎಂದರು.