Shivratri At Madappa Betta: ಶಿವನ ಭಕ್ತರ ಪವಿತ್ರ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿ ಹಿನ್ನೆಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ಶಿವರಾತ್ರಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು ಪ್ರಾಧಿಕಾರ ಸಕಲ ಸಿದ್ಧತೆ ಕೈಗೊಂಡಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ಕನಕಪುರ, ಬೆಂಗಳೂರು, ರಾಮನಗರ, ಚನ್ನಪಟ್ಟಣ ಕಡೆಯಿಂದ ಕಾವೇರಿ ಸಂಗಮವನ್ನು ದಾಟಿ ಲಕ್ಷಾಂತರ ಮಂದಿ ಭಕ್ತರು ಬೆಟ್ಟಕ್ಕೆ ಬಂದಿದ್ದು ಚಾಮರಾಜನಗರ, ಮಂಡ್ಯ, ಮೈಸೂರು ಭಾಗದಿಂದಲೂ ಭಕ್ತಸಾಗರವೇ ಸೇರಿದೆ‌.‌ ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೇ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು ಎತ್ತ ನೋಡಿದರೂ ಮಾದಪ್ಪನ ಜಯಘೋಷಗಳು ಮಾರ್ದನಿಸುತ್ತಿದೆ.


4 ಲಕ್ಷ ಲಡ್ಡು ಸಿದ್ದ: 
ತಿರುಪತಿಯಂತೇ ಮಲೆ ಮಹದೇಶ್ವರನ ಲಾಡು ಪ್ರಸಾದಕ್ಕೂ ಬೇಡಿಕೆ ಇರುವ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರವು ಈಗಾಗಲೇ 4 ಲಕ್ಷ ಲಾಡುಗಳನ್ನು ತಯಾರಿಸಿದ್ದು ಲಾಡು ಪ್ರಸಾದ ಮಾರಾಟವಾಗುತ್ತಿದ್ದಂತೆ ಪ್ರಸಾದ ತಯಾರಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಲಾಡು ಪ್ರಸಾದ ಮಾರಾಟ ಈ ಬಾರಿ 5 ಲಕ್ಷ ಮೀರುವ ನಿರೀಕ್ಷೆ ಇದೆ.


ಮಡಕೆ ನೀರು- ಮಾತೃ ಕುಟೀರ: 
ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆ ಪ್ರಾಧಿಕಾರದ ಕಾರ್ಯದರ್ಶಿ ರಘು ಮೊದಲ ಬಾರಿಗೆ ಕ್ಷೇತ್ರದ ಅಲ್ಲಲ್ಲಿ ಮಡಕೆಗಳನ್ನು ಇರಿಸಿದ್ದು ಭಕ್ತರು ಈ ಬಾರಿ ಕುಡಿಯುವ ನೀರಿನ ಟ್ಯಾಂಕ್ ಜೊತೆಗೆ ಮಡಕೆ ನೀರನ್ನು ಸೇವಿಸಬಹುದಾಗಿದೆ. 


ಇದನ್ನೂ ಓದಿ- NWKRTC : ಹುಬ್ಬಳ್ಳಿಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಬಸ್ ವ್ಯವಸ್ಥೆ


ತಾಯಂದಿರು ಕೂಡ ಸಾವಿರಾರು ಸಂಖ್ಯೆಯಲ್ಲಿ ಬರುವುದರಿಂದ ಯಾವುದೇ ತೊಂದರೆಯಾಗದಂತೆ ತೆಂಗಿನ ಗರಿಗಳನ್ನು ಬಳಸಿಕೊಂಡು ಹಾಲುಣಿಸುವ ಕೇಂದ್ರ ತೆರೆದಿದ್ದು ಇದಕ್ಕೆ ಮಾತೃ ಕುಟೀರ ಎಂದು ಹೆಸರಿಡಲಾಗಿದೆ. ಇದು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.


ನಿರಂತರ ದಾಸೋಹದ ವ್ಯವಸ್ಥೆ: 
ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ತಾಳು ಬೆಟ್ಟದಿಂದ ಮಲೆ ಮಾದೇಶ್ವರ ಬೆಟ್ಟದ ವರೆಗೆ ಟ್ಯಾಂಕ್  ಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಲು 10 ಕಡೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.


ಶ್ರೀ ಕ್ಷೇತ್ರದ ಎರಡು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಜನರಿಗೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ದಾಸೋಹ ಭವನದಲ್ಲಿ ವಿಶೇಷ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದ್ದು ಒಂದು ಬಾರಿಗೆ 2 ಸಾವಿರಕ್ಕೂ ಹೆಚ್ಚು ಜನರು ಪ್ರಸಾದ ಸ್ವೀಕರಿಸಬಹುದಾಗಿದೆ. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಹಳೆ ದಾಸೋಹದ ಮುಂಭಾಗ ನಿರಂತರ ದಾಸೋಹದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.


ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಕೆ‌ಎಸ್‌ಆರ್‌ಟಿ‌ಸಿ ವತಿಯಿಂದ 500 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಕೆಟ್ಟ ನಿಂತರೆ ದುರಸ್ತಿ ಪಡಿಸಲು 15 ಜನ ತಾಂತ್ರಿಕ ಸಿಬ್ಬಂದಿಗಳನ್ನು ಕೂಡ ನೇಮಕ ಮಾಡಲಾಗಿದೆ. 


ಇದನ್ನೂ ಓದಿ- Ujjain Mahakal Darshana: ಮನೆಯಲ್ಲಿಯೇ ಕುಳಿತು ಉಜ್ಜಯಿನಿ ಮಹಾಕಾಲನ ದರ್ಶನ ಪಡೆದು ನೀವೂ ಪುನೀತರಾಗಿ


ತಾಳು ಬೆಟ್ಟದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. 


ತಾಳುಬೆಟ್ಟ ಹಾಗೂ ಶಂಕಮ್ಮನ ನಿಲಯ ಸಮೀಪ 100 ಮೊಬೈಲ್ ಶೌಚಾಲಯವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗುತ್ತಿದೆ. ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.


ಮಾರ್ಚ್ 7ರ ಬೆಳಿಗ್ಗೆ 6 ಗಂಟೆಯಿಂದ ಮಾರ್ಚ್ 12ರ ಬೆಳಗಿನ ಜಾವ 6 ಗಂಟೆಯವರೆಗೆ ಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳಲು ದ್ವಿಚಕ್ರ ವಾಹನ ಸವಾರರಿಗೆ ತೆರಳಲು ನಿರ್ಬಂಧ ಹೇರಿರುವುದರಿಂದ ಕೌದಳ್ಳಿ ಗ್ರಾಮದ ಖಾಸಗಿ ಲೇಔಟ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಾರ್ಕಿಂಗ್ ನಿಂದ ಮಲೆಮಾದೇಶ್ವರ ಬೆಟ್ಟಕ್ಕೆ ತೆರಳಲು 10 ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ರಘು ತಿಳಿಸಿದ್ದಾರೆ.


ಶಿವರಾತ್ರಿ ಜಾತ್ರಾ‌ ಮಹೋತ್ಸವದ ದಿನದ ವಿಶೇಷತೆ: 
ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮಾರ್ಚ್ 7ರಿಂದ ಪ್ರಾರಂಭವಾಗಿದ್ದು ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ.  8ರಂದು ಮಹಾಶಿವರಾತ್ರಿ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಎಣ್ಣೆ ಮಜ್ಜನ ಸೇವೆ ವಿವಿಧ ಉತ್ಸವಗಳು, 9 ರಂದು ಅಮಾವಾಸ್ಯೆ ವಿಶೇಷ ಪೂಜೆ ಹಾಗೂ ಉತ್ಸವಗಳು, 10 ರಂದು ಬೆಳಗ್ಗೆ ಮಹಾರಥೋತ್ಸವ ಜರುಗಲಿದ್ದು ಅದೇ ದಿನ ರಾತ್ರಿ ಅಭಿಷೇಕದ ಪೂಜೆ ಮುಗಿದ ನಂತರ ಕೋಂಡೋತ್ಸವ ನಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.