12 ವರ್ಷಗಳ ಬಳಿಕ ಒಂದೇ ವೇದಿಕೆಯಿಂದ ಚುನಾವಣೆಗೆ ರಣಕಹಳೆ ಊದಿದ ಗುರು-ಶಿಷ್ಯರು
ಮುಂಬರುವ ಉಪ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ವೈರತ್ವ ಮರೆತು ಹಳೆಯ ಗುರುಶಿಷ್ಯರು ಈಗ ಮತ್ತೆ ಒಂದಾಗಿದ್ದಾರೆ. ಆ ಮೂಲಕ ಈಗ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ.
ಬೆಂಗಳೂರು: ಮುಂಬರುವ ಉಪ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ವೈರತ್ವ ಮರೆತು ಹಳೆಯ ಗುರುಶಿಷ್ಯರು ಈಗ ಮತ್ತೆ ಒಂದಾಗಿದ್ದಾರೆ. ಆ ಮೂಲಕ ಈಗ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ.
ಹೌದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ತಮ್ಮ ಈ ಹಿಂದಿನ ಮುನಿಸನ್ನು ಮರೆತು ಒಗ್ಗಟ್ಟಾಗಿದ್ದಾರೆ.ಇಂದು ಜೆಡಿಎಸ್ ಮತ್ತು ಕಾಂಗ್ರೆಸ್ ನ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಹಿಂದಿನ ಎಲ್ಲ ಕಹಿ ನೆನಪುಗಳನ್ನು ಮರೆತು ಏಕತೆ ಪ್ರದರ್ಶಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ " 12 ವರ್ಷಗಳ ನಂತರ ಇದೇ ಮೊದಲ ಬಾರಿಗೆ ನಾನು ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿದ್ದೇವೆ "ಎನ್ನುತ್ತಾ ತಮ್ಮ ಭಾಷಣ ಪ್ರಾರಂಭಿಸಿದರು. "ಉಪ ಚುನಾವಣೆಯಲ್ಲಿ ಮೂರು ಲೋಕಸಭೆ ಮತ್ತು ಎರಡು ವಿಧಾನ ಸಭೆಯಲ್ಲಿ ಜ್ಯಾತ್ಯಾತೀತ ಶಕ್ತಿಗಳು ಗೆಲ್ಲಬೇಕಾಗಿದೆ.ಆ ಮೂಲಕ ಈ ಐದು ಕ್ಷೇತ್ರಗಳ ಗೆಲುವಿನ ಮೂಲಕ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಅಡಿಪಾಯ ಹಾಕಬೇಕಿದೆ.ಆದ್ದರಿಂದ ಈ ದೇಶದ ಬದಲಾವಣೆ ರಾಜ್ಯದಿಂದಲೇ ಆಗಬೇಕಿದೆ ಆದ್ದರಿಂದ ನಾವು ಒಂದಾಗಿದ್ದೇವೆ ಎನ್ನುವುದಕ್ಕೆ ಯಾವುದೇ ರೀತಿಯ ಅನುಮಾನ ಬೇಡ ಎಂದು ತಿಳಿಸಿದರು.
ಇದಾದ ನಂತರ ಸಿದ್ದರಾಮಯ್ಯ ಮಾತನಾಡಿ ಕೋಮುವಾದಿ ಬಿಜೆಪಿಯನ್ನು ಹೊರಗಿಡುವುದ್ದಕ್ಕಾಗಿ ನಾವು ಒಂದಾಗಿದ್ದೇವೆ. 3 ಕ್ಷೇತ್ರಗಳಲ್ಲಿ ನಾವು ಜೆಡಿಎಸ್ ಗೆ ಬೆಂಬಲಿಸಿದ್ದೆವೆ. ಎರಡು ಕ್ಷೇತ್ರಗಳಲ್ಲಿ ಅವರು ನಮಗೆ ಬೆಂಬಲ ನೀಡಿದ್ದಾರೆ. ಈಗ ನಾವು ಜ್ಯಾತ್ಯಾತೀತ ಮತಗಳ ವಿಭಜನೆಯನ್ನು ತಡೆಯಬೇಕಿದೆ ಇಲ್ಲದೆ ಹೋದಲ್ಲಿ ಮತ್ತೆ ಕೋಮುವಾದಿಗಳಿಗೆ ಅಧಿಕಾರ ಸಿಕ್ಕರೆ ಸಮಾಜದಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ. ಇನ್ನು ಐದಕ್ಕೆ ಐದು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಉಚ್ಚರಿಸಿದರು.