ಗೋವಾ ಸಚಿವರ ಹೇಳಿಕೆ ಗರಂ ಆದ ಸಿದ್ದರಾಮಯ್ಯ
ಬೆಂಗಳೂರು: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಳಸಾ-ಬಂಡೂರಿ ನಾಲಾ ಜೋಡಣೆಯ ಕಾಮಗಾರಿಯನ್ನು ಪರಿಶೀಲನೆ ಮಾಡಿದ ನಂತರ ಗೋವಾ ಜಲ ಸಂಪನ್ಮೂಲ ಸಚಿವ ವಿನೋದ ಪಾಳೇಕರ 'ಕರ್ನಾಟಕದವರು ಹರಾಮಿಗಳು' ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ "ಕನ್ನಡಿಗರ ವಿರುದ್ದದ ಬಳಸಿರುವ ಪದಗಳು ನಿಜಕ್ಕೂ ಖಂಡನೀಯ,ಆದ್ಯಾಗ್ಯೂ ನಮ್ಮದು ಗೋವಾ ಜನರ ಜೊತೆ ಯಾವುದೇ ದ್ವೇಷವಿಲ್ಲ. ನಾವು ನಮ್ಮ ಜನರಿಗೆ ಮಹಾದಾಯಿಯಿಂದ ಕುಡಿಯುವ ನೀರು ಒದಗಿಸಲು ನಿರಂತರವಾಗಿ ಪ್ರಯತ್ನಿಸುತ್ತೇವೆ" ಎಂದು ತಿಳಿಸಿದರು.
ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದೆ ಅಲ್ಲದೆ ಮಹದಾಯಿ ವಿಚಾರದಲ್ಲಿ ಅದು ರಾಜಕೀಯ ಮಾಡುತ್ತಿದೆ ಎಂದ ಪಾಳೇಕರ್, ಮನೋಹರ್ ಪರ್ರೀಕರ್ ರವರು ಯಡಿಯೂರಪ್ಪನವರಿಗೆ ಬರೆದ ಪತ್ರ ಕೋರ್ಟಿನ ಆದೇಶ ಪ್ರತಿ ಅಲ್ಲ ಎಂದಿದ್ದಾರೆ. ಮಹದಾಯಿ ವಿಷಯವು ನ್ಯಾಯಾಧೀಕರಣದಲ್ಲಿ ಪರಿಹಾರ ಕೊಂಡುಕೊಳ್ಳುವವರೆಗೂ ಕರ್ನಾಟಕಕ್ಕೆ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಕಳಸಾ ಬಂಡೂರಿ ನಾಲಾ ಜೋಡಣೆಯ ಕಾಮಗಾರಿ ವೀಕ್ಷಣೆಗೆ ಪೊಲೀಸ್ ಬಂದೋಬಸ್ತಿನಲ್ಲಿ ಹೋಗಿದ್ದರ ಬಗ್ಗೆ ಪತ್ರಕರ್ತರು ವಿಚಾರಿಸಿದಾಗ ‘ಕರ್ನಾಟಕದವರು ಹರಾಮಿಗಳು. ಆದ್ದರಿಂದ ಪೊಲೀಸ್ ಬಂದೋಬಸ್ತಿನಲ್ಲಿ ಹೋಗಿದ್ದೆ' ಎಂದು ಹೇಳಿ ಭಾರಿ ವಿವಾದ ಉಂಟು ಮಾಡಿದ್ದರು. ಇದರಿಂದ ಕರ್ನಾಟಕದೆಲ್ಲೆಡೆ ಸಚಿವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಬಹುತೇಕರು ವ್ಯಾಪಕವಾಗಿ ಖಂಡಿಸಿದ್ದರು.ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಯಿಸಿರುವ ಸಚಿವ ಪಾಲೇಕರ್ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮರು ಟ್ವೀಟ್ ಮಾಡಿದ್ದಾರೆ.