ಬೆಂಗಳೂರು: ಚುನಾವಣಾ ಕುರುಕ್ಷೇತ್ರದಲ್ಲಿ ಚಾಮುಂಡೇಶ್ವರಿಗೆ ಹೋಲಿಸಿದರೆ ಕಾಂಗ್ರೆಸ್ ಪಾಲಿಗೆ ದೊಡ್ಡ ಭದ್ರಕೋಟೆ ಎನಿಸಿದ್ದ ಬಾದಾಮಿ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ಸರಿದಿದ್ದು, ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿರುವ ಚಾಮುಂಡೇಶ್ವರಿಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲಿದ್ದಾರೆ. ಆದರೆ ಸಿಎಂ ಕಡೆ ಘಳಿಗೆಯಲ್ಲಿ ಬಾದಾಮಿಯಿಂದ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.


COMMERCIAL BREAK
SCROLL TO CONTINUE READING

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಎರಡು ಕ್ಷೇತ್ರದಿಂದ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಿತ್ತಾದರೂ ಸಿದ್ದರಾಮಯ್ಯ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ತಿಳಿಸಿ ಪ್ರತಿಪಕ್ಷಗಳಿಗೆ ಶಾಕ್ ನೀಡಿದ್ದಾರೆ. 


ಇನ್ನು ಪ್ರತಿಷ್ಠೆಯ ಕಣವಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಸ್ಥಳೀಯ ಒಕ್ಕಲಿಗ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲುವಿಗೆ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಇಂದಿನಿಂದ(ಏಪ್ರಿಲ್ 16) ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರಗಳಲ್ಲಿ ನಾಲ್ಕು ದಿನಗಳ ಕಾಲ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದಾರೆ.


ಬಾದಾಮಿ ಕ್ಷೇತ್ರದಿಂದ ಹಿಂದೆ ಸರಿದರೆ ಸಿದ್ದರಾಮಯ್ಯ!
ಬಾದಾಮಿ ಕ್ಷೇತ್ರದಿಂದ ಸಿಎಂ ಹಿಂದೆ ಸರಿದಿದ್ದಾರೆ ಎಂದು ಮೇಲ್ನೋಟಕ್ಕೆ ಭಾಸವಾಗುತ್ತಿದ್ದರೂ, ಬಾದಾಮಿ ಹಾಲಿ ಶಾಸಕ ಬಿ.ಬಿ. ಚಿಮ್ಮನಕಟ್ಟಿಗೆ ಟಿಕೆಟ್ ನೀಡದೆ ಡಾ. ದೇವರಾಜ್ ಪಾಟೀಲ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಡಾ. ದೇವರಾಜ್ ಪಾಟೀಲ್ ಕೊನೆ ಕ್ಷಣದಲ್ಲಿ ಹಿಂದೆ ಸರಿಯುವ ಸಾಧ್ಯತೆ ಇದ್ದು, ಸಿದ್ದರಾಮಯ್ಯ ಬಾದಾಮಿಯಿಂದಲೂ ಕಣಕ್ಕಿಳಿಯಬಹುದು ಎಂದು ನಿರೀಕ್ಷಿಸಲಾಗಿದೆ.