ಬೆಂಗಳೂರು: ನಾನು ಭಾರತೀಯ ಕಾಂಗ್ರೆಸ್ ಪಕ್ಷದ ಸದಸ್ಯನೇ ಹೊರತು ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಸದಸ್ಯನಲ್ಲ. ನಾನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಶಿಸ್ತಿನ ಸಿಪಾಯಿಯಾಗಿಯೇ ಹೊರತು ಸಿದ್ದರಾಮಯ್ಯ ಕಾಂಗ್ರೆಸ್ಸಿನ ಶಿಸ್ತಿನ ಸಿಪಾಯಿ ಅಲ್ಲ. ಸಿದ್ದರಾಮಯ್ಯ ಅವರೇ ನನ್ನ ಅಮಾನತಿಗೆ ಕಾರಣವಿರಬಹುದು ಎಂದು ಶಿವಾಜಿನಗರ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡ ಬೆನ್ನಲ್ಲೇ ಸುದ್ದಿಗೋಷ್ಠಿ ಕರೆದು ಮಾತನಾಡಿದ ರೋಷನ್ ಬೇಗ್, ನಾನು ರಾಹುಲ್ ಗಾಂಧಿ ಅವರನ್ನಾಗಲೀ, ಇತರ ಕಾಂಗ್ರೆಸ್ ಹಿರಿಯ ನಾಯಕರನ್ನಾಗಲೀ ಟೀಕಿಸಿಲ್ಲ. ರಾಜ್ಯದ ಮೂಲೆ ಮೂಲೆಯಲ್ಲಿರುವ ಸಾವಿರಾರು ಕಾರ್ಯಕರ್ತರ ಮಾತು. ನಾನು ಮಾತನಾಡಿದ್ದು ತಪ್ಪೇ ಆಗಿದ್ದಲ್ಲಿ, ಕಾಂಗ್ರೆಸ್ ಟೀಕಿಸಿದ ರಮೇಶ್ ಜಾರಕಿಹೊಳಿ, ಕೆ.ಎನ್ ರಾಜಣ್ಣ ಅವರ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು. 



ಮುಂದುವರೆದು ಮಾತನಾಡಿದ ಅವರು, ಲೋಕಸಭೆ ಚುನಾವಣೆ ಫಲಿತಾಂಶ ನೋಡಿದರೆ ಗೊತ್ತಾಗುತ್ತದೆ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆದ್ದಿದೆ. ಮುನಿಯಪ್ಪರನ್ನ ಸೋಲಿಸುತ್ತೇವೆ ಎಂದು ಬಹಿರಂಗವಾಗಿ ಕೆಲವರು ಹೇಳಿದ್ದರು. ಅವರ ವಿರುದ್ಧ ಯಾಕೆ ಪಕ್ಷ ಕ್ರಮ ತೆಗೆದುಕೊಂಡಿಲ್ಲ. ಮಂಡ್ಯದಲ್ಲಿ ಸುಮಲತಾ ಅವರ ಪರ ಕಾಂಗ್ರೆಸ್ ನಾಯಕರು ಪ್ರಚಾರ ಮಾಡಿದ್ದರು. ಅವರ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ. ಕಾಂಗ್ರೆಸ್ ನಲ್ಲಿ ಸತ್ಯ ಹೇಳಿದರೆ ಅಪರಾಧವೇ? ಎಂದು ಕಿಡಿ ಕಾರಿದರು.


ನಾನು ಎಂದಿಗೂ ಕಾಂಗ್ರೆಸ್ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಇಂದು ರಾಹುಲ್ ಗಾಂಧಿ ಅವರ ಜನ್ಮದಿನ. ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತೇನೆ. ಅವರೇ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಬೇಗ್ ಹೇಳಿದರು.