ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಮಂಗಳೂರು ಪೊಲೀಸರ ಕ್ರಮ ಖಂಡಿಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ತೆರಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚೆಗಷ್ಟೇ ಆಂಜಿಯೋ ಪ್ಲಾಸ್ಟ್ ಸರ್ಜರಿಗೆ ಒಳಗಾಗಿದ್ದ ಸಿದ್ದರಾಮಯ್ಯ ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿದ್ದ ಸಿದ್ದರಾಮಯ್ಯ ಶಸ್ತ್ರಚಿಕಿತ್ಸೆಯ ಬಳಿಕ ಇದೇ ಮೊದಲ ಬಾರಿಗೆ ಹೊರಗಡೆ ಹೋಗುತ್ತಿದ್ದಾರೆ.


ವೈದ್ಯರು ಸಿದ್ದರಾಮಯ್ಯ ಅವರಿಗೆ ಹೊರಗಡೆ ಹೋಗಲು ನಿರಾಕರಿಸಿದ್ದಾರೆ. ಆದರೂ ವೈದ್ಯರ ಮಾತು ಕೇಳದ ಸಿದ್ದರಾಮಯ್ಯ 'ಈ ಸಮಯದಲ್ಲಿ ತಾನೂ ಪ್ರತಿಭಟನಾಕಾರರ ಜೊತೆ ಇರಬೇಕು. ಹತ್ಯೆಯಾದವರ ಕುಟುಂಬದವರ ಜೊತೆಗಿರಬೇಕು' ಎಂದು ಹೇಳಿ ಮಂಗಳೂರಿಗೆ ಹೊರಟಿದ್ದಾರೆ.


ಮಧ್ಯಾಹ್ನ 2 ಗಂಟೆಗೆ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ತೆರಳುವ ಮುನ್ನ 12 ಗಂಟೆಗೆ ತಮ್ಮ ನಿವಾಸ 'ಕಾವೇರಿ'ಯಲ್ಲಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಸಿದ್ದರಾಮಯ್ಯ ಅವರ ಜೊತೆ ಕಾಂಗ್ರೆಸ್ ಪಕ್ಷದ ಇತರ ನಾಯಕರು ಕೂಡ ಮಂಗಳೂರಿಗೆ ತೆರಳುತ್ತಿದ್ದಾರೆ.