ನವದೆಹಲಿ: ತೀವ್ರ ವಿರೋಧ ನಡುವೆ ಕರ್ನಾಟಕ ವಿಧಾನಸಭೆಗೆ ಪ್ರತಿಪಕ್ಷದ ನಾಯಕನಾಗಿ ನೇಮಕಗೊಂಡ ಸಿದ್ದರಾಮಯ್ಯ ಸ್ಥಾನ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ನವದೆಹಲಿಯ 10 ಜನಪಥ್ ನಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ 15 ನಿಮಿಷ ಮಾತುಕತೆ ನಡೆಸಿದರು. ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕನ ಸ್ಥಾನ ನೀಡಿದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಧನ್ಯವಾದ ತಿಳಿಸಲು ದೆಹಲಿಗೆ ಬಂದಿದ್ದೆ. ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದ್ದೇನೆ. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಭರವಸೆ ನೀಡಿದ್ದೇನೆ. ಮುಂದಿನ ತಿಂಗಳು ನಡೆಯುವ 15 ಕ್ಷೇತ್ರಗಳ ಉಪ ಚುನಾವಣೆ  ತಯಾರಿ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಜೊತೆಗೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಬಗ್ಗೆಯೂ ಸೋನಿಯಾ ಗಾಂಧಿ ಮಾಹಿತಿ ಕೇಳಿದರು. ನಾನು ಕರ್ನಾಟಕದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಅವರಿಗೆ ವಿವರಿಸಿದ್ದೇನೆ ಎಂದರು.


ಅನರ್ಹ ಶಾಸಕರನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ.‌ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಮ್ಮ ಸರಕಾರ ಬೀಳಿಸಿದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ.‌ ಬಿಜೆಪಿಯಿಂದ ಬಂದವವರನ್ನು ನಮ್ಮ ಪಕ್ಷದ ಕಾರ್ಯಕರ್ತರು ಒಪ್ಪಬೇಕಾಗುತ್ತದೆ. ಬಂದ ಆಮೇಲೆ ನೋಡೋಣ.‌ ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿ ಬಂದವರೆಲ್ಲರಿಗೂ ಸ್ವಾಗತ. ಆದರೆ ಕಾಂಗ್ರೆಸ್ ಪಕ್ಷದಲ್ಲಿಯೇ ಬಹಳ ಜನ ಅಭ್ಯರ್ಥಿಗಳು ಇದ್ದಾರೆ ಎಂದು ಹೇಳಿದರು.


ಕರ್ನಾಟಕ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಗ್ಗೆ ಮತ್ತೊಮ್ಮೆ ಕಿಡಿಕಾರಿದ ಸಿದ್ದರಾಮಯ್ಯ, ಸ್ಪೀಕರ್ ಕೇಶವ ಕೃಪ ಹೇಳಿದಂತೆ ಕೇಳುತ್ತಾರೆ. ಆರ್ ಎಸ್ ಎಸ್ ಹೇಳಿದಂತೆ ಥೈ ಥೈ ಎಂದು  ಕುಣಿಯುತ್ತಾರೆ ಎಂದರು.  ಆಮೇಲೆ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದ ಸಿದ್ದರಾಮಯ್ಯ, ಬಿಜೆಪಿ ಸರಕಾರ ಸತ್ತು ಹೋಗಿದೆ. ಈ ಸರ್ಕಾರದ ಪಂಚೇಂದ್ರಿಯಗಳು ನಿಷ್ಕ್ರೀಯವಾಗಿವೆ. ಬಿ.ಎಸ್. ಯಡಿಯೂರಪ್ಪ ಅನೈಕ ಮಾರ್ಗದಲ್ಲಿ ಮುಖ್ಯಮಂತ್ರಿ ಆಗಿದ್ದಾರೆ ಎಂದರು.


ಸರಕಾರದ ಬಣ್ಣ ಬಯಲಾಗುತ್ತೆ ಎನ್ನುವ ಕಾರಣಕ್ಕೆ ರಾಜ್ಯ ವಿಧಾನಸಭಾ ಅಧಿವೇಶನವನ್ನು ಹೆಚ್ಚು ದಿನ ನಡೆಸಲಿಲ್ಲ. ಯಾವುದೇ ಚರ್ಚೆಯಿಲ್ಲದೆ ಬಜೆಟ್ ಪಾಸ್ ಮಾಡಿಕೊಂಡಿದ್ದಾರೆ. ಆಡಳಿತಾರೂಢ ಬಿಜೆಪಿಯವರಿಗೆ ತಾವು ಎಕ್ಸಪೋಸ್ ಆಗಿಬಿಡುತ್ತೇವೆ ಎಂಬ ಭಯ ಕಾಡುತ್ತಿದೆ. ಸರ್ಕಾರದಲ್ಲಿ ವರ್ಗಾವಣೆ ಧಂಧೆ ಮಾತ್ರ ನಡೆಯುತ್ತಿದೆ. ಧಂಧೆ ನಡೆಸಲು ಬಾಗಿಲು ತೆಗೆದುಕೊಂಡು ಕುಳಿತಿದ್ದಾರೆ. ಇದರ ಬಗ್ಗೆ ಕೂಡ ಅಧಿವೇಶನದಲ್ಲಿ ಚರ್ಚೆ ಆಗಬೇಕಿತ್ತು ಎಂದು ಹೇಳಿದರು.