ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ಸಮಯದಲ್ಲಿ ದೆಹಲಿಯ ಫ್ಲ್ಯಾಟ್‌ ಹಾಗೂ ಮನೆಯಲ್ಲಿ ದೊರೆತಿರುವ 8.59 ಕೋಟಿ ರೂ. ಮೌಲ್ಯದ ಅಕ್ರಮ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ, ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರ ವಿಚಾರಣೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತತ ನಾಲ್ಕು ದಿನಗಳ ವಿಚಾರಣೆ ಬಳಿಕ ಮಂಗಳವಾರ ಅವರನ್ನು ಬಂಧಿಸಿದೆ. ಇದನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಚಾರಣೆಗೆ ಸಹಕರಿಸುತ್ತಿದ್ದರೂ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿರುವುದು ದ್ವೇಷದ ರಾಜಕಾರಣವಲ್ಲದೆ ಮತ್ತೇನೂ ಅಲ್ಲ. ರಾಜಕೀಯವಾಗಿ, ಕಾನೂನಾತ್ಮಕವಾಗಿ ನಾವು ಡಿ.ಕೆ. ಶಿವಕುಮಾರ್ ಅವರ ಜೊತೆ ಇದ್ದೇವೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿರುವ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, "ನಾಲ್ಕು ದಿನ ವಿಚಾರಣೆ ನಡೆಸಿ ಬಂಧಿಸಿರುವುದು ಸರಿಯಲ್ಲ. ಡಿಕೆಶಿ ವಿರುದ್ಧ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ರಾಜಕೀಯ ದುರುದ್ದೇಶದಿಂದ ಹೀಗೆ ಮಾಡಲಾಗುತ್ತಿದೆ" ಎಂದು ಆರೋಪಿಸಿದರು.


"30-40 ವರ್ಷಗಳಿಂದ ರಾಜಕೀಯದಲ್ಲಿರುವ ಡಿ.ಕೆ. ಶಿವಕುಮಾರ್ ಅವರನ್ನು ಹಬ್ಬದ ದಿನ ಅವರ ಹಿರಿಯರಿಗೆ ಎಡೆ ಇಡಲೂ ಕೂಡ ಅವಕಾಶ ಕೊಡದೆ ವಿಚಾರಣೆಗೆ ಒಳಪಡಿಸಲಾಗಿದೆ. ಮನುಷ್ಯತ್ವ ಇರುವವರು ಹೀಗೆ ನಡೆದುಕೊಳ್ಳುವುದಿಲ್ಲ. ಸಾಕ್ಷ್ಯಾಧಾರಗಳನ್ನು ನಾಶಪಡಿಸುವವರನ್ನು ದಸ್ತಗಿರಿ ಮಾಡಲಿ. ಆದರೆ ತಮ್ಮ ಹಿರಿಯರ ಕಾರ್ಯಕ್ಕೂ ಅವಕಾಶ ಸಿಗದಿದ್ದರೂ ವಿಚಾರಣೆಗೆ ಸಹಕರಿಸಿರುವ ಡಿಕೆಶಿ ಅವರನ್ನು ಬಂಧಿಸುವುದು ಸರಿಯಲ್ಲ. ರಾಜಕೀಯ ಸೇಡಿನಿಂದ ಇದನ್ನು ಮಾಡಲಾಗಿದೆ. ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ ರಾಜಕಾರಣ ಮಾಡಬಾರದು" ಎಂದು ಸಿದ್ದರಾಮಯ್ಯ ಕಿಡಿಕಾರಿದರು.


ರಾಜಕೀಯವಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವ ಪ್ರಯತ್ನ ಇದಾಗಿದೆ ಎಂದು ವಿಶ್ಲೇಷಿಸಿರುವ ಸಿದ್ದರಾಮಯ್ಯ, ರಾಜಕೀಯವಾಗಿ, ಕಾನೂನಾತ್ಮಕವಾಗಿ ಡಿ.ಕೆ. ಶಿವಕುಮಾರ್ ಜೊತೆ ನಾವು ಇದ್ದೇವೆ ಎಂದು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.