ಶ್ರಮಿಕ ವರ್ಗದವರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಸಿದ್ದರಾಮಯ್ಯ ಒತ್ತಾಯ
ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೆ ಬಂದು ಒಂದು ತಿಂಗಳಿಗೂ ಹೆಚ್ಚು ದಿನಗಳಾಗುತ್ತಿವೆ. ಜೀವನೋಪಾಯಕ್ಕೆ ಸಾಂಪ್ರದಾಯಿಕ ವೃತ್ತಿಯನ್ನೇ ಅವಲಂಬಿಸಿರುವ ಸಮುದಾಯಗಳ ಬದುಕು ಇದರಿಂದ ಚಿಂತಾಜಕನ ಪರಿಸ್ಥಿತಿ ತಲುಪಿದೆ- ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ಬೆಂಗಳೂರು: ಲಾಕ್‍ಡೌನ್‍ನಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಸಾಂಪ್ರದಾಯಿಕ ವೃತ್ತಿ ಮಾಡುವವರೂ ಸೇರಿದಂತೆ ಶ್ರಮಿಕ ವರ್ಗದವರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ (Siddaramaiah) ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಾಂಪ್ರದಾಯಿಕ ವೃತ್ತಿ ಮಾಡುವ ವಿವಿಧ ಸಮುದಾಯಗಳು ಹಾಗೂ ಆಟೋ, ಟ್ಯಾಕ್ಸಿ ಸೇರಿದಂತೆ ನಾನಾ ಸಾರಿಗೆ ಸಂಘಟನೆಗಳ ಮುಖಂಡರ ಜೊತೆ ಇಂದು ಸಭೆ ನಡೆಸಿದ ಸಿದ್ದರಾಮಯ್ಯ, ಲಾಕ್‍ಡೌನ್ (Lockdown) ನಿಂದಾಗಿ ಈ ವರ್ಗದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ಆರ್ಥಿಕವಾಗಿ ನೆಲಕಚ್ಚಿರುವ ಶ್ರಮಿಕ ವರ್ಗದವರಿಗಾಗಿ ವಿಶೇಷ ಯೋಜನೆ ರೂಪಿಸದೇ ಇದ್ದರೆ ಲಾಕ್‍ಡೌನ್ ಮುಗಿದ ಕೂಡಲೇ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಹಸಿದವರನ್ನು ರಾಜಕೀಯದ ಕಣ್ಣುಗಳಿಂದ ನೋಡದಿರಿ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೆ ಬಂದು ಒಂದು ತಿಂಗಳಿಗೂ ಹೆಚ್ಚು ದಿನಗಳಾಗುತ್ತಿವೆ. ಜೀವನೋಪಾಯಕ್ಕೆ ಸಾಂಪ್ರದಾಯಿಕ ವೃತ್ತಿಯನ್ನೇ ಅವಲಂಬಿಸಿರುವ ಸಮುದಾಯಗಳ ಬದುಕು ಇದರಿಂದ ಚಿಂತಾಜಕನ ಪರಿಸ್ಥಿತಿ ತಲುಪಿದೆ. ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಈ ಸಮುದಾಯದ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಹೇಳಿದರು.
ಶ್ರಮಿಕ ವರ್ಗದವರಿಗೆ ಉಚಿತವಾಗಿ ಊಟ, ತಿಂಡಿ ಕೊಡಿ ಎಂದು ಮುಖ್ಯಮಂತ್ರಿಗಳನ್ನು ಹಲವು ಬಾರಿ ಒತ್ತಾಯ ಮಾಡಿದ್ದೇನೆ. ಇದಕ್ಕಾಗಿ 18 ರಿಂದ 20 ಕೋಟಿ ರೂ. ವೆಚ್ಚವಾಗಬಹುದು. ಅದಕ್ಕೂ ಸರ್ಕಾರ ಮೀನಮೇಷ ಎಣಿಸುವುದು ಸರಿಯಲ್ಲ. ಸರ್ಕಾರ ಈಗ ವಿತರಣೆ ಮಾಡುತ್ತಿರುವ ದವಸ-ಧಾನ್ಯದ ಕಿಟ್‍ಗಳನ್ನು ಎಲ್ಲರನ್ನೂ ತಲುಪುತ್ತಿಲ್ಲ. ಅದಕ್ಕಾಗಿಯೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು.
ಕೊರೋನಾ ಸೋಂಕಿತರ ಪರೀಕ್ಷೆ ಪ್ರಮಾಣ ಹೆಚ್ಚಿಸುವಂತೆ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ
ಲಾಕ್‍ಡೌನ್ ಅವಧಿಯಲ್ಲಿ ವಿನಾ ಕಾರಣ ರಾಜಕೀಯ ಮಾಡುವುದಿಲ್ಲ. ಹೀಗಾಗಿ ಲಾಕ್‍ಡೌನ್ ಮುಗಿದ ಕೂಡಲೇ ಹೋರಾಟಕ್ಕಿಳಿಯುತ್ತೇವೆ. ಸರ್ಕಾರ ಈ ವರ್ಗದವರಿಗೆ ಏನಾದರೂ ಪರಿಹಾರ ನೀಡಿದೆಯೇ ಎಂಬುದನ್ನು ತಿಳಿದುಕೊಳ್ಳುವ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ಆದರೆ, ಸರ್ಕಾರದಿಂದ ನಮಗೆ ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲ ಎಂದು ಮುಖಂಡರು ಹೇಳಿದ್ದಾರೆ. ಲಾಕ್‍ಡೌನ್ ಮುಗಿದ ಬಳಿಕ ಎದುರಾಗಬಹುದಾದ ಸನ್ನಿವೇಶ ಕುರಿತು ಎಲ್ಲರೂ ಆತಂಕ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಲಿಖಿತ ರೂಪದಲ್ಲಿ ಸಮಸ್ಯೆಗಳನ್ನು ವಿವರಿಸಿದ್ದಾರೆ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಸೆಲೂನ್‍ಗಳು ರಾಜ್ಯಾದ್ಯಂತ ಬಂದ್ ಆಗಿವೆ. ಸವಿತಾ ಸಮಾಜದವರು ಇದರಿಂದ ತೀವ್ರ ನಷ್ಟಕ್ಕೆ ಒಳಗಾಗಿ ಬೀದಿಪಾಲಾಗುವ ಹಂತ ತಲುಪಿದ್ದಾರೆ. ಮಡಿವಾಳರು, ಕುಂಬಾರರು, ಅಕ್ಕಸಾಲಿಗರು, ಗಾಣಿಗರ ಪರಿಸ್ಥಿತಿಯೂ ಇದೇ ರೀತಿ ಆಗಿದೆ. ಏಕೆದಂರೆ ಇವರೆಲ್ಲ ದಿನವೂ ದುಡಿದು ಸಂಪಾದನೆ ಮಾಡಿ ಜೀವನ ನಡೆಸುವವರು. ಸಂಘಟಿತ ಕಾರ್ಮಿಕರು 20 ಲಕ್ಷದಷ್ಟಿದ್ದಾರೆ. ಈ ಪೈಕಿ 12 ಲಕ್ಷ ಮಂದಿಗೆ ಮಾತ್ರ ಸರ್ಕಾರ ಕಾರ್ಮಿಕ ಕಲ್ಯಾಣ ನಿಧಿಯಿಂದ ಎರಡು ಸಾವಿರ ರೂ.ಗಳ ಸಹಾಯಧನ ನೀಡಿದೆ. ಉಳಿದವರಿಗೆ ಲೈಸೆನ್ಸ್ ನವೀಕರಣವಾಗಿಲ್ಲ ಎಂಬ ನೆಪ ಹೇಳಿ ಸಹಾಯಧನ ನೀಡುತ್ತಿಲ್ಲ. ಅಸಂಘಟಿತ ವಲಯದ ಬಹುತೇಕ ಕಾರ್ಮಿಕರಿಗೆ ಯಾವುದೇ ರೀತಿಯ ನೆರವು ಸಿಕ್ಕಿಲ್ಲ. ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಕೆಲವು ಕಾರ್ಮಿಕರಿಗೆ ಮಾತ್ರ ಆಹಾರದ ಪ್ಯಾಕೇಟ್‍ಗಳು ದೊರೆಯುತ್ತಿದೆ. ಈ ವಿಚಾರದಲ್ಲಿ ಬೆಂಗಳೂರಿಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಪಾಲಿಕೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ವರ್ತನೆ ತೋರುವುದು ಸರಿಯಲ್ಲ ಎಂದು ಹೇಳಿದರು.
ರಸ್ತೆ ತೆರಿಗೆ, ಮಾಸಿಕ ಕಂತು, ವಿಮೆ ಕಂತು, ವಿಮಾಣ ನಿಲ್ದಾಣದಲ್ಲಿ ಪಾರ್ಕಿಂಗ್ ಶುಲ್ಕ ಪಾವತಿ ಮಾಡುವುದು ನಮ್ಮಿಂದಾಗದು. ಅದನ್ನು ಮನ್ನಾ ಮಾಡಬೇಕು ಎಂದು ಟ್ಯಾಕ್ಸಿ ಚಾಲಕರು, ಮಾಲೀಕರು ಇಂದಿನ ಸಭೆಯಲ್ಲಿ ಹೇಳಿದ್ದಾರೆ. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ.
ಸರ್ಕಾರ ಈ ವರ್ಗದವರಿಗೆ ವಿಶೇಷ ಪ್ಯಾಕೇಜ್ ಮಾಡದಿದ್ದರೆ ಜನ ಹಸಿವಿನಿಂದ ಬಳಲುವ ಪರಿಸ್ಥಿತಿ ಉಂಟಾಗುತ್ತದೆ. ಹೀಗಾಗಿ ಸರ್ಕಾರ ಕೂಡಲೇ ಇವರ ರಕ್ಷಣೆಗೆ ಧಾವಿಸಬೇಕು ಎಂದು ಸಿದ್ದರಾಮಯ್ಯ ಅವರು ಹೇಳಿದರು.
ವಿರೋಧ ಪಕ್ಷಗಳ ನಾಯಕರ ಸಭೆ:
ಲಾಕ್‍ಡೌನ್ ನಿಂದ ರೈತರು (Farmers), ಕಾರ್ಮಿಕರು, ಮಧ್ಯಮ ವರ್ಗದವರು, ಶ್ರಮಿಕ ವರ್ಗದವರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಲು ಗುರುವಾರ ವಿರೋಧ ಪಕ್ಷಗಳ ನಾಯಕರ ಸಭೆ ಕರೆದಿದ್ದೇನೆ. ಜೆಡಿಎಸ್, ಜೆಡಿಯು, ಸಿಪಿಐ, ಸಿಪಿಐಎಂ, ಬಿಎಸ್‍ಪಿ, ರೈತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar), ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ. ರೇವಣ್ಣ, ಎಂ.ಸಿ. ವೇಣುಗೋಪಾಲ್, ಮಾಜಿ ಸದಸ್ಯ ಎಂ.ಡಿ. ಲಕ್ಷ್ಮಿನಾರಾಯಣ, ಮಾಜಿ ಸಂಸದರಾದ ವಿ.ಎಸ್. ಉಗ್ರಪ್ಪ ಇಂದಿನ ಸಭೆಯಲ್ಲಿ ಉಪಸ್ಥಿತರಿದ್ದರು.