ಬೆಂಗಳೂರು: ಹಿರಿಯ ಪತ್ರಕರ್ತರಾದ ರಾಜಾ ಶೈಲೇಶ ಚಂದ್ರಗುಪ್ತ ಅವರು ಪತ್ರಿಕೋದ್ಯಮದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಾಗೂ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲು ಭಾನುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಜ್ಜನರಾವ್ ವೃತ್ತದಲ್ಲಿರುರುವ ವಾಸವಿ ವಿದ್ಯಾ ನಿಕೇತನ ಶಾಲೆಗೆ ಭೇಟಿ ನೀಡಿದ್ದರು.


COMMERCIAL BREAK
SCROLL TO CONTINUE READING

ಕಾರ್ಯಕ್ರಮ ಮುಗಿಸಿ ಬರುವಾಗ ಸಭಾಂಗಣದ ಪಕ್ಕದಲ್ಲೇ ಇದ್ದ ಕೊಠಡಿಯಲ್ಲಿ ಬರವಣಿಗೆ ತರಬೇತಿ ತರಗತಿ ನಡೆಯುತ್ತಿತ್ತು. ಆ ಕೊಠಡಿಗೆ ಬರುವಂತೆ ಸಿದ್ದರಾಮಯ್ಯ ಅವರಿಗೆ ವಿದ್ಯಾರ್ಥಿಗಳು ಒಕ್ಕೊರಲ ಮನವಿ ಮಾಡಿದರು.


ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಸಿದ್ದರಾಮಯ್ಯ, ಕೊಠಡಿ ಪ್ರವೇಶ ಮಾಡುತ್ತಿದ್ದಂತೆ ವಿದ್ಯಾರ್ಥಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಇದೇ ವೇಳೆ ಬರವಣಿಗೆ ತರಬೇತಿ ಕುರಿತು ಮಾಹಿತಿ ಪಡೆದ ಸಿದ್ದರಾಮಯ್ಯ ಅವರು, ವಿದ್ಯಾರ್ಥಿಗಳನ್ನು ಅಭಿನಂದಿಸಿದರು. 


ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಅವರು ಪ್ರಶಸ್ತಿ ನೀಡಿದರು. ಸಿದ್ದರಾಮಯ್ಯ ಅವರಿಂದ ಅನಿರೀಕ್ಷಿತವಾಗಿ ಪ್ರಶಸ್ತಿ ಸ್ವೀಕಾರ ಮಾಡಿದ ವಿದ್ಯಾರ್ಥಿನಿಯೊಬ್ಬರು ಭಾವುಕರಾದರು. ಆ ವಿದ್ಯಾರ್ಥಿನಿಯನ್ನು ಸಂತೈಸಿ ಸಿದ್ದರಾಮಯ್ಯ ಅವರು ಶುಭ ಕೋರಿದರು.


ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಗರದ ವಾಸವಿ ವಿದ್ಯಾನಿಕೇತನ ಶಾಲೆಯ ಮುಗ್ಧ ಬಾಲಕ-ಬಾಲಕಿಯರ ಜೈಕಾರ ಒಂದು ಕ್ಷಣ ನನ್ನನ್ನು ಭಾವುಕನನ್ನಾಗಿಸಿತು. ವಿದ್ಯಾರ್ಥಿಗಳ ಒಲವಿನ ಕರೆಗೆ‌ ಓಗೊಟ್ಟು ತರಗತಿ ಪ್ರವೇಶಿಸಿ‌ ಒಂದಷ್ಟು ಕಾಲ‌ಕಳೆದೆ. ರಾಜಕೀಯದ ಮಧ್ಯದ ಇಂತಹ ಬಿಡುವು ಮನಸ್ಸನ್ನು ಚೇತೋಹಾರಿಯನ್ನಾಗಿಸುತ್ತದೆ. ಮುದ್ದಿನ ಮಕ್ಕಳಿಗೆ ಥ್ಯಾಂಕ್ಸ್ ಎಂದು ಬರೆದುಕೊಂಡಿದ್ದಾರೆ.