ಬೆಳಗಾವಿ: ಗ್ರಾನೈಟ್ ಕ್ವಾರಿಯಿಂಗ್ ಸಂಬಂಧಿಸಿದಂತೆ ರಾಜ್ಯಕ್ಕೆ ರಾಜಧನ ನಷ್ಟವಾಗದಂತೆ ಉದ್ಯಮಿಗಳಿಗೆ ಪರವಾನಿಗೆ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೂಚನೆ ನೀಡಿದರು. 


COMMERCIAL BREAK
SCROLL TO CONTINUE READING

ಗುರುವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಗ್ರಾನೈಟ್ ಕ್ವಾರಿಯಿಂಗ್ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ನಡೆದ ಚರ್ಚೆಯಲ್ಲಿ ಉದ್ಯಮಿಗಳ ಸಮಸ್ಯೆಯನ್ನು ಆಲಿಸಿದ ಮುಖ್ಯಮಂತ್ರಿಗಳು ಮೇಲ್ಕಂಡಂತೆ ಸೂಚನೆ ನೀಡಿದರು. 



ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶ ವ್ಯಾಪ್ತಿಯ ಶಾಸಕರು ನೀಡಿದ ಸಲಹೆಗಳನ್ನು ಪರಿಗಣಿಸಿ ಗ್ರನೈಟ್ ಉದ್ಯಮಗಳು ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸಲು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.


ಗಣಿ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರು ಸಭೆಯಲ್ಲಿ ಮಾತನಾಡಿ, ಈಗಾಗಲೇ ಪರವಾನಿಗೆ ನೀಡುವ ಸಂಬಂಧ ಕಾನೂನು ಸರಳೀಕರಣಗೊಳಿಸಲು ನೆರೆ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಅಧ್ಯಯನ ವರದಿಯೂ ಸಲ್ಲಿಕೆಯಾಗಿದ್ದು ಶೀಘ್ರವೇ ಕಾನೂನು ಸರಳೀಕರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದರು. 


ಉದ್ಯಮಿಗಳು ಗ್ರಾನೈಟ್ ಕ್ವಾರಿಯಿಂಗ್ ಎದುರಿಸುತ್ತಿರುವ ಸಮಸ್ಯೆ ಪರಿಹರಿಸಲು ಅದರಲ್ಲೂ ಮುಖ್ಯವಾಗಿ ಪಟ್ಟಾ ಭೂಮಿಯಲ್ಲಿ ಪರವಾನಿಗೆ ಪಡೆಯಲು ಸಮಸ್ಯೆಯನ್ನು ನಿವಾರಿಸಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
 
ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಗಣಿ ಇಲಾಖೆ ಸಚಿವರಾದ ರಾಜಶೇಖರ್ ಪಾಟೀಲ್, ಲೋಕೋಪಯೋಗಿ ಇಲಾಖೆ ಸಚಿವರಾದ ಹೆಚ್ ಡಿ ರೇವಣ್ಣ, ವಿಧಾನಪರಿಷತ್ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ, ಇಲಾಖೆ ನಿರ್ದೇಶಕ ಪ್ರಸನ್ನಕುಮಾರ್ ಸಭೆಯಲ್ಲಿದ್ದರು.