ರುದ್ರಾಕ್ಷಿ ರಥದಲ್ಲಿ ಸಿದ್ಧಗಂಗಾ ಸ್ವಾಮೀಜಿ ಅಂತಿಮ ಯಾತ್ರೆ
ಆರು ಅಡಿ ಎತ್ತರದ ತೇರಿನಲ್ಲಿ ರುದ್ರಾಕ್ಷಿ ಪಲ್ಲಕ್ಕಿ ಒಳಗೆ ಸಿದ್ದಗಂಗಾಶ್ರೀಗಳ ಲಿಂಗಶರೀರವನ್ನು ಇಟ್ಟು ಸುಮಾರು 400 ಮೀಟರ್ ದೂರದವರೆಗೆ ಮೆರವಣಿಗೆ ಮೂಲಕ ಕ್ರಿಯಾ ಸಮಾಧಿ ಸ್ಥಳಕ್ಕೆ ತರಲಾಯಿತು.
ತುಮಕೂರು: ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗ ಶರೀರದ ಅಂತಿಮ ಯಾತ್ರೆ ರುದ್ರಾಕ್ಷಿ ರಥದಲ್ಲಿ ನೆರವೀರಿಸಲಾಯಿತು.
ಆರು ಅಡಿ ಎತ್ತರದ ತೇರಿನಲ್ಲಿ ರುದ್ರಾಕ್ಷಿ ಪಲ್ಲಕ್ಕಿ ಒಳಗೆ ಸಿದ್ದಗಂಗಾಶ್ರೀಗಳ ಲಿಂಗಶರೀರವನ್ನು ಇಟ್ಟು ಸುಮಾರು 400 ಮೀಟರ್ ದೂರದವರೆಗೆ ಮೆರವಣಿಗೆ ಮೂಲಕ ಕ್ರಿಯಾ ಸಮಾಧಿ ಸ್ಥಳಕ್ಕೆ ತರಲಾಯಿತು. ಶಿವೈಕ್ಯ ಶರೀರದ ಮೆರವಣಿಗೆ ಮುಂದೆ ಸುಮಾರು 400ಕ್ಕೂ ಅಧಿಕ ಸ್ವಾಮೀಜಿಗಳು ಭಾಗವಹಿಸಿದ್ದರು.
ಸೋಮವಾರ ಬೆಳಿಗ್ಗೆ 11.44ರಲ್ಲಿ ಶಿವೈಕ್ಯರಾದ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳ ಲಿಂಗ ಶರೀರವನ್ನು ಮಂಗಳವಾರ ಮಧ್ಯಾಹ್ನ 4 ಗಂಟೆಯವರೆಗೂ ಶ್ರೀ ಸಿದ್ದಗಂಗಾ ಮಠದ ಆವರಣದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ರುದ್ರಾಕ್ಷಿ ರಥದಲ್ಲಿ ಮೆರವಣಿಗೆ ಮೂಲಕ ಶ್ರೀಗಳ ಲಿಂಗ ಶರೀರವನ್ನು ಕ್ರಿಯಾ ಸಮಾಧಿ ಸ್ಥಳಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿ ಸಿದ್ದಲಿಂಗ ಶ್ರೀಗಳು ರಥದ ಮುಂಭಾಗದಲ್ಲೇ ಹೆಜ್ಜೆಹಾಕಿದರು.
ಇನ್ನೇನು ಕೆಲವೇ ಕ್ಷಣಗಳಲ್ಲಿ ಅಂತಿಮ ವಿಧಿ-ವಿಧಾನ ನೆರವೇರಲಿದೆ. ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗಿಯಾಗಲಿದ್ದಾರೆ.