ನವದೆಹಲಿ: ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ಅವರನ್ನು ಭೇಟಿಯಾದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯದ ನಿಯೋಗ ಮಳೆಹಾನಿ ಪರಿಹಾರ ನೀಡುವಂತೆ ಮನವಿ ಮಾಡಿದರು.


COMMERCIAL BREAK
SCROLL TO CONTINUE READING

ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ನಿಯೋಗವು ಕೊಡಗಿನ ಪ್ರವಾಹ ಪರಿಸ್ಥಿತಿ ಮತ್ತು ಕೈಗೊಂಡಿರುವ  ಪರಿಹಾರ ಕಾರ್ಯಗಳ ಬಗ್ಗೆ ಹಾಗೂ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದರು. ಪರಿಹಾರಕ್ಕಾಗಿ ಎರಡನೇ ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ನಿಯೋಗವು ರಾಜ್ಯದಲ್ಲಿ ಮಳೆಹಾನಿಯಿಂದ 3ಸಾವಿರ ಕೋಟಿ ನಷ್ಟವಾಗಿದೆ. ಹೀಗಾಗಿ ಎನ್ ಡಿಆರ್ ಎಫ್ ನಿಂದ ಬೇಗ ಪರಿಹಾರ ಬಿಡುಗಡೆ ಮಾಡಿ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಬಳಿ ಮನವಿ ಮಾಡಿದರು.


ಈ ಸಮಯದಲ್ಲಿ ಮಾಜಿ ಪ್ರಧಾನಿ ಹಾಗೂ ಹಾಸನ ಸಂಸದರಾದ ಹೆಚ್.ಡಿ. ದೇವೇಗೌಡರು, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಉಪಸ್ಥಿತರಿದ್ದರು.


ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ದೇವೇಗೌಡ, ಕೊಡಗು ಪ್ರವಾಹ ಹಿನ್ನೆಲೆ ಪ್ರಧಾನಿ ಭೇಟಿಗೆ ಅವಕಾಶ ಕೇಳಿದ್ದೆ, ರಷ್ಯಾ ಅಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ  ಪ್ರಧಾನಿ ಭೇಟಿ ಸಾಧ್ಯವಾಗಲಿಲ್ಲ. ಗೃಹ ಸಚಿವರ ಭೇಟಿಗೆ ಪ್ರಧಾನಿಯವರು ಸೂಚಿಸಿದರು, ಹಾಗಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಪ್ರವಾಹದಿಂದಾಗಿ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಕೇಂದ್ರ ಸರ್ಕಾರದ ತಂಡ ನೀಡಿದ್ದ ವರದಿ ಆಧರಿಸಿ ಪರಿಹಾರ ನೀಡುವಂತೆ ಮನವಿ ಮಾಡಿದೆವು ಎಂದು ತಿಳಿಸಿದರು.


ರಾಜನಾಥ್ ಸಿಂಗ್ ಅವರ ಭೇಟಿ ಬಳಿಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ವಿವಿಧ ರಸ್ತೆ ಅಭಿವೃದ್ಧಿ ಯೋಜನಾ ಕಾಮಗಾರಿಗಳ ಬಗ್ಗೆ ಚರ್ಚೆಸಿದರು. 



ಈ ವೇಳೆ ಚಿಕ್ಕಮಗಳೂರು -ಬಿಳಿಕೆರೆ ಮತ್ತು  ಬಾಣಾವರ - ಹುಳಿಯಾರು ರಸ್ತೆಗಳ ಮೇಲ್ದರ್ಜೆಗೆರಿಸುವ ಯೋಜನೆಗಳ ಶಂಕುಸ್ಥಾಪನೆಗೆ ಚಾಲನೆ ನೀಡುವಂತೆ ಮನವಿ ಮಾಡಿದರು. 


ಈ ವೇಳೆ ಮೇಕೆದಾಟು ಯೋಜನೆಗೆ ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ ಕಾವೇರಿ ನೀರನ್ನು ಬಳಸಿಕೊಂಡರೆ ಉಂಟಾಗುವ ಪ್ರಯೋಜನೆಗಳ ಬಗ್ಗೆ ವಿವರವಾಗಿ ಚರ್ಚಿಸಿದರು. ಈ ವೇಳೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಸಾಥ್ ನೀಡಿದರು.