ನವದೆಹಲಿ: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರದಿಂದ ತೀವ್ರ ವಿರೋಧ ಕೇಳಿಬಂದ ಬೆನ್ನಲ್ಲೇ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಇಂದು ದೆಹಲಿಯ ತಮ್ಮ ನಿವಾಸದಲ್ಲಿ ರಾಜ್ಯ ಸಂಸದರ ಸಭೆ ಕರೆದಿದ್ದಾರೆ. 


COMMERCIAL BREAK
SCROLL TO CONTINUE READING

ಸಭೆಯಲ್ಲಿ ರಾಜ್ಯ ಸಂಸದರು, ಕರ್ನಾಟಕ ರಾಜ್ಯದ ನೀರಾವರಿ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪಾಲ್ಗೊಳ್ಳಲಿದ್ದು ಮೇಕೆದಾಟು ಹಾಗೂ ಮಹಾದಾಯಿ ನೀರಾವರಿ ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ.


ಇಂದಿನ ಸಭೆಯಲ್ಲಿ ರಾಜ್ಯದ ಸಂಸದರಿಗೆ ಯೋಜನೆಯ ಲಾಭದ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ನಡೆಯಲಿದ್ದು, ಇದರ ಜೊತೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ವಿಚಾರ ಕುರಿತೂ ಚರ್ಚೆಗಳು ನಡೆಯಲಿದೆ. ಸಭೆಯಲ್ಲಿ ಹೆಚ್.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಸದಾನಂದಗೌಡ, ಡಿ.ಕೆ. ಶಿವಕುಮಾರ್ ಸೇರಿದಂತೆ ಮತ್ತಿತರರು ಭಾಗಿಯಾಗಲಿದ್ದಾರೆ.


ಮೇಕೆ ದಾಟು ಯೋಜನೆಗೆ ಕೇಂದ್ರ ಜಲ ಆಯೋಗವು (ಸಿಡಬ್ಲೂಸಿ) ಸಮಗ್ರ ಯೋಜನಾ ವರದಿ (ಡಿಪಿಆರ್‌) ಕೇಳಿದ ಬೆನ್ನಲ್ಲೇ ಕ್ಯಾತೆ ತೆಗೆದಿದ್ದ ತಮಿಳುನಾಡು ಸರ್ಕಾರದಿಂದ ಯೋಜನೆಯನ್ನು ತಡೆಯುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಬಳಿಕ ಮೇಕೆದಾಟು ಯೋಜನೆ ವಿಚಾರವಾಗಿ ಮಾತುಕತೆಗೆ ಮುಂದಾಗಿದ್ದ ಕರ್ನಾಟಕ ಸರ್ಕಾರದ ಆಹ್ವಾನವನ್ನು ತಿರಸ್ಕರಿಸಿದ್ದ ತಮಿಳುನಾಡು ಸರ್ಕಾರ ಕರ್ನಾಟಕದೊಂದಿಗೆ ಯಾವುದೇ ಮಾತುಕತೆ ಇಲ್ಲವೆಂದು ಹೇಳಿತ್ತು.


ಈ ಎಲ್ಲಾ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇಂದಿನ ಸಭೆ ಬಹಳ ಮಹತ್ವದ್ದಾಗಿದೆ.