ಪಕ್ಷೇತರ ಶಾಸಕರ ಅರ್ಜಿ ಇತ್ಯರ್ಥಕ್ಕೆ ಸಮ್ಮತಿ: ಅತೃಪ್ತರ ಪರ ವಕೀಲರಿಗೆ ಸಿಜೆಐ ತರಾಟೆ!
ಪಕ್ಷೇತರರು ಅರ್ಜಿಯನ್ನು ವಾಪಸ್ ಪಡೆಯುವುದಾದರೆ ನಮ್ಮದೇನು ಅಭ್ಯಂತರವಿಲ್ಲ ಎಂದು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ತಿಳಿಸಿದ್ದಾರೆ.
ನವದೆಹಲಿ: ಪಕ್ಷೇತರರು ಅರ್ಜಿಯನ್ನು ವಾಪಸ್ ಪಡೆಯುವುದಾದರೆ ನಮ್ಮದೇನು ಅಭ್ಯಂತರವಿಲ್ಲ ಎಂದು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದು, ರಾಜ್ಯದ ಇಬ್ಬರು ಪಕ್ಷೇತರ ಶಾಸಕರಿಗೆ ತಮ್ಮ ಅರ್ಜಿಯನ್ನು ಹಿಂಪಡೆಯಲು ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದೆ. ಆದರೆ ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಅವರನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಕ್ಷೇತರ ಶಾಸಕರಾದ ಮುಳಬಾಗಿಲಿನ ಎಚ್. ನಾಗೇಶ್ ಮತ್ತು ರಾಣೇಬೆನ್ನೂರು ಶಾಸಕ ಆರ್. ಶಂಕರ್ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠ, ಇಬ್ಬರು ಪಕ್ಷೇತರ ಶಾಸಕರಿಗೆ ತಮ್ಮ ಅರ್ಜಿಯನ್ನು ಹಿಂಪಡೆಯಲು ಅನುಮತಿಸಿತು.
ಪಕ್ಷೇತರರ ಅರ್ಜಿ ವಿಚಾರಣೆ ಇಂದು ಅಸಾಧ್ಯ: ಸುಪ್ರೀಂಕೋರ್ಟ್
ಇದೇ ಸಂದರ್ಭದಲ್ಲಿ ಅತೃಪ್ತರ ಪರ ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರನ್ನು ತರಾಟೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನಿಮಗೆ ಬೇಕಾಗಿದ್ದಾಗ ಮಧ್ಯರಾತ್ರಿ ನಾವು ವಿಚಾರಣೆ ನಡೆಸಬೇಕು. ಅಗತ್ಯ ಇದ್ದರೆ ತುರ್ತು ವಿಚಾರಣೆ ನಡೆಸಿ ಆದೇಶ ನೀಡಬೇಕು. ಆದರೆ, ನಾವು ಕರೆದಾಗ ಕೋರ್ಟಿಗೆ ನೀವು ಹಾಜರಾಗಲ್ಲ. ವಿವಾದ ಮುಗಿದು ಎರಡು ದಿನ ಕಳೆದರೂ ನ್ಯಾಯಾಲಯಕ್ಕೆ ಮಾಹಿತಿ ನೀಡಿಲ್ಲ. ನಿನ್ನೆಯೇ ಜೂನಿಯರ್ ಮೂಲಕ ತಿಳಿಸಿದ್ದರೂ ಸಹ ಇಂದೂ ಕೂಡ ಹಾಜರಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.