ನವದೆಹಲಿ: ಸೋಮವಾರ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಯಾಚಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಅಸಾಧ್ಯ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಸ್ಪೀಕರ್ ಪರ ಅಭಿಷೇಕ್ ಮನು ಸಿಂಘ್ವಿ, ಕೆಪಿಸಿಸಿ ಪರ ಕಪಿಲ್ ಸಿಬಲ್ , ಪಕ್ಷೇತರರ ಪರ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ತರಾತುರಿಯಲ್ಲಿ ವಿಚಾರಣೆಗೆ ಮುಂದಾಗದ ನ್ಯಾಯಾಲಯ, ಇಂದು ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಇಬ್ಬರು ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ನಡೆಸುವ ಬಗ್ಗೆ ನಾಳೆ ನೋಡುತ್ತೇವೆ ಎಂದು ಹೇಳಿದೆ.
ರಾಜ್ಯಪಾಲರ ಸೂಚನೆ ಬಳಿಕವೂ ಮುಖ್ಯಮಂತ್ರಿಯವರು ವಿಶ್ವಾಸ ಮತ ಯಾಚನೆ ತಡಮಾಡುತ್ತಿದ್ದಾರೆ ಎಂದು ಪಕ್ಷೇತರರ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ, ಹಿಂದೆ ನೀಡಿದ್ದ ರೀತಿ ಈಗಲೂ ಗಡುವು ನೀಡುವಂತೆ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಮನವಿ ಮಾಡಿದರು.
ಆದರೆ ಪಕ್ಷೇತರರ ಅರ್ಜಿ ವಿಚಾರಣೆ ಇಂದು ಅಸಾಧ್ಯ ಎಂದು ತಿಳಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ, ನಾಳೆ ವಿಚಾರಣೆ ನಡೆಸುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಇಂದಿನ ಅಧಿವೇಶನದ ಬಗ್ಗೆ ತ್ರಿಸದಸ್ಯ ಪೀಠ ಗಮನ ಹರಿಸಲಿದೆ. ಇಂದಿನ ಕಲಾಪದಲ್ಲಿ ಏನಾಗುತ್ತೋ ನೋಡಿ ಅದರ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಪಕ್ಷೇತರ ಶಾಸಕರಾದ ಆರ್. ಶಂಕರ್ ಹಾಗೂ ನಾಗೇಶ್ ಅವರು ಸೇರಿ, ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚನೆಯನ್ನು ಪದೇ ಪದೇ ಮುಂದೂಡುತ್ತಿದ್ದಾರೆ. ಇಂದು ಸಂಜೆ 5 ಗಂಟೆಯ ಒಳಗೆ ವಿಶ್ವಾಸಮತ ಸಾಭೀತು ಪಡಿಸುವಂತೆ ಸೂಚಿಸಬೇಕೆಂದು ಪ್ರತ್ಯೆಕವಾಗಿ ಅರ್ಜಿಯನ್ನು ಸಲ್ಲಿಸಿದ್ದರು.