ಬೆಂಗಳೂರು: ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಬಿಜೆಪಿಯವರು ಮಾತನಾಡುತ್ತಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಬಾರದ್ದನ್ನು ಮಾಡಿ ಜೈಲಿಗೂ ಹೋಗಿ ಬಂದ ಅವರು ದಿನಕ್ಕೊಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ‌. ಬಿಬಿಎಂಪಿಯಲ್ಲಿ ಐದು ವರ್ಷ ಬಿಜೆಪಿಯವರೇ ಆಡಳಿತ ನಡೆಸಿದರು. ಆದರೂ ಅವರೇಕೆ ಬೆಂಗಳೂರು ನಗರದ ಅಭಿವೃದ್ಧಿ ಮಾಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಪ್ರಶ್ನಿಸಿದರು.


COMMERCIAL BREAK
SCROLL TO CONTINUE READING

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ  ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಿದ್ದರಾಮಯ್ಯ, ನಾವು ಬಿಬಿಎಂಪಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ರಾಜ ಕಾಲುವೆ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ಬಿಜೆಪಿಯವರು ಆಡಳಿತ ನಡೆಸುವಾಗ ಎಂಟು ಸಾವಿರ ಕೋಟಿ ರೂ.ಗಳ ಪಾಲಿಕೆ ಆಸ್ತಿಯನ್ನು ಅಡಮಾನ ಇಟ್ಟಿದ್ದರು. ನಾವು ಈಗ ಅದನ್ನು ಒಂದೊಂದಾಗಿ ಬಿಡಿಸಿಕೊಳ್ಳುತ್ತಿದ್ದೇವೆ. ಮುಂದೆ ನಾವು ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರಿನ ಎಲ್ಲ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಮಾಡುತ್ತೇವೆ. ಈಗಾಗಲೇ ಒಂದು ಸಾವಿರ ಕೋಟಿಯನ್ನು ಅದಕ್ಕಾಗಿ ಖರ್ಚು ಮಾಡಿದ್ದೇವೆ ಎಂದರು.


ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಬಿಬಿಎಂಪಿಗೆ 7,300 ಕೋಟಿ ರೂ.ಗಳ ಅನುದಾನ ಕೊಟ್ಟಿದೆ. ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದೆ. ಒತ್ತಡದ ಪರಿಣಾಮ ಆಡಳಿತ ಕಷ್ಟವಾಗಿದೆ. ಹೀಗಾಗಿ ಬಿಬಿಎಂಪಿ ವಿಭಜನೆ ಕುರಿತು ಚಿಂತನೆ ನಡೆದಿದೆ. ನಾಡಪ್ರಭು ಕೆಂಪೇಗೌಡರ ಹೆಸರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಿದವರು ನಾವು. ಜೊತೆಗೆ ಅವರ ಹೆಸರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅದ್ಯಯನ ಕೇಂದ್ರ ಸ್ಥಾಪಿಸಿದ್ದೇವೆ. ಇದನ್ನು ವೋಟಿಗಾಗಿ ಮಾಡಿಲ್ಲ. ಕೆಂಪೇಗೌಡರಿಗೆ ಗೌರವ ಸಲ್ಲಿಸಲು ಮಾಡಿದ್ದೇವೆ. ಇದರಲ್ಲಿ ರಾಜಕಾರಣ ಇಲ್ಲ ಎಂದು ತಿಳಿಸಿದರು.


ಬಿಬಿಎಂಪಿಗೆ ಹೊಸದಾಗಿ ಸೇರಿದ ಹಳ್ಳಿಗಳಿಗೆ ರಸ್ತೆ, ನೀರು, ಚರಂಡಿ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ಇಂದಿರಾ ಕ್ಯಾಂಟೀನ್ ನಮ್ಮ ಕೊಡುಗೆ. ಹಿಂದಿನವರು ಏಕೆ ಈ ಕೆಲಸ ಮಾಡಲಿಲ್ಲ. ಆಗ ಬಡವರು ಇರಲಿಲ್ಲವೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಅಕ್ಟೋಬರ್ 2ಕ್ಕೆ ಇನ್ನೂ 50, ನವೆಂಬರ್ 1ಕ್ಕೆ 47  ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಲಿದೆ. ಅಷ್ಟೇಯಲ್ಲ, ಆಸ್ಪತ್ರೆಗಳಲ್ಲಿ ಸಹ ಕ್ಯಾಂಟೀನ್ ಆರಂಭಿಸಲಾಗುವುದು ಎಂದು ಹೇಳಿದರು.


ಪೌರ ಕಾರ್ಮಿಕರ ಸೇವೆ ಕಾಯಂ ಮತ್ತು ಅವರ ಸಂಬಳ ಹೆಚ್ಚಿಸುವ ಕೆಲಸವನ್ನು ನಾವು ಮಾಡಿದ್ದೇವೆ‌. ಪ್ರತಿ ತಿಂಗಳು ತಲಾ 17 ಸಾವಿರ ರೂ.ಗಳ ವೇತನ ಪೌರ ಕಾರ್ಮಿಕರ ಅಕೌಂಟ್ ಗೆ ನೇರವಾಗಿ ಹೋಗುತ್ತದೆ. ಕೊಳೆಗೇರಿ ನಿವಾಸಿಗಳ ನೀರಿನ ಬಾಕಿ ಬಿಲ್ ಮನ್ನಾ ಮಾಡಿದ್ದು, ಪ್ರತಿ ತಿಂಗಳು ಅವರಿಗೆ ಹತ್ತು ಸಾವಿರ ಲೀಟರ್ ನೀರು ಉಚಿತವಾಗಿ ಕೊಡುತ್ತಿದ್ದೇವೆ ಎಂದರು.


ಬೆಂಗಳೂರು ನಗರ ಡೈನಾಮಿಕ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರಿನ ಬ್ರಾಂಡ್ ಉಳಿಸಿಕೊಳ್ಳಲು ಎಲ್ಲ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.