ಬೆಂಗಳೂರು: ರಾಷ್ಟ್ರ ಯುವಜನೋತ್ಸವದಲ್ಲಿ ಭಾಗಿಯಾಗಲು ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಬರುತ್ತಿದ್ದಾರೆ. ನಿಜವಾಗಿ ಇದು ಯುವ ಜನರಿಗೆ ಮಾರಕವಾದ ಉತ್ಸವ. ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ, ಉದ್ಯೋಗ ಕೇಳಿದ ಯುವಕರಿಗೆ ಪಕೋಡ ಮಾರಲು ಹೋಗಿ ಎಂದರು. ಮೋದಿ ಮೋದಿ ಎಂದು ಕೂಗುತ್ತಿದ್ದವರಿಗೆ ಬಿಜೆಪಿ ಪಕ್ಷ ಮಕ್ಮಲ್‌ ಟೋಪಿ ಹಾಕಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದಿನಿಂದ ಜನವರಿ 28ನೇ ತಾರೀಖಿನ ವರೆಗೆ 20 ರಿಂದ 22 ಜಿಲ್ಲಾ ಕೇಂದ್ರಗಳಿಗೆ ಪ್ರಜಾಧ್ವನಿ ರಥಯಾತ್ರೆ ಮೂಲಕ ಭೇಟಿ ನೀಡುತ್ತೇವೆ. ಕಾಂಗ್ರೆಸ್‌ ಪಕ್ಷ ನುಡಿದಂತೆ ನಡೆಯುವ ಪಕ್ಷ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಸಮಾಜದ ಎಲ್ಲಾ ವರ್ಗದ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಬಲೀಕರಣಕ್ಕಾಗಿ ಶ್ರಮಿಸಿದೆ. ನಾನು ಬಸವಣ್ಣನವರ ಜಯಂತಿ ದಿನದಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ಅರ್ಧ ಗಂಟೆ ಒಳಗಾಗಿ 5 ಭರವಸೆಗಳನ್ನು ಈಡೇರಿಸಿದೆ. ನಾವು ಚುನಾವಣಾ ಪೂರ್ವದಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸುವ ಜೊತೆಗೆ 30 ಹೊಸ ಕಾರ್ಯಕ್ರಮಗಳನ್ನು ನೀಡಿದ್ದೆ. ಬಿಜೆಪಿಯವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದವರು. ಬೆಳಗಾವಿ ಜಿಲ್ಲೆಯಲ್ಲಿ ಕೂಡ ಶಾಸಕರೊಬ್ಬರು ಖರೀದಿ ಆದರು. ಕಾಂಗ್ರೆಸ್‌ ನ 14 ಜನ ಮತ್ತು ಜೆಡಿಎಸ್‌ ನ 3 ಜನ ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಜನ ಹಿತ ಮರೆತು ಲೂಟಿ ಮಾಡುವುದರಲ್ಲಿ ನಿರತರಾದದ್ದರಿಂದ ಭ್ರಷ್ಟಾಚಾರದ ಸಾಗರದಲ್ಲಿ ಮುಳುಗಿಹೋಗಿದ್ದಾರೆ.


ಇದನ್ನೂ ಓದಿ: Santro Ravi case : ಸ್ಯಾಂಟ್ರೋ ರವಿ ಷಡ್ಯಂತ್ರಕ್ಕೆ ಸಾಥ್ ನೀಡಿದ್ದ ಇನ್ಸ್‌ಪೆಕ್ಟರ್ ಮೇಲೆ ತೂಗುಗತ್ತಿ


ಬಿಜೆಪಿ ಪಕ್ಷ 2018ರಲ್ಲಿ 600 ಭರವಸೆಗಳನ್ನು ನೀಡಿ 10% ಭರವಸೆಗಳನ್ನು ಕೂಡ ಈಡೇರಿಸಿಲ್ಲ. ನಾವು ಅಧಿಕಾರಕ್ಕೆ ಬಂದರೆ ಸೊಸೈಟಿಗಳು, ಬ್ಯಾಂಕುಗಳಲ್ಲಿ 1 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಬಿಜೆಪಿ ಹೇಳಿತ್ತು. ಮಾಡಿದ್ದಾರ? ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ 78,000 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದರು. ನರೇಂದ್ರ ಮೋದಿ ಮತ್ತು ಬಸವರಾಜ ಬೊಮ್ಮಾಯಿ ಅವರು ಒಂದು ರೂಪಾಯಿಯಾದರೂ ಸಾಲ ಮನ್ನಾ ಮಾಡಿದ್ರಾ? ನಾವು ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರಲಿಲ್ಲ ಆದರೂ ನಾಡಿನ ರೈತರ ಕಷ್ಟವನ್ನು ಅರ್ಥಮಾಡಿಕೊಂಡು ಸಹಕಾರಿ ಸಂಘಗಳಲ್ಲಿ 22 ಲಕ್ಷದ 27 ಸಾವಿರ ರೈತರು ಸಹಕಾರಿ ಸಂಘಗಳಿಂದ ಪಡೆದಿದ್ದ 50,000 ವರೆಗಿನ 8,165 ಕೋಟಿ ಸಾಲವನ್ನು ಮಾಡಿದ್ದು ನಾವು. ರೈತರಿಗೆ ಬಿಜೆಪಿ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿ ಟೋಪಿ ಹಾಕಿದೆ.


2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು. ಮಾಡಿದ್ದಾರ? ನಾವು 2013ರಲ್ಲಿ ಅಧಿಕಾರಕ್ಕೆ ಬಂದಾಗ ರೈತರ ತಲಾ ಆದಾಯ 48,000 ರೂ. ನಾವು ಅಧಿಕಾರದಿಂದ ಕೆಳಗಿಳಿಯುವಾಗ ಅದು 1,13,000 ರೂ. ಗೆ ಹೆಚ್ಚಳವಾಗಿತ್ತು. ಈಗ ರೈತರ ತಲಾ ಆದಾಯ 1,16,000 ಆಗಿದೆ. ಅಂದರೆ ಕಳೆದ 4 ವರ್ಷದಲ್ಲಿ 3000 ರೂ. ಜಾಸ್ತಿ ಆಗಿದೆ. ಪಕ್ಕದ ಮಹಾರಾಷ್ಟ್ರದಲ್ಲಿ 1 ಟನ್‌ ಕಬ್ಬಿನ ಬೆಲೆ 3500 ರೂ. ಕೊಜೆನರೇಷನ್‌ ಮತ್ತು ಇಥೆನಾಲ್‌ ಇದ್ದರೆ 6000 ದಿಂದ 6500 ಕಾರ್ಖಾನೆ ಮಾಲೀಕರಿಗೆ ಸಿಗುತ್ತದೆ. ಗುಜರಾತ್ ನಲ್ಲಿ 4400 ಟನ್‌ ಬೆಲೆ ಇದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಕ್ಕರೆ ಕಾರ್ಖಾನೆ ಸಚಿವರಾಗಿದ್ದ ಪ್ರಕಾಶ್‌ ಹುಕ್ಕೇರಿ ಅವರು ನನ್ನ ಬಳಿ ಬಂದು ಕಬ್ಬು ಬೆಳೆಗಾರರ ಕಷ್ಟವನ್ನು ಹೇಳಿಕೊಂಡರು, ಆಗ ನಾವು ಪ್ರತೀ ಟನ್‌ ಗೆ 300 ರೂ. ಜಾಸ್ತಿ ಮಾಡಿ 1800 ಕೋಟಿ ಅನುದಾನ ನೀಡಿದ್ದೆವು. 1780 ಕೋಟಿ ಸಾಲಮನ್ನಾ ಮಾಡಿದ್ದೆವು. ಬಸವರಾಜ ಬೊಮ್ಮಾಯಿ ಸರ್ಕಾರ ರೈತರ ನೆರವಿಗೆ ಧಾವಿಸುತ್ತಿಲ್ಲ. ರೈತರ ಕಷ್ಟವನ್ನು ಸದನದಲ್ಲಿ ಎಳೆಎಳೆಯಾಗಿ ಬಿಡಿಸಿ ಹೇಳಿದೆ, ಕಬ್ಬಿಗೆ ನ್ಯಾಯಯುತವಾದ ಬೆಲೆ ಕೊಡಿ ಎಂದು ಹೇಳಿದೆ. ಆದರೂ ಬೊಮ್ಮಾಯಿ ಸರ್ಕಾರ ನ್ಯಾಯಯುತ ಬೆಲೆ ಕೊಡಿಸುವ ಕೆಲಸ ಮಾಡಿಲ್ಲ. ಇವರು ರೈತರ ಆದಾಯ ದುಪ್ಪಟ್ಟು ಮಾಡುತ್ತಾರ?


ದೇಶದ ಎಕಾನಮಿಯನ್ನು 5 ಟ್ರಿಲಿಯನ್‌ ಡಾಲರ್‌ ಎಕಾನಮಿ ಮಾಡುತ್ತೇವೆ ಎಂದು ನರೇಂದ್ರ ಮೋದಿ ಅವರು ಹೇಳಿದರು. ಮನಮೋಹನ್‌ ಸಿಂಗ್‌ ಅವರು ಇರುವಾಗ 2.2 ಟ್ರಿಲಿಯನ್‌ ಡಾಲರ್‌ ಜಿಡಿಪಿ ಇತ್ತು, ಇಂದು 3 ಟ್ರಿಲಿಯನ್‌ ಡಾಲರ್‌ ಅನ್ನು ಕೂಡ ದಾಟಿಲ್ಲ. ಬಿಜೆಪಿ ಅಂದರೆ ಸುಳ್ಳಿನ ಫ್ಯಾಕ್ಟರಿ. ರೈತರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಮೋಸ ಮಾಡಿದ್ದಾರೆ.


ನಮ್ಮ ಸರ್ಕಾರ ಇದ್ದಾಗ ಬಡಜನರಿಗೆ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆವು, ಈಗ ಅದನ್ನು 4 ಕೆ.ಜಿ ಗೆ ಇಳಿಸಿದ್ದಾರೆ. ಅಕ್ಕಿ ಕೊಡುವುದು ರಾಜ್ಯದ ಜನರು ಕಟ್ಟುವ ತೆರಿಗೆ ಹಣದಿಂದ, ಯಾರಪ್ಪನ ಮನೆಯಿಂದ ತಂದು ಅಲ್ಲ.


2014ರಲ್ಲಿ ಪೆಟ್ರೋಲ್‌ ಬೆಲೆ 76 ರೂ, ಡೀಸೆಲ್‌ ಬೆಲೆ 54 ರೂ. ಮತ್ತು ಗ್ಯಾಸ್‌ ಬೆಲೆ 414 ರೂ. ಇತ್ತು. ಇವತ್ತು ಪೆಟ್ರೋಲ್‌ ಬೆಲೆ 101 ರೂ. ಡೀಸೆಲ್‌ ಬೆಲೆ 96 ಮತ್ತು ಗ್ಯಾಸ್‌ ಬೆಲೆ 1150 ರೂ. ಆಗಿದೆ. ಮೋದಿ ಅವರು ಅಚ್ಚೇದಿನ್‌ ಆಯೇಗಾ ಎಂದಿದ್ದರು, ಇದನ್ನು ಅಚ್ಚೇದಿನ್‌ ಎಂದು ಕರೆಯಲು ನೀವೆಲ್ಲ ಸಿದ್ಧರಿದ್ದೀರ? ಮೋದಿ ಅವರು ತಮ್ಮ ಮನ್‌ ಕಿ ಬಾತ್‌ ನಲ್ಲಿ ದೇಶದ ಸಮಸ್ಯೆಗಳನ್ನು ಪ್ರಸ್ತಾಪ ಮಾಡುವುದೇ ಇಲ್ಲ. ಬಸವರಾಜ ಬೊಮ್ಮಾಯಿ ಅವರು ಈ ರಾಜ್ಯ ಕಂಡ ಮೋಸ್ಟ್ ವೀಕೆಸ್ಟ್‌ ಮುಖ್ಯಮಂತ್ರಿ. ಆರ್‌,ಎಸ್‌,ಎಸ್‌ ನವರ ತಾಳಕ್ಕೆ ಅವರು ಕುಣಿಯಬೇಕು.


15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ 5495 ಕೋಟಿ ವಿಶೇಷ ಅನುದಾನವನ್ನು ರಾಜ್ಯಕ್ಕೆ ನೀಡುವಂತೆ ಶಿಫಾರಸು ಮಾಡಿದ್ದರು. ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರ ವಿತ್ತ ಸಚಿವರಾಗಿರುವ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಆಯೋಗಕ್ಕೆ ಪತ್ರ ಬರೆದು ಈ ಶಿಫಾರಸನ್ನು ಕೈಬಿಡಿ, ಹಣ ನೀಡಲು ಸಾಧ್ಯವಿಲ್ಲ ಎಂದರು. ರಾಜ್ಯದಿಂದ ಜನ 25 ಬಿಜೆಪಿ ಸಂಸದರನ್ನು ಜನ ಆಯ್ಕೆ ಮಾಡಿ ಕಳಿಸಿಕೊಟ್ಟಿದ್ದಾರೆ. ಈ ಜಿಲ್ಲೆಯ ಪ್ರಕಾಶ್‌ ಹುಕ್ಕೇರಿ ಅವರನ್ನು ಜನ ಸೋಲಿಸಿದ್ರು ಪಾಪ, ಇವರು ಒಳ್ಳೆ ಕೆಲಸ ಮಾಡಿದ್ದರು. ಗೆದ್ದ 25 ಜನ ಸಂಸದರು ನರೇಂದ್ರ ಮೋದಿ ಅವರ ಬಳಿ ಹೋಗಿ ಕರ್ನಾಟಕಕ್ಕೆ ಈ 5495 ಕೋಟಿ ಹಣ ಕೊಡಿ ಎಂದು ಕೇಳಲಿಲ್ಲ. ಹೀಗಾಗಿ ಶಿಫಾರಸು ರದ್ದಾಯಿತು, ಇದರಿಂದ ರಾಜ್ಯಕ್ಕೆ ಅನ್ಯಾಯ ಆಗಿದ್ದಲ್ಲವ?


ಬೆಳಗಾವಿಯಲ್ಲಿ ಪಶುಸಂಗೋಪನೆ ಕೂಡ ಒಂದು ಮುಖ್ಯ ಕಸುಬು. ಚರ್ಮಗಂಟು ರೋಗ ಬಂದಿದೆ, ಜಿಲ್ಲೆಯಲ್ಲಿ ವೈದ್ಯರಿಲ್ಲ, ಲಸಿಕೆ ಇಲ್ಲ ಇದರಿಂದ ಹೈನುಗಾರರ ಸಂಕಷ್ಟದಲ್ಲಿದ್ದಾರೆ. ಹಿಂಡಿ, ಬೂಸದ ಬೆಲೆ ಜಾಸ್ತಿಯಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕ್ಷೀರಧಾರೆ ಯೋಜನೆ ಜಾರಿಗೆ ತಂದು ಪ್ರತೀ ಲೀಟರ್‌ ಹಾಲಿಗೆ ರೂ.5 ಪ್ರೋತ್ಸಾಹ ಧನ ನೀಡಿದ್ದೆ. ಈ ಸರ್ಕಾರ ಒಂದು ರೂಪಾಯಿ ಏರಿಕೆ ಮಾಡಿಲ್ಲ. ಗಂಟು ರೋಗ ಹೀಗೆ ಹಲವಾರು ಕಾರಣದಿಂದ ಜೂನ್‌ ತಿಂಗಳಲ್ಲಿ ನಿತ್ಯ 94 ಲಕ್ಷ ಲೀಟರ್‌ ಹಾಲು ಉತ್ಪಾದನೆ ಆಗುತ್ತಿದ್ದುದ್ದು ಈಗ 76 ಲಕ್ಷ ಲೀಟರ್‌ ಹಾಲಿಗೆ ಇಳಿದಿದೆ. ಅಂದರೆ 18 ಲಕ್ಷ ಲೀಟರ್‌ ಹಾಲಿನ ಉತ್ಪಾದನೆ ನಿತ್ಯ ಕಡಿಮೆಯಾಗಿದೆ. ಇದರಿಂದ ನಿತ್ಯ 6 ಕೋಟಿ 66 ಲಕ್ಷ ರೂ. ರೈತರಿಗೆ ಬರಬೇಕಿದ್ದ ಹಣ ನಷ್ಟವಾಗುತ್ತಿದೆ. ಇದನ್ನು ಸದನದಲ್ಲಿ ಪ್ರಸ್ತಾಪಿಸಿದರೆ ಪಶುಸಂಗೋಪನಾ ಸಚಿವ ಪ್ರಭು ಚೌಹಾನ್‌ ಅವರು ಸದನಕ್ಕೆ ಮೌಖಿಕ ಉತ್ತರ ನೀಡಬೇಕಾಗುತ್ತದೆ ಎಂದು ನನಗೆ ಲಿಖಿತ ಉತ್ತರ ಕಳುಹಿಸಿ ತಪ್ಪಿಸಿಕೊಂಡು ಓಡಿಹೋದರು.


ಕೃಷಿ ಭಾಗ್ಯ ಯೋಜನೆ ಮಾಡಲು ನಮ್ಮ ಸರ್ಕಾರ 2 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೆವು. ಈಗ ಈ ಕಾರ್ಯಕ್ರಮವನ್ನೇ ಬಿಟ್ಟಿದ್ದಾರೆ. ಹಸು, ಎಮ್ಮೆ, ಎತ್ತು ಸತ್ತರೆ 10,000 ಮತ್ತು ಕುರಿ, ಮೇಕೆ ಸತ್ತರೆ 5000 ರೂ. ಪರಿಹಾರ ನೀಡುತ್ತಿದ್ದ ಅನುಗ್ರಹ ಯೋಜನೆಯನ್ನು ನಿಲ್ಲಿಸಿದರು. ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್‌ ಇವೆಲ್ಲವನ್ನು ನಿಲ್ಲಿಸಿದ್ರು. ಇಂದಿರಾ ಕ್ಯಾಂಟಿನ್‌ ಬಡವರಿಗೆ, ಆಟೋ ಚಾಲಕರಿಗೆ, ಆಸ್ಪತ್ರೆಗೆ ಬರುವ ರೋಗಿಗಳಿಗೆ, ಕಾರ್ಮಿಕರಿಗಾಗಿ ರೂಪಿಸಿದ್ದ ಕಾರ್ಯಕ್ರಮ. ಇದನ್ನು ನಿಲ್ಲಿಸಿ ಬಡವರ ಊಟ ಕಸಿದಿದ್ದಾರೆ. ಈಗ ಭ್ರಷ್ಟಾಚಾರ ಮಾತ್ರ ಇದೆ.


ರಾಜ್ಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಧಾನಿ ಮತ್ತು ರಾಷ್ಷ್ರಪತಿಗಳಿಗೆ ಪತ್ರ ಬರೆದು ನಮ್ಮಿಂದ 40% ಕಮಿಷನ್‌ ಕೊಡಲು ಆಗಲ್ಲ, ರಾಜ್ಯ ಸರ್ಕಾರದ ಮೇಲೆ ಕ್ರಮ ಕೈಗೊಳ್ಳಿ ನಮ್ಮನ್ನು ಈ ಕಮಿಷನ್‌ ಕಿರುಕುಳದಿಂದ ತಪ್ಪಿಸಿ ಎಂದು ಗೋಗರೆದರು. 6-7-2021ರಲ್ಲಿ ಪತ್ರ ಬರೆದದ್ದು, ಇದಾಗಿ ಒಂದೂವರೆ ವರ್ಷ ಕಳೆದರು ನ ಖಾವೂಂಗಾ ನ ಖಾನೆದೂಂಗ ಎನ್ನುವ ನರೇಂದ್ರ ಮೋದಿ ಅವರು ಒಂದು ತನಿಖೆಯನ್ನು ಕೂಡ ಮಾಡಿಸಿಲ್ಲ. ಪಿಎಸ್‌ಐ ಆಯ್ಕೆ, ಟೀಚರ್‌, ಪ್ರೊಪ್ರೆಸರ್‌ ಆಯ್ಕೆಗಳಲ್ಲಿ ಲಂಚದಿಂದ ತುಂಬಿಹೋಗಿದೆ. ವರ್ಗಾವಣೆ, ನೇಮಕಾತಿ, ಬಡ್ತಿ ಹೀಗೆ ಎಲ್ಲ ಕಡೆ ಲಂಚ ಕೊಡಬೇಕಾಗಿರುವುದರಿಂದ ವಿಧಾನಸೌಧದ ಗೋಡೆಗಳು ಕೂಡ ಲಂಚ, ಲಂಚ ಎಂದು ಪಿಸುಗುಟ್ಟಲು ಆರಂಭ ಮಾಡಿದೆ.


ಇದನ್ನೂ ಓದಿ: ಜ.12 ರಂದು ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮನ : ಯುವಜನೋತ್ಸವದಲ್ಲಿ ಭಾಗಿ


ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ 1924ರ ರಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದ ಜಾಗದಿಂದ ಇಂದು ನಾವು ಯಾತ್ರೆಯನ್ನು ಆರಂಭ ಮಾಡಿದ್ದೇವೆ. ನಾವು ಸೂಚಕವಾಗಿ ಕಸ ಗುಡಿಸಿದ್ದು ಯಾಕೆಂದರೆ ನಾವು ಅಧಿಕಾರಕ್ಕೆ ಬಂದರೆ ರಾಜ್ಯದ ಭ್ರಷ್ಟಾಚಾರವನ್ನು ಗುಡಿಸಿ ಬಿಸಾಕುತ್ತೇವೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವರು ಈಶ್ವರಪ್ಪ ಅವರಿಗೆ ಲಂಚ ನೀಡಲು ಆಗದೆ ಆತ್ಮಹತ್ಯೆಗೆ ಶರಣಾದರು. ಅವರು ಸಾಯುವ ಮುನ್ನ ನನ್ನ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಡೆತ್‌ ನೋಟ್‌ ಕೂಡ ಬರೆದಿದ್ದರು. ಆದರೂ ಅವರನ್ನು ಮೂರೇ ತಿಂಗಳಲ್ಲಿ ಖುಲಾಸೆ ಮಾಡಿದ್ದಾರೆ. ಮೃತರ ಮನೆಗೆ ಭೇಟಿನೀಡಿದಾಗ ಆತನ ಹೆಂಡತಿ ಕೂಡ ತನ್ನ ಗಂಡನ ಸಾವಿಗೆ ಈಶ್ವರಪ್ಪ ಕಾರಣ ಎಂದರು. ತುಮಕೂರಿನ ಗುತ್ತಿಗೆದಾರ ಪ್ರಸಾದ್‌ ಎಂಬುವವರು 40% ಕಮಿಷನ್‌ ಕೊಡಲಾಗದೆ ದೇವರಾಯನದುರ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡರು, ಕೆ.ಆರ್‌ ಪುರಂನ ಇನ್ಸ್‌ ಪೆಕ್ಟರ್‌ ಒಬ್ಬರು ಸಾವಿಗೀಡಾದಾಗ ಆತನ ಶವ ನೋಡಲು ಹೋಗಿದ್ದ ಸಚಿವ ಎಂಟಿಬಿ ನಾಗರಾಜ್‌ ಅವರು “ಪಾಪ 70 – 80 ಲಕ್ಷ ಸಾಲ ಮಾಡಿ ವರ್ಗಾವಣೆ ಮಾಡಿಸಿಕೊಂಡು ಬಂದರೆ ಸಾಯದೆ ಇನ್ನೇನು ಮಾಡ್ತಾರೆ” ಎಂದು ಹೇಳಿದ್ದರು.


ಬೊಮ್ಮಾಯಿ ಅವರೇ ನಿಮ್ಮ ಸರ್ಕಾರದಲ್ಲಿ 40% ಕಮಿಷನ್‌ ನಡೆಯುತ್ತಿದೆ ಎಂದರೆ ಸಾಕ್ಷ್ಯ ಕೊಡಿ ಎನ್ನುತ್ತಾರೆ. ಇವುಗಳಿಗಿಂತ ಬೇರೆ ಸಾಕ್ಷಿ ಬೇಕಾ? ಹಿಂದಿನ ಸರ್ಕಾರದಲ್ಲೂ ಭ್ರಷ್ಟಾಚಾರ ಇತ್ತು ಎನ್ನುತ್ತಾರೆ. ಅದಕ್ಕೆ ಸರಿನಪ್ಪ ನಮ್ಮ ಸರ್ಕಾರದ ಅವಧಿಯನ್ನೂ ಸೇರಿಸಿ ತನಿಖೆ ಮಾಡಿಸಿ ಎಂದು ಹೇಳಿದ್ದೆ. ಹಿಂದೆ ನಮ್ಮ ಸರ್ಕಾರ ಭ್ರಷ್ಟಾಚಾರ ಇದ್ದರೆ ಆಗ ಯಾಕೆ ಸುಮ್ಮನಿದ್ರಿ? ಈಗ ಅಧಿಕಾರಕ್ಕೆ ಬಂದು ಮೂರುವರೆ ವರ್ಷ ಆಗಿದೆ ತನಿಖೆ ಮಾಡಿಸಿದ್ರಾ?


ಪ್ರಜಾಧ್ವನಿ ಎಂದರೆ ಜನರ ಧ್ವನಿ ಎಂದರ್ಥ. ಜನರ ನಿರೀಕ್ಷೆಗಳು ಮತ್ತು ಸಲಹೆಗಳೇನು ಎಂಬುದನ್ನು ನಾವು ಈ ಯಾತ್ರೆಯ ಮೂಲಕ ತಿಳಿದುಕೊಂಡು, ಮುಂದೆ ನಾವು ಅಧಿಕಾರಕ್ಕೆ ಬಂದಾಗ ಸಮಾಜದ ಎಲ್ಲಾ ವರ್ಗದ ಜನರ ಆಡಳಿತ ನೀಡುವ ಪ್ರಯತ್ನ ಮಾಡುತ್ತೇವೆ. ಇದನ್ನು ಹಿಂದೆಯೂ ಮಾಡಿದ್ದೆವು, ಮುಂದೆಯೂ ಮಾಡುತ್ತೇವೆ. ಬಿಜೆಪಿ ಈ ಕೆಲಸವನ್ನು ಯಾವತ್ತೂ ಮಾಡಲ್ಲ ಅಲ್ವಾ? ಇಷ್ಟು ಸತ್ಯ ಗೊತ್ತಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕೋಡಿಯ 8ಕ್ಕೆ 8 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಿತ್ತೆಸೆದು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡಬೇಕು.


ನಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆ ಮನೆಗೆ ಪ್ರತೀ ತಿಂಗಳು 200 ಯುನಿಟ್‌ ಉಚಿತ ವಿದ್ಯುತ್‌ ನೀಡುತ್ತೇವೆ. ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಹೈದ್ರಾಬಾದ್‌ ಕರ್ನಾಟಕದಲ್ಲಿ ಘೋಷಣೆ ಮಾಡಿದ್ದೇವೆ, ದಲಿತ ಸಮಾವೇಶದಲ್ಲಿ ಕೆಲವು ಘೋಷಣೆ ಮಾಡಿದ್ದೇವೆ. ಮಾತೆತ್ತಿದ್ದರೆ ನನ್ನನ್ನು ಹಿಂದೂ ವಿರೋಧಿ ಎನ್ನುತ್ತಾರೆ, ನಾನು ಹಿಂದೂ ಅಲ್ವಾ? ಆಪರೇಷನ್‌ ಆದಾಗ ಯಾರ ರಕ್ತವಾದರೂ ಕೊಡಿ ಎಂದು ಹೇಳುತ್ತೇವೆ, ಆಗಲೂ ನನ್ನದೇ ಜಾತಿ ಧರ್ಮದವನ ರಕ್ತ ಕೇಳುತ್ತೇವಾ ಇಲ್ಲ ಅಲ್ವಾ? ಹೀಗೆ ಎಲ್ಲರೂ ಮನುಷ್ಯರು ಎಂಬುದು ನಮ್ಮ ಸಿದ್ಧಾಂತ. ಇದನ್ನೇ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನ ಹೇಳುತ್ತದೆ. ಸಂವಿಧಾನದಲ್ಲಿ ನಂಬಿಕೆಯಿಟ್ಟಿರುವ ನಾನು ಹಿಂದೂ ವಿರೋಧಿ ಆಗಲು ಹೇಗೆ ಸಾಧ್ಯ? ನಮ್ಮೂರಿನಲ್ಲಿ ನಾವು ರಾಮಮಂದಿರ ಕಟ್ಟಿಲ್ವಾ? ನಾವು ಎಲ್ಲಾ ಧರ್ಮಗಳನ್ನು ಗೌರವಿಸುವವರು. ಆದರೆ ಜಾತ್ರೆಗಳಲ್ಲಿ ಮುಸ್ಲಿಂಮರಿಗೆ ವ್ಯಾಪಾರ ಮಾಡಬೇಡಿ ಎಂದು ಹೇಳುವ, ಹಲಾಲ್‌, ಹಿಜಾಬ್‌ ವಿಚಾರದಲ್ಲಿ ರಾಜಕಾರಣ ಮಾಡುವ ಹಿಂದುತ್ವದ ವಿರೋಧಿಗಳು. ನಾವು ಮನುಷ್ಟ ದ್ವೇಷಿಗಳಲ್ಲ. ನಾವು ಮನುಷ್ಯಪ್ರೇಮಿಗಳು. ಇದೇ ಕಾರಣಕ್ಕೆ ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ಯಾತ್ರೆಯನ್ನು ಮಾಡುತ್ತಿರುವುದು. ದೇಶದ ಐಕ್ಯತೆಯನ್ನು ಗೌರವಿಸಬೇಕು, ಜನರನ್ನು ಪ್ರೀತಿಸಬೇಕು. ಇದನ್ನೇ ಬುದ್ಧ, ಬಸವ, ಕನಕದಾಸರು, ಅಂಬೇಡ್ಕರ್‌, ಮಹಮ್ಮದ್‌ ಪೈಗಂಬರ್‌, ಕ್ರಿಸ್ತ ಹೇಳಿದ್ದು. ಎಲ್ಲಾ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿ ಇರುವುದು ಕಾಂಗ್ರೆಸ್‌ ಗೆ ಮಾತ್ರ. 


ಬಿಜೆಪಿಯ ಪಾಪದ ಕೊಡ ತುಂಬಿದೆ. ಅವರ ಭ್ರಷ್ಟಾಚಾರಗಳ ಕರ್ಮಕಾಂಡದ ಆರೋಪ ಪಟ್ಟಿಯನ್ನು ಜನರ ಮುಂದೆ ಇಡುತ್ತಿದ್ದೇವೆ. ಜನ ಇದರ ತೀರ್ಮಾನ ಕೊಡಬೇಕು. ದಯವಿಟ್ಟು ಬಿಜೆಪಿಯವರ ಹುಸಿ ಹಿಂದುತ್ವ, ಜಾತೀಯತೆಯನ್ನು ನಂಬದೆ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡುತ್ತೇನೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.