ಬಿಸಿಯೂಟ ನೌಕರರ ಬೇಡಿಕೆಗೆ ಒಪ್ಪಿಗೆ ನೀಡಿದ ಸರ್ಕಾರ
ಬೆಂಗಳೂರು: ಸಾವಿರಾರು ಸಂಖ್ಯೆಯಲ್ಲಿ ಬಿಸಿಯೂಟ ಕಾರ್ಯಕರ್ತರು ವೇತನ ಹೆಚ್ಚಳ,ಉದ್ಯೋಗ ಭದ್ರತೆ ನೀಡಬೇಕೆಂದು ಆಗ್ರಹಿಸಿ ಎಐಟಿಯುಸಿ ಮತ್ತು ಸಿಐಟಿಯು ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದರು.ಈಗ ಸರ್ಕಾರ ಅವರ ಬೇಡಿಕೆಗಳಿಗೆ ಒಪ್ಪಿಗೆ ನೀಡಿರುವುದರಿಂದ ಬಿಸಿಯೂಟ ಕಾರ್ಯಕರ್ತೆಯರು ಶುಕ್ರವಾರದಂದು ಹೋರಾಟವನ್ನು ವಾಪಸ್ ತೆಗೆದುಕೊಂಡಿದ್ದಾರೆ.
ಈ ಕುರಿತಾಗಿ ಪ್ರತಿಕ್ರಯಿಸಿರುವ ಸಿಐಟಿಯುನ ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ ಸಚಿವ ತನ್ವೀರ್ ಸೆಟ್ ಮತ್ತು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳು ನಮ್ಮನ್ನು ಭೇಟಿ ಮಾಡಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಮಾತನ್ನು ಕೊಟ್ಟಿದ್ದಾರೆ ಆದ್ದರಿಂದ ಈ ಹೋರಾಟವನ್ನು ಹಿಂತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸುಮಾರು 10 ಸಾವಿರಕ್ಕೂ ಅಧಿಕ ಬಿಸಿಯೂಟ ಕಾರ್ಯಕರ್ತೆಯರು ಹಗಲು ರಾತ್ರಿಯನ್ನದೆ ಕಳೆದ ನಾಲ್ಕು ದಿನಗಳಿಂದ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಮಾಡುತ್ತಿದ್ದರು. ರಾಜ್ಯದಲ್ಲಿ ಸುಮಾರು 119,000 ಬಿಸಿಯೂಟ ಕಾರ್ಯಕರ್ತೆಯರು 65 ಸಾವಿರಕ್ಕೂ ಅಧಿಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಕನಿಷ್ಠ 7 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ಬಡಿಸುತ್ತಿದ್ದಾರೆ.