ಬೆಂಗಳೂರು : ಇಸ್ರೋ ಸ್ಥಿರವಾಗಿ ಚಂದ್ರನೆಡೆಗೆ ಸಾಗುತ್ತಿರುವ ಐತಿಹಾಸಿಕ ಚಂದ್ರಯಾನ-3 ಯೋಜನೆಯ ಕುರಿತು ಹೊಸ ವಿಚಾರಗಳನ್ನು ಹಂಚಿಕೊಂಡಿದೆ. ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ತನ್ನ ಮೊದಲ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನವನ್ನು ಆಗಸ್ಟ್ 23ರಂದು ಕೈಗೊಳ್ಳಲಿದೆ. ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಗಳನ್ನು ಒಳಗೊಂಡಿರುವ ಲ್ಯಾಂಡರ್ ಮಾಡ್ಯುಲ್ ತನ್ನ ಕಕ್ಷೆಯನ್ನು ಯಶಸ್ವಿಯಾಗಿ 113 ಕಿಲೋಮೀಟರ್ × 117 ಕಿಲೋಮೀಟರ್ ವ್ಯಾಪ್ತಿಗೆ ಆಗಸ್ಟ್ 18ರಂದು ಡಿಬೂಸ್ಟಿಂಗ್ ಪ್ರಕ್ರಿಯೆ ನಡೆಸುವ ಮೂಲಕ ಹೊಂದಿಸಿಕೊಂಡಿದೆ. ಎರಡನೆಯ ಡಿಬೂಸ್ಟಿಂಗ್ ಕಾರ್ಯಾಚರಣೆ ಆಗಸ್ಟ್ 20ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ನೆರವೇರುವ ನಿರೀಕ್ಷೆಗಳಿವೆ. ಈ ಯೋಜನೆ, ಚಂದ್ರಯಾನ-2ರ ಮುಂದುವರಿದ ಆವೃತ್ತಿಯಾಗಿದ್ದು, ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಇಳಿದು, ರೋವರ್ ಅನ್ನು ಚಲಿಸುವಂತೆ ಮಾಡುವ ಭಾರತದ ಸಾಮರ್ಥ್ಯವನ್ನು ಅನಾವರಣಗೊಳಿಸಲಿದೆ.


COMMERCIAL BREAK
SCROLL TO CONTINUE READING

ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲಿಳಿಯಲು ಸಿದ್ಧತೆ ನಡೆಸುತ್ತಿದೆ. ಇಸ್ರೋದ ಪ್ರಕಾರ, ಭಾರತೀಯ ಬಾಹ್ಯಾಕಾಶ ನೌಕೆ ಪ್ರೊಪಲ್ಷನ್ ಮಾಡ್ಯುಲ್‌ನಿಂದ ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್ ಮಾಡ್ಯುಲನ್ನು ಆಗಸ್ಟ್ 17ರಂದು ಬೇರ್ಪಡಿಸಿದೆ. ಯೋಜನೆಯ ಅಂತಿಮ ಹಂತಕ್ಕೆ ಇನ್ನು ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ಆಗಸ್ಟ್ 23ರಂದು ಲ್ಯಾಂಡರ್ ಮಾಡ್ಯುಲ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಹಗುರವಾಗಿ ಇಳಿಯಲಿದೆ. ಚಂದ್ರಯಾನ-3 ಯಶಸ್ವಿಯಾದರೆ, ಭಾರತ ಚಂದ್ರನ ಮೇಲ್ಮೈಯಲ್ಲಿ ರೋಬಾಟಿಕ್ ಲೂನಾರನ್ನು ಅಮೆರಿಕಾ, ಚೀನಾ ಹಾಗೂ ಹಿಂದಿನ ಸೋವಿಯತ್ ಒಕ್ಕೂಟದ ಬಳಿಕ ಇಳಿಸಿದ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.


ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸಲು ಇರುವ ಸವಾಲುಗಳು


1. ಚಂದ್ರನ ಮೇಲೆ ವಾತಾವರಣ ಇಲ್ಲದಿರುವ ಕಾರಣ ಪ್ಯಾರಾಶೂಟ್ ಮೂಲಕ ಲ್ಯಾಂಡರನ್ನು ಇಳಿಸಲು ಸಾಧ್ಯವಿಲ್ಲ.


2. ಚಂದ್ರಯಾನ-2 ಯೋಜನೆ ಚಂದ್ರನ ಮೇಲ್ಮೈಯಲ್ಲಿ 30 ಕಿಲೋಮೀಟರ್ ಮತ್ತು 100 ಮೀಟರ್‌ಗಳಷ್ಟು ಎತ್ತರದಲ್ಲಿ ಸಾಫ್ಟ್‌ವೇರ್ ಸಮಸ್ಯೆಯನ್ನು ಎದುರಿಸಿತು. ಆ ಕಾರಣದಿಂದ ಲ್ಯಾಂಡಿಂಗ್ ವೇಳೆ ಅದರ ವೇಗ ನಿಯಂತ್ರಿಸಲು ಸಾಧ್ಯವಾಗಲಿಲ್ಲ.


3. 100 ಮೀಟರ್‌ಗಳಷ್ಟು ಎತ್ತರದಲ್ಲಿ, ವಿಕ್ರಮ್ ಲ್ಯಾಂಡರ್ ಎದುರಿಸಿದ ಚಂದ್ರನ ನೆಲದಲ್ಲಿನ ಬದಲಾವಣೆ ಸಾಫ್ಟ್‌ವೇರ್ ಸಮಸ್ಯೆಗಳು ಅಥವಾ ಸೆನ್ಸರ್ ಸಮಸ್ಯೆಗಳಿಗೆ ಹಾದಿ ಮಾಡಿಕೊಟ್ಟಿತು.


ಇದನ್ನೂ ಓದಿ: ಚಂದ್ರಯಾನ-3: ಅಂತಿಮ ಹಂತಕ್ಕೆ ತಲುಪಿ, ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗಿಗೆ ಸಿದ್ಧವಾದ ಭಾರತದ ಚಂದ್ರ ಅನ್ವೇಷಣಾ ಯೋಜನೆ


4. ಲ್ಯಾಂಡಿಂಗ್ ಸಂದರ್ಭದಲ್ಲಿ ಏಳುವ ಧೂಳು ಸೆನ್ಸರ್‌ಗಳಿಗೆ ಸಮಸ್ಯೆ ತಂದೊಡ್ಡಬಹುದು ಮತ್ತು ಥ್ರಸ್ಟರ್‌ಗಳ ಕಾರ್ಯ ಸ್ಥಗಿತಗೊಳಿಸಬಹುದು. ಲ್ಯಾಂಡಿಂಗ್ ವೇಗ ಸಾಕಷ್ಟು ಕಡಿಮೆಯಾದರೂ, ಚಂದ್ರನ ಮೇಲ್ಮೈಯಿಂದ ಧೂಳು ಏಳುವ ಸಾಧ್ಯತೆಗಳಿವೆ. ಈ ಧೂಳು ಲ್ಯಾಂಡರ್‌ನ ಕ್ಯಾಮರಾ ಲೆನ್ಸ್‌ಗೆ ಅಡ್ಡಿಯಾಗಿ, ಸಮರ್ಪಕ ಚಿತ್ರಣ ಪಡೆಯಲು ತೊಡಕು ಉಂಟುಮಾಡಬಹುದು.


ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಹೇಗೆ ನಡೆಯುತ್ತದೆ?


ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸಲು ಬಾಹ್ಯಾಕಾಶ ನೌಕೆಯ ವೇಗವನ್ನು ಪ್ರತಿ ಗಂಟೆಗೆ 6,000 ಕಿಲೋಮೀಟರ್‌ನಿಂದ ಸಂಪೂರ್ಣ ನಿಲುಗಡೆಗೆ ತರಬೇಕಾಗುತ್ತದೆ. ಈಗಿನ ಹಂತದಲ್ಲಿ, ವಿಕ್ರಮ್ ಲ್ಯಾಂಡರ್ ತನ್ನನ್ನು ತಾನು 90 ಡಿಗ್ರಿ ಕೋನದಲ್ಲಿ ಹೊಂದಿಸಿಕೊಂಡು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯಲಿದೆ. ಚಂದ್ರನ ಮೇಲ್ಮೈಯಿಂದ ಅಂದಾಜು 100 ಮೀಟರ್ ಎತ್ತರದಲ್ಲಿರುವ ಸಂದರ್ಭದಲ್ಲಿ, ಲ್ಯಾಂಡರ್ ಸಂಭಾವ್ಯ ಅಡಚಣೆಗಳಿಗೆ ಹುಡುಕಾಡಲಿದೆ. ಒಂದು ವೇಳೆ ಯಾವುದೇ ಅಡೆತಡೆಗಳು ಎದುರಾಗದಿದ್ದರೆ, ಅದು ತನ್ನ ಥ್ರಸ್ಟರ್‌ಗಳನ್ನು ಬಳಸಿ, ನಿಯಂತ್ರಿತವಾಗಿ ಚಲಿಸುತ್ತಾ, ನಿಧಾನವಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಯಲಿದೆ.


ಚಂದ್ರನ ದಕ್ಷಿಣ ಧ್ರುವ ವರ್ಸಸ್ ಚಂದ್ರನ ಮಧ್ಯಭಾಗ


ಮುಂದಿನ ವಾರ, ಭಾರತ ಅಥವಾ ರಷ್ಯಾಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸುವ ಮೂಲಕ ನೂತನ ದಾಖಲೆ ನಿರ್ಮಿಸಲು ಸಿದ್ಧವಾಗಿವೆ. ಇಂದಿನ ತನಕ ಚಂದ್ರನ ಸಮಭಾಜಕ ಪ್ರದೇಶದಲ್ಲಿ ಅಮೆರಿಕಾ, ಚೀನಾ ಹಾಗೂ ರಷ್ಯಾಗಳು ಸಾಫ್ಟ್ ಲ್ಯಾಂಡಿಂಗ್ ನಡೆಸಿವೆ. ಐತಿಹಾಸಿಕವಾಗಿ ಚಂದ್ರ ಅನ್ವೇಷಣಾ ಯೋಜನೆಗಳು ಚಂದ್ರನ ಮಧ್ಯಭಾಗವನ್ನೇ ಕೇಂದ್ರೀಕರಿಸಿದ್ದವು. ಇದಕ್ಕೆ ಅಲ್ಲಿನ ಸ್ಥಳಾಕೃತಿ ಹಾಗೂ ಕಾರ್ಯಾಚರಣಾ ಪರಿಸ್ಥಿತಿಗಳು ಕಾರಣಗಳಾಗಿವೆ. ಆದರೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೇಲ್ಮೈ ಒಂದಷ್ಟು ಭಿನ್ನವಾಗಿರುವ ಕಾರಣದಿಂದ ಸವಾಲಿನ ಮೇಲ್ಮೈಯಾಗಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶ, ಉತ್ತರ ಧ್ರುವಕ್ಕೆ ಹೋಲಿಸಿದರೆ ಹೆಚ್ಚು ವಿಶಾಲವಾಗಿರುವುದರಿಂದ ಭಾರತ ಇದನ್ನೇ ಅನ್ವೇಷಣೆಗೆ ಆಯ್ಕೆ ಮಾಡಿಕೊಂಡಿದೆ. ವಿಶೇಷವಾಗಿ, ಈ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ನೆರಳಿರುವುದರಿಂದ ಇಲ್ಲಿ ಮಂಜುಗಡ್ಡೆಯ ರೂಪದಲ್ಲಿ ನೀರಿರುವ ಸಾಧ್ಯತೆಯೂ ಪ್ರಮುಖ ಕಾರಣವಾಗಿದೆ.


ಚಂದ್ರನ ದಕ್ಷಿಣ ಧ್ರುವ ಯಾಕೆ ನಿಗೂಢವಾಗಿದೆ?


ಚಂದ್ರನ ದಕ್ಷಿಣ ಧ್ರುವದಲ್ಲಿ ವಿಶೇಷ ಪರಿಸ್ಥಿತಿ ಕಂಡುಬರುತ್ತದೆ. ಅಲ್ಲಿ ಸೂರ್ಯ ಯಾವಾಗಲೂ ದಿಗಂತಕ್ಕೆ ಹತ್ತಿರದಲ್ಲಿರುವುದರಿಂದ, ಹಗಲು ವೇಳೆಯಲ್ಲಿ ತಾಪಮಾನ 54 ಡಿಗ್ರಿ ಸೆಲ್ಸಿಯಸ್ ದಾಟಿ ಮುಂದುವರಿಯುತ್ತದೆ. ಇಲ್ಲಿ ಸೂರ್ಯನ ಬೆಳಕಿನ ಹೊರತಾಗಿಯೂ, ಹಲವು ಕುಳಿಗಳು ಶಾಶ್ವತವಾಗಿ ನೆರಳಿನ ಪ್ರದೇಶಗಳಾಗಿರುತ್ತವೆ. ಅವುಗಳಿಗೆ ಬಿಲಿಯನ್‌ಗಟ್ಟಲೆ ವರ್ಷಗಳಿಂದ ಸೂರ್ಯನ ಬೆಳಕನ್ನೇ ಪಡೆದಿಲ್ಲ. ಆದ್ದರಿಂದ ಅಲ್ಲಿನ ತಾಪಮಾನ -203 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಿರುತ್ತದೆ.


ಅತ್ಯಂತ ಆಧುನಿಕ ಸೆನ್ಸರ್‌ಗಳನ್ನು ಬಳಸಿಕೊಂಡಿದ್ದರೂ, ಚಂದ್ರನ ದಕ್ಷಿಣ ಧ್ರುವದ ಮೇಲ್ಮೈ ಚಿತ್ರಣ ಬಾಹ್ಯಾಕಾಶ ನೌಕೆಯನ್ನು ಅಲ್ಲಿ ಇಳಿಸಲು ಸವಾಲಾಗಿ ಪರಿಣಮಿಸುತ್ತದೆ. ಅದಕ್ಕೆ ಅಲ್ಲಿನ ಮೇಲ್ಮೈ ಮತ್ತು ಬೆಳಕಿನ ಸನ್ನಿವೇಶಗಳು ಕಾರಣವಾಗಿರುತ್ತವೆ.


ಚಂದ್ರನ ದಕ್ಷಿಣ ಧ್ರುವದಲ್ಲಿರುವ ವೈರುಧ್ಯಮಯ ಸನ್ನಿವೇಶಗಳು ಮಾನವರಿಗೆ ಸವಾಲೊಡ್ಡುತ್ತವೆ. ಆದರೆ ಈ ದಕ್ಷಿಣ ಧ್ರುವ ಪ್ರದೇಶ ಸೌರಮಂಡಲದ ಆರಂಭದ ಕುರಿತು ಮಹತ್ವದ ಮಾಹಿತಿಗಳನ್ನು ಒದಗಿಸಬಲ್ಲದಾಗಿದೆ.


ರಷ್ಯಾದ ಚಂದ್ರ ಅನ್ವೇಷಣಾ ಯೋಜನೆಯ ವಿವರ


ರಷ್ಯಾ ಸಹ ಈ ಬಾರಿ ಚಂದ್ರನ ಮೇಲಿಳಿಯುವ ಬಾಹ್ಯಾಕಾಶ ನೌಕೆಯನ್ನು ಪರಿಚಯಿಸಿದ್ದು, ಅದು ಚಂದ್ರನ ಮೇಲೆ ಆಗಸ್ಟ್ 21ರಂದು ಸಾಫ್ಟ್ ಲ್ಯಾಂಡಿಂಗ್ ನಡೆಸುವ ನಿರೀಕ್ಷೆಗಳಿವೆ. ರಷ್ಯಾದ ಲೂನಾ-25 ಯೋಜನೆ ಚಂದ್ರನ ದಕ್ಷಿಣ ಧ್ರುವಕ್ಕೆ ಸಾಕಷ್ಟು ನೇರವಾದ ಪಥವನ್ನು ಆಯ್ಕೆ ಮಾಡಿಕೊಂಡಿದ್ದು, ಭಾರತದ ಬಾಹ್ಯಾಕಾಶ ನೌಕೆಗಿಂತ ಎರಡು ದಿನಗಳ ಮೊದಲು ಚಂದ್ರನ ಮೇಲಿಳಿಯುವ ಸಾಧ್ಯತೆಗಳಿವೆ.


ರಷ್ಯಾದ ಸರ್ಕಾರಿ ಬಾಹ್ಯಾಕಾಶ ಸಂಸ್ಥೆಯಾದ ರಾಸ್‌ಕಾಸ್ಮೋಸ್ ಪ್ರಕಾರ, ಲೂನಾ-25 ಒಂದು ಸ್ವಯಂಚಾಲಿತ ಮಾಡ್ಯುಲ್ ಆಗಿದ್ದು, ಇದು ಚಂದ್ರನ ಸುತ್ತಲಿನ ತನ್ನ ಪಥವನ್ನು ಸರಿಹೊಂದಿಸಿಕೊಂಡು, ಚಂದ್ರನ ಮೇಲಿಳಿಯಲು ಸಿದ್ಧತೆ ನಡೆಸುತ್ತಿದೆ.


ಚಂದ್ರ ಅನ್ವೇಷಣಾ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಳು


ಇಸ್ರೋ ತನ್ನ ಚಂದ್ರ ಅನ್ವೇಷಣಾ ಯೋಜನೆಯಾದ ಚಂದ್ರಯಾನ-3ರ ಉಡಾವಣೆಯನ್ನು ಜುಲೈ 14ರಂದು ನೆರವೇರಿಸಿತು. ಇದನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳಿಸಲಾಯಿತು.


ಚಂದ್ರಯಾನ-3 ಯೋಜನೆಗೆ ಅಧಿಕೃತ ಯೋಜನಾ ವೆಚ್ಚ 250 ಕೋಟಿ ರೂಪಾಯಿ ಆಗಿತ್ತು. ಇದು ಉಡಾವಣಾ ವಾಹನ ವೆಚ್ಚವನ್ನು ಹೊರತುಪಡಿಸಿತ್ತು. ಚಂದ್ರಯಾನ-3 ಯಲ್ಲಿ 2 ಮೀಟರ್ (6.6 ಅಡಿ) ಎತ್ತರದ ಲ್ಯಾಂಡರ್, ಒಂದು ರೋವರ್ ಹಾಗೂ ಒಂದು ಪ್ರೊಪಲ್ಷನ್ ಮಾಡ್ಯುಲ್ ಇದ್ದು, ಬಹುತೇಕ 3,900 ಕೆಜಿ ತೂಕ ಹೊಂದಿದೆ.


ಇದನ್ನೂ ಓದಿ: ಚಂದ್ರನ ಮೇಲ್ಮೈ ಮುಟ್ಟಲು ಚಂದ್ರಯಾನ-3ಗೆ ಬೇಕು ‘ಸೂರ್ಯೋದಯ’! ಈ ಕಾಯುವಿಕೆಯ ಹಿನ್ನೆಲೆ ಏನು ಗೊತ್ತಾ?


ಈ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ರೋವರ್ ಅನ್ನು ಇಳಿಸುವ ಗುರಿಯನ್ನು ಹೊಂದಿದೆ. ರೋವರ್ ಭೂಮಿಯ 14 ದಿನಗಳಿಗೆ ಸಮಾನವಾದ 1 ಚಂದ್ರನ ದಿನ ಕಾರ್ಯಾಚರಿಸಲಿದೆ.


ಡಿಬೂಸ್ಟಿಂಗ್ ಎಂದರೇನು?


ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಲ್ಯಾಂಡರ್ ಮಾಡ್ಯುಲ್ ಡಿಬೂಸ್ಟಿಂಗ್ ಎಂದರೆ ಅದರ ವೇಗವನ್ನು ಕಡಿಮೆಗೊಳಿಸಿ, ಅದರ ಕಕ್ಷೆಯ ಚಂದ್ರನಿಗೆ ಅತ್ಯಂತ ಸನಿಹ ಮತ್ತು ದೂರದ ಬಿಂದುಗಳು ಕೆಲವು ಕಿಲೋಮೀಟರ್‌ಗಳಷ್ಟೇ ದೂರವಿರುವಂತೆ ಮಾಡುವ ಪ್ರಕ್ರಿಯೆಯಾಗಿದೆ. ಈ ಹಂತ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಹಗುರವಾಗಿ ಇಳಿಯುವಂತೆ ಮಾಡಲು ಪೂರಕವಾಗಿದೆ.


ಆಗಸ್ಟ್ 20ರಂದು ನಡೆದ ಎರಡನೇ ಡಿಬೂಸ್ಟಿಂಗ್


ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಲ್ಯಾಂಡರಿನ ಎರಡನೆಯ ಡಿಬೂಸ್ಟಿಂಗ್ ಪ್ರಕ್ರಿಯೆಯನ್ನು ಆಗಸ್ಟ್ 20, ಭಾನುವಾರದಂದು ರಾತ್ರಿ 2 ಗಂಟೆಯ ಸುಮಾರಿಗೆ ಯಶಸ್ವಿಯಾಗಿ ನೆರವೇರಿಸಿತು. ಮೊದಲ ಡಿಬೂಸ್ಟಿಂಗ್ ಪ್ರಕ್ರಿಯೆ ಶುಕ್ರವಾರ ಸಂಜೆ ಕೈಗೊಳ್ಳಲಾಯಿತು.


 ಇಸ್ರೋದ ಚಂದ್ರಯಾನ-3 ಅದರ ಎರಡನೆಯ ಮತ್ತು ಅಂತಿಮ ಡಿಬೂಸ್ಟಿಂಗ್ ಹಂತವನ್ನು ಭಾನುವಾರ ಬೆಳಗಿನ 2:00 ಗಂಟೆಗೆ ಪೂರ್ಣಗೊಳಿಸಿ, ಲ್ಯಾಂಡರ್ ಮಾಡ್ಯುಲ್ ಅನ್ನು 25 ಕಿಲೋಮೀಟರ್ × 134 ಕಿಲೋಮೀಟರ್ ಕಕ್ಷೆಗೆ ಅಳವಡಿಸಿದೆ. ಈ ಮಾಡ್ಯುಲ್ ಇನ್ನು ಆಂತರಿಕ ಪರೀಕ್ಷೆಗಳಿಗೆ ಒಳಪಟ್ಟು, ಲ್ಯಾಂಡಿಂಗ್ ಸ್ಥಳದಲ್ಲಿ ಸೂರ್ಯೋದಯಕ್ಕೆ ಎದುರು ನೋಡಲಿದೆ. ಇದರ ಚಂದ್ರನ ಮೇಲ್ಮೈಗೆ ಇಳಿಯುವಿಕೆ ಆಗಸ್ಟ್ 23ರಂದು ಸಂಜೆ 5:45ಕ್ಕೆ ನೆರವೇರಲಿದೆ. 


ಚಂದ್ರಯಾನ-3ರ ಲ್ಯಾಂಡರ್ ಮಾಡ್ಯುಲ್ ಉಡಾವಣೆಗೊಂಡ 35 ದಿನಗಳ ಬಳಿಕ, ಗುರುವಾರ ಪ್ರೊಪಲ್ಷನ್ ಮಾಡ್ಯುಲ್‌ನಿಂದ ಬೇರ್ಪಟ್ಟಿತು.


ಚಂದ್ರನ ಕುರಿತು ಯಾಕೆ ದೇಶಗಳು ಆಸಕ್ತಿ ತೋರುತ್ತಿವೆ?


ಚಂದ್ರಯಾನ-3, ಲೂನಾ-25 ಯೋಜನೆ, ಮತ್ತು ಅಮೆರಿಕಾದ ಆರ್ಟೆಮಿಸ್-2 ಯೋಜನೆಗಳ ತನಕ ಚಂದ್ರ ಅನ್ವೇಷಣಾ ಯೋಜನೆಗಳು ವಿಜ್ಞಾನಿಗಳನ್ನು ಸದಾ ಕುತೂಹಲದ ಘಟ್ಟದಲ್ಲಿ ಇಟ್ಟಿವೆ. ಇಂತಹ ಪ್ರಬಲ ಅಂತಾರಾಷ್ಟ್ರೀಯ ಶಕ್ತಿಗಳು ಚಂದ್ರನ ಮೇಲೆ ಯಾಕಿಷ್ಟು ಆಸಕ್ತಿ ಹೊಂದಿವೆ?


1. ಭೂಮಿಯಿಂದ 3,84,400 ಕಿಲೋಮೀಟರ್ ದೂರದಲ್ಲಿರುವ. ಚಂದ್ರ ಭೂಮಿಯ ಅಕ್ಷೀಯ ಕಂಪನಗಳನ್ನು ಸ್ಥಿರಗೊಳಿಸಲು ನೆರವಾಗುತ್ತದೆ. ಅದರೊಡನೆ, ಭೂಮಿಯ ವಾತಾವರಣ ಹೆಚ್ಚು ಸ್ಥಿರವಾಗಿದ್ದು, ಸಮುದ್ರದ ಅಲೆಗಳು ಮೂಡಲು ಕಾರಣವಾಗಿದೆ.


[[{"fid":"329699","view_mode":"default","fields":{"format":"default","field_file_image_alt_text[und][0][value]":"Chandrayaan 3","field_file_image_title_text[und][0][value]":"ಚಂದ್ರಯಾನ-3 "},"type":"media","field_deltas":{"1":{"format":"default","field_file_image_alt_text[und][0][value]":"Chandrayaan 3","field_file_image_title_text[und][0][value]":"ಚಂದ್ರಯಾನ-3 "}},"link_text":false,"attributes":{"alt":"Chandrayaan 3","title":"ಚಂದ್ರಯಾನ-3 ","class":"media-element file-default","data-delta":"1"}}]]


2. 2008ರಲ್ಲಿ ಭಾರತದ ಚಂದ್ರಯಾನ-1 ಯೋಜನೆ ಚಂದ್ರನ ಮೇಲೆ ಮಂಜುಗಡ್ಡೆಯ ರೂಪದಲ್ಲಿ ನೀರಿನ ಇರುವಿಕೆಯನ್ನು ಪತ್ತೆಹಚ್ಚಿ, ಮಹತ್ವದ ಸಾಧನೆ ಕೈಗೊಂಡಿತು. ಈ ಅನ್ವೇಷಣೆ ಹೈಡ್ರಾಕ್ಸಿಲ್ ಅಣುಗಳು ಚಂದ್ರನ ಮೇಲ್ಮೈಯಾದ್ಯಂತ ಹರಡಿರುವುದನ್ನು, ಅದರಲ್ಲೂ ಧ್ರುವ ಪ್ರದೇಶಗಳಲ್ಲಿ ಹೆಚ್ಚು ಸಾಂದ್ರವಾಗಿರುವುದನ್ನು ತಿಳಿಯಲು ಪೂರಕವಾಯಿತು. ಮಾನವ ಜೀವಕ್ಕೆ ನೀರು ಅತ್ಯಮೂಲ್ಯ ಮತ್ತು ಅತ್ಯವಶ್ಯಕವಾಗಿದ್ದು, ಅದರೊಡನೆ ಇದನ್ನು ಆಮ್ಲಜನಕ ಮತ್ತು ಜಲಜನಕದ ಸಂಗ್ರಹಾಗಾರವಾಗಿ ಬಳಸಬಹುದು. ಇದನ್ನು ರಾಕೆಟ್ ಇಂಧನವಾಗಿ ಬಳಸಿಕೊಳ್ಳಬಹುದು.


3. ಹೀಲಿಯಂ-3 ಎನ್ನುವುದು ಭೂಮಿಯ ಮೇಲಿರುವ ಒಂದು ಸಾಮಾನ್ಯವಲ್ಲದ ಹೀಲಿಯಂ ಐಸೋಟೋಪ್ ಆಗಿದ್ದು, ಫ್ಯೂಷನ್ ರಿಯಾಕ್ಟರ್‌ಗಳಲ್ಲಿ ನ್ಯೂಕ್ಲಿಯರ್ ಶಕ್ತಿ ಉತ್ಪಾದಿಸಲು ಸಹಾಯಕವಾಗಿದೆ. ಚಂದ್ರನ ಮೇಲೆ ಇಂತಹ ಮಿಲಿಯನ್‌ಗಟ್ಟಲೆ ಟನ್‌ಗಳಷ್ಟು ಐಸೋಟೋಪ್ ಲಭ್ಯವಿದೆ ಎಂದು ನಾಸಾ ಊಹಿಸಿದೆ. ರೇಡಿಯೋ ಆ್ಯಕ್ಟಿವ್ ಉತ್ಪನ್ನಗಳ ರೀತಿಯಲ್ಲದೆ, ಹೀಲಿಯಂ-3 ಅಪಾಯಕಾರಿ ತ್ಯಾಜ್ಯಗಳನ್ನು ಉತ್ಪಾದಿಸುವುದಿಲ್ಲ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿ ತಿಳಿಸಿದೆ.


4. ಚಂದ್ರನ ಮೇಲೆ ಅಪಾರ ಪ್ರಮಾಣದಲ್ಲಿ ಅಪರೂಪದ ಲೋಹಗಳಾದ ಸ್ಕ್ಯಾಂಡಿಯಂ, ಯಿಟ್ರಿಯಂ, ಹಾಗೂ ಇತರ 15 ಲ್ಯಾಂಥನೈಡ್ಸ್ ಲಭ್ಯವಿದೆ. ಈ ಉತ್ಪನ್ನಗಳು ಸ್ಮಾರ್ಟ್ ಫೋನ್‌ಗಳು, ಕಂಪ್ಯೂಟರ್‌ಗಳು ಹಾಗೂ ಆಧುನಿಕ ತಂತ್ರಜ್ಞಾನಗಳಿಗೆ ಅವಶ್ಯಕವಾಗಿದೆ ಎಂದು ಬೋಯಿಂಗ್ ಸಂಶೋಧನಾ ವಿಭಾಗ ತಿಳಿಸಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.