ಚಂದ್ರಯಾನ-3: ಅಂತಿಮ ಹಂತಕ್ಕೆ ತಲುಪಿ, ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗಿಗೆ ಸಿದ್ಧವಾದ ಭಾರತದ ಚಂದ್ರ ಅನ್ವೇಷಣಾ ಯೋಜನೆ

Written by - Girish Linganna | Edited by - Manjunath N | Last Updated : Aug 18, 2023, 07:24 PM IST
  • ಚಂದ್ರಯಾನ-3 ಈಗ ಚಂದ್ರನಿಂದ ಕೆಲವು ನೂರು ಕಿಲೋಮೀಟರ್ ಅಷ್ಟೇ ದೂರದಲ್ಲಿತ್ತು.
  • ಅದರ ಪಥವನ್ನು ವೃತ್ತಾಕಾರವಾಗಿಸುವ ಪ್ರಕ್ರಿಯೆ ಆರಂಭಗೊಂಡಿತು.
  • ಜಾಗರೂಕವಾಗಿ ಕೈಗೊಂಡ ಚಲನೆ ಬಾಹ್ಯಾಕಾಶ ನೌಕೆಯನ್ನು ಬಹುತೇಕ ವೃತ್ತಾಕಾರದ, 150 ಕಿಲೋಮೀಟರ್ 177 ಕಿಲೋಮೀಟರ್ ಕಕ್ಷೆಗೆ ಜೋಡಿಸಿತು.
ಚಂದ್ರಯಾನ-3: ಅಂತಿಮ ಹಂತಕ್ಕೆ ತಲುಪಿ, ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗಿಗೆ ಸಿದ್ಧವಾದ ಭಾರತದ ಚಂದ್ರ ಅನ್ವೇಷಣಾ ಯೋಜನೆ title=

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಚಂದ್ರಯಾನ-3 ಯೋಜನೆ ಯಶಸ್ವಿಯಾದರೆ, ಅಮೆರಿಕಾ, ಸೋವಿಯತ್ ಒಕ್ಕೂಟ, ಚೀನಾಗಳ ಬಳಿಕ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ಕೇವಲ ನಾಲ್ಕನೆಯ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಚೀನಾ ತೀರಾ ಇತ್ತೀಚೆಗೆ ಈ ಸಾಧನೆ ಕೈಗೊಂಡಿತ್ತು.

ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ಮುನ್ನ, ಅಮೆರಿಕಾ ಸಂಯುಕ್ತ ಸಂಸ್ಥಾನ ಹಾಗೂ ಸೋವಿಯತ್ ಒಕ್ಕೂಟಗಳ ಬಾಹ್ಯಾಕಾಶ ನೌಕೆಗಳು ಸಾಕಷ್ಟು ಬಾರಿ ಪತನಗೊಂಡಿದ್ದವು. ಆದರೆ ಇನ್ನೊಂದೆಡೆ ಚೀನಾ 2013ರಲ್ಲಿ ಕೈಗೊಂಡ ತನ್ನ ಮೊದಲನೆಯ ಯೋಜನೆಯಾದ ಚೇಂಗ್-3 ಯೋಜನೆಯಲ್ಲಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸಿ, ಸಾಧನೆ ನಿರ್ಮಿಸಿತ್ತು.

ಚಂದ್ರಯಾನ-3 ಯೋಜನೆ ಈ ಬಾರಿ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದು, ಅದರಲ್ಲಿ ಭೂಮಿಗೆ ಸನಿಹದಲ್ಲಿರುವಾಗಿನಿಂದ ನಡೆಸಿದ ಕಕ್ಷೆ ಎತ್ತರಿಸುವ ಚಲನೆಗಳು, ಚಂದ್ರನ ಕಕ್ಷೆಗೆ ಸೇರ್ಪಡೆಯಾಗುವುದು, ಲ್ಯಾಂಡರ್ ಮಾಡ್ಯುಲ್ ಪ್ರೊಪಲ್ಷನ್ ಮಾಡ್ಯುಲ್‌ನಿಂದ ಬೇರ್ಪಡುವುದು, ಹಲವು ಡಿಬೂಸ್ಟ್ ಪ್ರಕ್ರಿಯೆಗಳನ್ನು ನಡೆಸುವುದು, ಹಾಗೂ ಸುರಕ್ಷಿತ, ಹಗುರವಾದ ಲ್ಯಾಂಡಿಂಗ್‌ಗಾಗಿ ಚಂದ್ರನ ಮೇಲ್ಮೈಯೆಡೆಗೆ ಇಳಿಯುವುದು ಸೇರಿವೆ.

ಚಂದ್ರಯಾನ-3 ಯೋಜನೆಯ ಮಹತ್ವದ ಘಟ್ಟಗಳು

ಜುಲೈ 14: ಭಾರತದ ಮೂರನೆಯ ಚಂದ್ರ ಅನ್ವೇಷಣಾ ಯೋಜನೆಯಾದ ಚಂದ್ರಯಾನ-3 ಯೋಜನೆ ಲಾಂಚ್ ವೆಹಿಕಲ್ ಮಾರ್ಕ್ 3 (ಎಲ್ಎಂವಿ3) ಮೂಲಕ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೆಯ ಉಡಾವಣಾ ವೇದಿಕೆಯಿಂದ ಭಾರತೀಯ ಕಾಲಮಾನದಲ್ಲಿ ಮಧ್ಯಾಹ್ನ 2:35ಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿತು.

ಎಲ್ಎಂವಿ-3 ಉಡಾವಣೆಗೊಂಡ ಬಹುತೇಕ 16 ನಿಮಿಷಗಳ ಬಳಿಕ, ಬಾಹ್ಯಾಕಾಶ ನೌಕೆ ರಾಕೆಟ್‌ನಿಂದ ಬೇರ್ಪಟ್ಟಿತು. ಈ ಮಾಡ್ಯುಲ್ ಪ್ರೊಪಲ್ಷನ್ ಮಾಡ್ಯುಲ್ ಹಾಗೂ ಲ್ಯಾಂಡರ್ ಮಾಡ್ಯುಲ್ ಹಾಗೂ ರೋವರ್ ಅನ್ನು ಒಳಗೊಂಡಿತ್ತು. ಇದು ಒಂದು ಎಲಿಪ್ಟಿಕಲ್ ಪಾರ್ಕಿಂಗ್ ಆರ್ಬಿಟ್ (ಇಪಿಒ) ಪ್ರವೇಶಿಸಿತು. ಈ ಕಕ್ಷೆಯ ಭೂಮಿಗೆ ಅತ್ಯಂತ ಸನಿಹದ ಬಿಂದು ಅಂದಾಜು 170 ಕಿಲೋಮೀಟರ್ ದೂರದಲ್ಲಿದ್ದರೆ, ಅತ್ಯಂತ ದೂರದ ಬಿಂದು ಅಂದಾಜು 36,500 ಕಿಲೋಮೀಟರ್ ದೂರದಲ್ಲಿತ್ತು.

ಜುಲೈ 15: ಮೊದಲನೆಯ ಕಕ್ಷೆ ಎತ್ತರಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿ, ಬಾಹ್ಯಾಕಾಶ ನೌಕೆಯನ್ನು 41,762 ಕಿಲೋಮೀಟರ್ × 173 ಕಿಲೋಮೀಟರ್ ಕಕ್ಷೆಗೆ ಜೋಡಿಸಲಾಯಿತು.

ಜುಲೈ 17: ಎರಡನೆಯ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಚಂದ್ರಯಾನ-3ನ್ನು 41,603 ಕಿಲೋಮೀಟರ್ × 226 ಕಿಲೋಮೀಟರ್ ಕಕ್ಷೆಗೆ ಜೋಡಿಸಿತು.

ಜುಲೈ 18: ಬಾಹ್ಯಾಕಾಶ ನೌಕೆ ಮೊದಲೇ ಉದ್ದೇಶಿಸಿದ 51,400 ಕಿಲೋಮೀಟರ್ × 228 ಕಿಲೋಮೀಟರ್ ಕಕ್ಷೆಗೆ ಸೇರ್ಪಡೆಯಾಯಿತು.

ಈ ಕುರಿತು ಮಾಹಿತಿ ನೀಡಿದ ಇಸ್ರೋ, ಮೂರನೆಯ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಜುಲೈ 18ರಂದು ಮಧ್ಯಾಹ್ನ 2:00 - 3:00 ಗಂಟೆಯ ನಡುವೆ ಯಶಸ್ವಿಯಾಗಿ ನೆರವೇರಿತು ಎಂದಿತು. ಬಾಹ್ಯಾಕಾಶ ನೌಕೆ ಬಳಿಕ 228 ಕಿಲೋಮೀಟರ್‌ನಿಂದ 51,400 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿಯ ಪರಿಭ್ರಮಣೆ ನಡೆಸುತ್ತಿತ್ತು. ಇದಾದ ನಂತರದ ಎತ್ತರಿಸುವಿಕೆಯನ್ನು ಜುಲೈ 20, ಗುರುವಾರದಂದು ಮಧ್ಯಾಹ್ನ 2:00 - 3:00ರ ನಡುವೆ ನಡೆಸಲು ನಿರ್ಧರಿಸಲಾಯಿತು.

ಜುಲೈ 22: ಚಂದ್ರಯಾನ-3 ತನ್ನ ನಾಲ್ಕನೇ ಕಕ್ಷೆ ಎತ್ತರಿಸುವಿಕೆಯನ್ನು ಯಶಸ್ವಿಯಾಗಿ ಪೂರೈಸಿತು. ಆ ಮೂಲಕ ಬಾಹ್ಯಾಕಾಶ ನೌಕೆಯನ್ನು 71,351 ಕಿಲೋಮೀಟರ್ × 233 ಕಿಲೋಮೀಟರ್ ಕಕ್ಷೆಗೆ ಜೋಡಿಸಿತು.

ಜುಲೈ 25: ಚಂದ್ರಯಾನ-3 ತನ್ನ ಐದನೆಯ ಮತ್ತು ಕೊನೆಯ ಕಕ್ಷೆ ಎತ್ತರಿಸುವ ಪ್ರಕ್ರಿಯೆಯನ್ನು ಜುಲೈ 25ರಂದು ಭಾರತೀಯ ಕಾಲಮಾನದಲ್ಲಿ ಮಧ್ಯಾಹ್ನ 2:00 - 3:00ರ ನಡುವೆ ಕೈಗೊಂಡಿತು. ಇದಾದ ಬಳಿಕ ಬಾಹ್ಯಾಕಾಶ ನೌಕೆ 127,609 ಕಿಲೋಮೀಟರ್ × 236 ಕಿಲೋಮೀಟರ್ ಕಕ್ಷೆಗೆ ಸೇರಿತು. ಈ ರೀತಿ ತಲುಪಿದ ಕಕ್ಷೆಯನ್ನು ಇನ್ನಷ್ಟು ಪರಿಶೀಲಿಸಲಾಯಿತು. ಈ ಚಲನೆಯನ್ನು ಇಸ್ರೋದ ಐಸ್ಟ್ರಾಕ್ (ISTRAC) ಮೂಲಕ ನಡೆಸಲಾಯಿತು.

ಜುಲೈ 26: ಆಗಸ್ಟ್ 1, 2023ರಂದು ಭಾರತೀಯ ಕಾಲಮಾನದಲ್ಲಿ, ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಬಾಹ್ಯಾಕಾಶ ನೌಕೆಯ ಟ್ರಾನ್ಸ್ ಲೂನಾರ್ ಇಂಜೆಕ್ಷನ್ (ಟಿಎಲ್ಐ) ಪ್ರಕ್ರಿಯೆ ನಡೆಸುವುದಾಗಿ ನಿರ್ಧರಿಸಲಾಯಿತು. ಈ ಪ್ರಕ್ರಿಯೆ, ಬಾಹ್ಯಾಕಾಶ ನೌಕೆಯನ್ನು ಚಂದ್ರನೆಡೆಗಿನ ಹಾದಿಗೆ ಸೇರಿಸಿತು.

ಆಗಸ್ಟ್ 1: ಚಂದ್ರಯಾನ-3 ಭೂಮಿಯ ಪರಿಭ್ರಮಣೆಯನ್ನು ಪೂರ್ಣಗೊಳಿಸಿ, ಚಂದ್ರನ ಕಡೆಗೆ ತೆರಳಲು ಆರಂಭಿಸಿತು. ಐಸ್ಟ್ರಾಕ್‌ನ ನಿಖರ ಉರಿಸುವಿಕೆ ಬಾಹ್ಯಾಕಾಶ ನೌಕೆಯನ್ನು ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಮೂಲಕ 288 ಕಿಲೋಮೀಟರ್ × 3,69,328 ಕಿಲೋಮೀಟರ್ ಟ್ರಾನ್ಸ್ ಲೂನಾರ್ ಕಕ್ಷೆಗೆ ಸೇರಿಸಿತು. ಲೂನಾರ್ ಆರ್ಬಿಟ್ ಇನ್‌ಸರ್ಷನ್ (ಚಂದ್ರನ ಕಕ್ಷೆಗೆ ಅಳವಡಿಸುವಿಕೆ - ಎಲ್ಒಐ) ಅನ್ನು ಆಗಸ್ಟ್ 5ರಂದು ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.

ಆಗಸ್ಟ್ 4: ಚಂದ್ರಯಾನ-3 ಚಂದ್ರನೆಡೆಗಿನ ತನ್ನ ಮೂರನೇ ಎರಡರಷ್ಟು ಪ್ರಯಾಣವನ್ನು ಪೂರ್ಣಗೊಳಿಸಿತು. ಲೂನಾರ್ ಆರ್ಬಿಟ್ ಇಂಜೆಕ್ಷನ್ ಅನ್ನು ಆಗಸ್ಟ್ 5ರಂದು ಸಂಜೆ 7 ಗಂಟೆಗೆ ನಡೆಸಲು ತೀರ್ಮಾನಿಸಲಾಯಿತು.

ಆಗಸ್ಟ್ 5: ಚಂದ್ರಯಾನ-3 ಸುಲಲಿತವಾಗಿ ಮೊದಲೇ ನಿರ್ಧರಿಸಿದ 164 ಕಿಲೋಮೀಟರ್ × 18,074 ಕಿಲೋಮೀಟರ್ ಕಕ್ಷೆಗೆ ಪ್ರವೇಶಿಸಿತು. ಇದಕ್ಕಾಗಿ ಬೆಂಗಳೂರಿನ ಮಿಷನ್ ಆಪರೇಶನ್ಸ್ ಕಾಂಪ್ಲೆಕ್ಸ್ ನಿಂದ ಒಂದು ನಿಖರ ಹೆಜ್ಜೆ ನಡೆಸಲಾಯಿತು. ಇದರ ಮುಂದಿನ ಮಹತ್ವದ ಘಟ್ಟವಾದ ಕಕ್ಷೆ ತಗ್ಗಿಸುವಿಕೆಯನ್ನು ಆಗಸ್ಟ್ 6ರಂದು ರಾತ್ರಿ 11 ಗಂಟೆಗೆ ನಡೆಸುವುದಾಗಿ ತಿಳಿಸಲಾಯಿತು.

ಆಗಸ್ಟ್ 6: ಬಾಹ್ಯಾಕಾಶ ನೌಕೆಯ ಇಂಜಿನ್‌ಗಳನ್ನು ಚಲಾಯಿಸಿ, ಮೊದಲೇ ನಿರ್ಧರಿಸಿದಂತೆ ಅದರ ಕಕ್ಷೆಯನ್ನು ಇಳಿಸಲಾಯಿತು. ಆ ಮೂಲಕ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಗೆ ಸನಿಹದ, 170 ಕಿಲೋಮೀಟರ್ × 4313 ಕಿಲೋಮೀಟರ್ ಕಕ್ಷೆಗೆ ಅಳವಡಿಸಲಾಯಿತು. ಇದರ ನಂತರದ ಹೆಜ್ಜೆಯನ್ನು ಆಗಸ್ಟ್ 9, 2023ರಂದು ನಡೆಸಲು ತೀರ್ಮಾನಿಸಲಾಯಿತು. ಇದನ್ನು ಮಧ್ಯಾಹ್ನ 1:00 - 2:00 ಗಂಟೆಯ ವೇಳೆಗೆ ನಡೆಸಿ, ಕಕ್ಷೆಯನ್ನು ಇನ್ನಷ್ಟು ತಗ್ಗಿಸಲು ನಿರ್ಧರಿಸಲಾಯಿತು.

ಆಗಸ್ಟ್ 8: ಇಸ್ರೋ ನಿರ್ದೇಶಕರಾದ ಡಾ. ಎಸ್ ಸೋಮನಾಥ್ ಅವರು ಒಂದು ಉಪನ್ಯಾಸದಲ್ಲಿ ಮಾತನಾಡುತ್ತಾ, ಒಂದು ವೇಳೆ ಚಂದ್ರಯಾನ-3ರ ಸೆನ್ಸರ್‌ಗಳು ಅಥವಾ ಇಂಜಿನ್ ಏನಾದರೂ ಸಮಸ್ಯೆಯನ್ನು ಎದುರಿಸಿದರೂ, ಅದು ಯಶಸ್ವಿಯಾಗಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಎಲ್ಲಿಯ ತನಕ ಪ್ರೊಪಲ್ಷನ್ ಸಿಸ್ಟಮ್ ಸರಿಯಾಗಿ ಕಾರ್ಯಾಚರಿಸುತ್ತದೋ, ಅಲ್ಲಿಯ ತನಕ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲಿಳಿಯಲಿದೆ ಎಂದು ಡಾ. ಸೋಮನಾಥ್ ಅಭಿಪ್ರಾಯ ಪಟ್ಟರು.

ಆಗಸ್ಟ್ 9: ಇಸ್ರೋ ಚಂದ್ರನ ಸುತ್ತಲಿನ ಬಾಹ್ಯಾಕಾಶ ನೌಕೆಯ ಕಕ್ಷೆಯನ್ನು ತಗ್ಗಿಸಿ, 174 ಕಿಲೋಮೀಟರ್ × 1437 ಕಿಲೋಮೀಟರ್ ಕಕ್ಷೆಗೆ ತಲುಪಿಸಿತು.

ಆಗಸ್ಟ್ 10: ಇಸ್ರೋ ಲೂನಾರ್ ಆರ್ಬಿಟ್ ಇನ್‌ಸರ್ಷನ್ ಸಂದರ್ಭದಲ್ಲಿ ಕ್ಲಿಕ್ಕಿಸಿದ ಚಂದ್ರನ ಛಾಯಾಚಿತ್ರವನ್ನು ಬಿಡುಗಡೆಗೊಳಿಸಿತು. ಅದರೊಡನೆ, ಲ್ಯಾಂಡರ್ ಕ್ಯಾಮರಾ ಜುಲೈ 14ರಂದು ಎಕ್ಸ್ ಪ್ಲಾಟ್‌ಫಾರಂನಲ್ಲಿ ತೆಗೆದ ಭೂಮಿಯ ಚಿತ್ರವನ್ನೂ ಬಿಡುಗಡೆಗೊಳಿಸಿತು.

ಆಗಸ್ಟ್ 14: ಚಂದ್ರಯಾನ-3 ಈಗ ಚಂದ್ರನಿಂದ ಕೆಲವು ನೂರು ಕಿಲೋಮೀಟರ್ ಅಷ್ಟೇ ದೂರದಲ್ಲಿತ್ತು. ಅದರ ಪಥವನ್ನು ವೃತ್ತಾಕಾರವಾಗಿಸುವ ಪ್ರಕ್ರಿಯೆ ಆರಂಭಗೊಂಡಿತು. ಜಾಗರೂಕವಾಗಿ ಕೈಗೊಂಡ ಚಲನೆ ಬಾಹ್ಯಾಕಾಶ ನೌಕೆಯನ್ನು ಬಹುತೇಕ ವೃತ್ತಾಕಾರದ, 150 ಕಿಲೋಮೀಟರ್ × 177 ಕಿಲೋಮೀಟರ್ ಕಕ್ಷೆಗೆ ಜೋಡಿಸಿತು. ಇದರ ಮುಂದಿನ ಹೆಜ್ಜೆಯನ್ನು ಆಗಸ್ಟ್ 16ರಂದು, ಬೆಳಗಿನ 8:30ರ ಅಂದಾಜಿಗೆ ನಡೆಸುವುದಾಗಿ ತೀರ್ಮಾನಿಸಲಾಯಿತು.

ಆಗಸ್ಟ್ 16: ನಿಖರವಾಗಿ, ಕೆಲ ಕಾಲದ ತನಕ ನಡೆಸಿದ ಉರಿಯುವಿಕೆ ಚಂದ್ರಯಾನ-3 ಅನ್ನು ಉದ್ದೇಶಿತ 153 ಕಿಲೋಮೀಟರ್ × 163 ಕಿಲೋಮೀಟರ್ ಕಕ್ಷೆಗೆ ಅಳವಡಿಸುವ ಮೂಲಕ ಕಕ್ಷೀಯ ಚಲನೆಗಳನ್ನು ಮುಕ್ತಾಯಗೊಳಿಸಿತು. ಇದಾದ ಬಳಿಕ, ಇಸ್ರೋ ಪ್ರೊಪಲ್ಷನ್ ಮಾಡ್ಯುಲ್ ಹಾಗೂ ಲ್ಯಾಂಡರ್ ಮಾಡ್ಯುಲ್‌ಗಳನ್ನು ಉದ್ದೇಶಿತ ಪಥಗಳಲ್ಲಿ ಕಳುಹಿಸುವ ಕುರಿತು ಕಾರ್ಯಾಚರಿಸತೊಡಗಿತು. ಮುಂದಿನ ಹಂತ ಲ್ಯಾಂಡರ್ ಮಾಡ್ಯುಲ್ ಹಾಗೂ ಪ್ರೊಪಲ್ಷನ್ ಮಾಡ್ಯುಲ್‌ಗಳನ್ನು ಬೇರ್ಪಡಿಸುವುದಾಗಿತ್ತು. ಇದನ್ನು ಆಗಸ್ಟ್ 17ರಂದು ನಡೆಸಲು ನಿರ್ಧರಿಸಲಾಯಿತು.

ಆಗಸ್ಟ್‌ 17: ಇಸ್ರೋ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಮಾಡ್ಯುಲ್ ಪ್ರೊಪಲ್ಷನ್ ಮಾಡ್ಯುಲ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿದೆ ಎಂದು ಘೋಷಿಸಿತು. ಆಗಸ್ಟ್ 18ರಂದು ಭಾರತೀಯ ಕಾಲಮಾನದಲ್ಲಿ ಸಂಜೆ 4:00 ಗಂಟೆಗೆ ವಿಕ್ರಮ್ ಚಂದ್ರನ ಮೇಲ್ಮೈಯೆಡೆಗೆ ಇಳಿಯುವ ಪ್ರಕ್ರಿಯೆಯನ್ನು ಆರಂಭಿಸಿತು.

ಆಗಸ್ಟ್ 18: ಪ್ರಗ್ಯಾನ್ ರೋವರ್ ಅನ್ನು ಒಳಗೊಂಡಿರುವ ವಿಕ್ರಮ್ ಲ್ಯಾಂಡರ್ ತನ್ನ ಮೊದಲ ಡಿಬೂಸ್ಟಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿತು. ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಗಳನ್ನು ಒಳಗೊಂಡ ಲ್ಯಾಂಡರ್ ಮಾಡ್ಯುಲ್ ತನ್ನ ಕಕ್ಷೆಯನ್ನು ಯಶಸ್ವಿಯಾಗಿ 113 ಕಿಲೋಮೀಟರ್ × 157 ಕಿಲೋಮೀಟರ್ ಕಕ್ಷೆಗೆ ಇಳಿಸಿತು.

ಎರಡನೆಯ ಡಿಬೂಸ್ಟಿಂಗ್ ಪ್ರಕ್ರಿಯೆ ಆಗಸ್ಟ್ 20ರಂದು ರಾತ್ರಿ 02:00 ಗಂಟೆಗೆ (ಭಾರತೀಯ ಕಾಲಮಾನ) ನೆರವೇರಲಿದೆ.

-ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News