ಚಾಮರಾಜನಗರ: ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುತ್ತಿರುವ ಬಜೆಟ್ ಮೇಲೆ ಜಾನಪದ ತವರೂರು, ಗಡಿ ಜಿಲ್ಲೆಯಾದ ಚಾಮರಾಜನಗರ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಚುನಾವಣೆ ಪೂರ್ವದಲ್ಲಾದರೂ ಜಿಲ್ಲೆಯ  ಜನರಿಗೆ ಸಂತೃಪ್ತಿದಾಯಕ ಬಜೆಟ್ ಕೊಡುತ್ತಾರೆ ಎಂಬ ವಿಶ್ವಾಸ ಇಲ್ಲಿನವರದ್ದಾಗಿದೆ.


COMMERCIAL BREAK
SCROLL TO CONTINUE READING

ರೈತರಿಗೆ ಸಿಗಬಹುದಾ ಸಿಹಿ..?
ಚಾಮರಾಜನಗರ ಜಿಲ್ಲೆಯಲ್ಲಿ ಬಹುಪಾಲು ಮಂದಿ ರೈತರು ಬಾಳೆ, ಅರಿಶಿಣ ಹಾಗೂ ಟೊಮ್ಯಾಟೊ, ಸಣ್ಣ ಈರುಳ್ಳಿಯನ್ನು ಬೆಳೆಯಲಿದ್ದು ತಮಿಳುನಾಡು ಮತ್ತು ಮೈಸೂರು ಉತ್ತಮ ಮಾರುಕಟ್ಟೆಗಳಾಗಿದೆ.  ಹಾಗಾಗಿಯೇ ಅರಿಶಿಣಪುಡಿ ತಯಾರಿಕಾ ಘಟಕ ಮತ್ತು ಟೊಮೆಟೊ, ಬಾಳೆ ಸಂಸ್ಕರಣ ಘಟಕವನ್ನು ಸ್ಥಾಪಿಸಬೇಕೆಂದು ಇಲ್ಲಿನ ಜನರ ಬಹುವರ್ಷಗಳ ಬೇಡಿಕೆ. ಜೊತೆಗೆ, ಹಣ್ಣು-ತರಕಾರಿ ಸಾಗಾಟಕ್ಕೆ ಗ್ರೀನ್ ವೆಹಿಕಲ್ ಮತ್ತು ಕೋಲ್ಡ್ ಸ್ಟೋರೇಜ್ ದೊರಕಿಸಿಕೊಡಬೇಕೆಂಬುದು ರೈತರ ಒತ್ತಾಯವಾಗಿದ್ದು ಈ ಬಾರಿಯಾದರೂ ಇಲ್ಲಿನ ರೈತರ ಕೂಗಿಗೆ ಸಿಎಂ ಬಸವರಾಜ್ ಬೊಮ್ಮಾಯಿ  ಕಿವಿಗೊಡುತ್ತಾರಾ ಎಂದು ಕಾದು ನೋಡಬೇಕಿದೆ‌. ಜೊತೆಗೆ, ಅರಿಶಿಣಕ್ಕೆ ಬೆಂಬಲ ಬೆಲೆ ಘೋಷಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.


ಮೊದಲು ರೇಷ್ಮೆಗೆ ಜಿಲ್ಲೆ ಹೆಸರುವಾಸಿಯಾಗಿತ್ತು.ಈಗ, ರೇಷ್ಮೆಯನ್ನು ಬೆಳೆಯುವವರೇ ಇಲ್ಲದಂತಾಗಿದೆ. ರೇಷ್ಮೆಗೆ ಜಿಲ್ಲೆಯಲ್ಲಿ ಮಾರುಕಟ್ಟೆ ಒದಗಿಸಲು ಸಿಲ್ಕ್ ಪಾರ್ಕ್ ನಿರ್ಮಾಣ ಮಾಡಬೇಕು ಮತ್ತು ರೇಷ್ಮೆ ಬೆಳೆಗೆ ಉತ್ತೇಜನ ನೀಡಲು ಯೋಜನೆಗಳನ್ನು ತರಬೇಕಿದೆ. ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಚ್.ಡಿ‌.ಕುಮಾರಸ್ವಾಮಿ ರೇಷ್ಮೆ ಕಾರ್ಖಾನೆ ಪುನರುಜ್ಜೀವನಗೊಳಿಸುವ ಭರವಸೆ ಇನ್ನೂ ಈಡೇರಿಲ್ಲ. ರೇಷ್ಮೆಯಿಂದ ವಿಮುಖರಾಗಿರುವ ರೈತರಿಗೆ ಉತ್ತೇಜನ ಕೊಡಬೇಕಿದೆ‌.


ಇದನ್ನೂ ಓದಿ- ಬಿಜೆಪಿಗೆ ಬೂಸ್ಟರ್‌ ಡೋಸ್‌ ನೀಡ್ತಾರಾ ಕಾಮನ್‌ಮ್ಯಾನ್‌


ಗಡಿನಾಡಿಗೆ ಬೇಕಿದೆ ಕನ್ನಡ ಭವನ-ಹೊಸ ಯೋಜನೆ
ಹೈದರಾಬಾದ್ ಕರ್ನಾಟಕ ಈಗ ಕಲ್ಯಾಣ ಕರ್ನಾಟಕವಾಗಿ ನಿರೀಕ್ಷೆಯಂತೆ ಅಭಿವೃದ್ಧಿಗೊಳ್ಳುತ್ತಿದೆ. ಅದೇ ರೀತಿ, ಎರಡು ರಾಜ್ಯಗಳ ಗಡಿಯನ್ನು ಹಂಚಿಕೊಂಡರು, ವ್ಯವಹಾರಿಕ ಸಂಬಂಧ ಗಟ್ಟಿಯಾಗಿದ್ದರೂ ಕನ್ನಡವೇ ಉಸಿರಾಗಿರುವ ಚಾಮರಾಜನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಕೊಡಬೇಕಿದೆ. ಪಕ್ಕದ ಮೈಸೂರು, ಮಂಡ್ಯದ ಗಡಿಗಳನ್ನಷ್ಟೇ ಚಾಮರಾಜನಗರ ಹೊಂದಿದ್ದು ಆ ಜಿಲ್ಲೆಗಳಲ್ಲಾಗುತ್ತಿರುವ ವೇಗದ ಬೆಳವಣಿಗೆ ಚಾಮರಾಜನಗರದಲ್ಲಿಲ್ಲ, ಈಗಲೂ ಪಕ್ಕದ ಜಿಲ್ಲೆಗಳನ್ನೇ ಉದ್ಯೋಗಕ್ಕೆ ಆಶ್ರಯಿಸಬೇಕಿದ್ದು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಿ ಜಿಲ್ಲಾಭಿವೃದ್ಧಿಗೆ ವೇಗ ಕೊಡಬೇಕಿದೆ.


ಎರಡು ರಾಜ್ಯಗಳ ಗಡಿ ಹೊಂದಿದ್ದರೂ ಅಚ್ಚ ಕನ್ನಡವೇ ಮೇಳೈಸಿರುವ ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣ ಮಾಡಬೇಕೆಂಬುದು ಬಹುದಿನದ ಬೇಡಿಕೆಯಾಗಿದೆ, ಚಾಮರಾಜನಗರದಲ್ಲೊಂದು  ಉಪನಗರ ನಿರ್ಮಾಣ ಮಾಡಬೇಕೆಂಬುದು ಒತ್ತಾಯವಾಗಿದೆ.


ಪ್ರವಾಸೋದ್ಯಮಕ್ಕೆ ಬೇಕಿದೆ ಪವರ್: 
ಚಾಮರಾಜನಗರ ಜಿಲ್ಲೆ ಶೇ.50-52 ರಷ್ಟು ಅರಣ್ಯದಿಂದ ಕೂಡಿರುವ ಸಂಪದ್ಭರಿತ ಜಿಲ್ಲೆ. ಎರಡು ಹುಲಿ ಸಂರಕ್ಷಿತ ಪ್ರದೇಶ, ಎರಡು ವನ್ಯಜೀವಿಧಾಮಗಳನ್ನು ಒಳಗೊಂಡ ರಾಜ್ಯದ ಏಕೈಕ ಜಿಲ್ಲೆಯಾಗಿದೆ‌‌‌. ಮೈಸೂರಿಗೆ ಬರುವ ಲಕ್ಷಾಂತರ ಪ್ರವಾಸಿಗರನ್ನು ಚಾಮರಾಜನಗರಕ್ಕೂ ಕರೆತರುವಲ್ಲಿ ಸರ್ಕಾರದ ಇಚ್ಛಾಶಕ್ತಿ ಪ್ರಮುಖ ಪಾತ್ರ ವಹಿಸಲಿದ್ದು ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಟ್ಟರೇ ಜಿಲ್ಲೆಗೆ ಅನೂಕೂಲ. ಚಾಮರಾಜನಗರಕ್ಕೆ ಎರಡು ಬಾರಿ ಭೇಟಿ ಕೊಟ್ಟಿರುವ ಬೊಮ್ಮಾಯಿ ತಮ್ಮ ಬಜೆಟ್ ನಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪವರ್ ಕೊಡುತ್ತಾರೆಂಬ ನಿರೀಕ್ಷೆ ಇದೆ. 


ಇಕೋ ಟೂರಿಸಂ, ಯಾತ್ರಾ ಪ್ರವಾಸೋದ್ಯಮ, ಜಲಪಾತಗಳ ವೀಕ್ಷಣೆ ಜಿಲ್ಲೆಯಲ್ಲಿ ಸಾಧ್ಯವಾಗಲಿದೆ. ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ,   ಬಂಡೀಪುರ ಮತ್ತು ಕೆ‌.ಗುಡಿಯಲ್ಲಿ ಸಫಾರಿ, ಹೊಗೆನಕಲ್, ಭರಚುಕ್ಕಿ ಜಲಪಾತ ಹೀಗೆ ಹತ್ತಾರು ಪ್ರೇಕ್ಷಣೀಯ ಸ್ಥಳಗಳನ್ನು ಹೊರನಾಡಿಗೆ, ವಿದೇಶಿಗಳಿಗೆ ಪರಿಚಯಿಸುವ ಕೆಲಸವನ್ನು ಬೊಮ್ಮಾಯಿ ಮಾಡುತ್ತಾರೆಂಬ ನಂಬಿಕೆ ಈ ಭಾಗದ ಜನರದ್ದಾಗಿದೆ‌.


ಇದನ್ನೂ ಓದಿ- Karnataka Budget 2023: ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಬಂಪರ್‌.. ಗೌರವಧನ ಹೆಚ್ಚಳದ ಭರವಸೆ.!!


ಬಸ್ ನಿಲ್ದಾಣ ವ್ಯವಸ್ಥೆ, ಪ್ರಾಣಿ ಸಂಘರ್ಷಕ್ಕೆ ತಡೆ: 
ಜಿಲ್ಲಾಕೇಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಈಗಾಗಲೇ ರೇಷ್ಮೆ ಇಲಾಖೆಯ ಸ್ಥಳ ಕೊಟ್ಟಿದ್ದರೂ ನಿರ್ಮಾಣ ಕಾರ್ಯ ಆರಂಭವಾಗುವ ಸೂಚನೆ ಕಾಣುತ್ತಿಲ್ಲ. ಆದ್ದರಿಂದ, ವಿಶೇಷ ಅನುದಾನದ ಮೂಲಕ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ, ಪ್ರತಿ ಗ್ರಾಮಗಳಿಗೆ ಬಸ್ ಸಂಪರ್ಕ ಕಲ್ಪಿಸುವ ಜವಾಬ್ದಾರಿ ಸಿಎಂ ಅವರ ಮೇಲಿದೆ. ಇದರ ಜೊತೆ,  ಜಿಲ್ಲಾ ಕೇಂದ್ರದಲ್ಲಿ ಒಂದು ಸಂಸ್ಕೃತ ಪಾಠಶಾಲೆ, ಸರ್ಕಾರಿ ಫಾರ್ಮಸಿ ಕಾಲೇಜು ಮಂಜೂರು ಮಾಡಿದರೆ ಉದ್ಯೋಗಕ್ಕೆ ನೆರವಾಗಲಿದೆ ಎಂಬುದು ಜಿಲ್ಲೆ ಜನತೆ ಅಭಿಮತ‌.


ಜೊತೆಗೆ, ಬಹುಮುಖ್ಯವಾಗಿ ಜಿಲ್ಲೆಯಲ್ಲಿ ಪ್ರಾಣಿ ಮತ್ತು ಮಾನವ ಸಂಘರ್ಷ ದೊಡ್ಡ ಸಮಸ್ಯೆಯಾಗಿದ್ದು ಇದನ್ಜು ತಪ್ಪಿಸಲು ಶಾಶ್ವತ ಯೋಜನೆ ಇಲ್ಲವೇ ಶಾಶ್ವತ ಕಾರ್ಯಪಡೆ ಜಿಲ್ಲೆಗೆ ಬೇಕಿದೆ, ಬೆಳೆ ಹಾನಿಗೆ ತಕ್ಕ ಸಮರ್ಪಕ ಪರಿಹಾರವನ್ನು ಸರ್ಕಾರ ಕೊಡಲು ಬಜೆಟ್ ನಲ್ಲಿ ಹೊಸ ಯೋಜನೆ ಘೋಷಣೆ ಮಾಡಬೇಕೆಂಬುದು ರೈತರ ಆಗ್ರಹ.


ಬಹುತೇಕ ಸರ್ಕಾರಿ ಶಾಲೆಗಳು ಶಿಥಿಲಗೊಂಡಿದ್ದು ಇವುಗಳ ನಿರ್ಮಾಣಕ್ಕಾಗಿ ಹಣ, ರಸ್ತೆಗಳಿಗೆ ಅನುದಾನ,  ಹೆಲಿ ಟೂರಿಸಂ, ಗುಡಿ ಕೈಗಾರಿಕೆಗಳಿಗೆ ಸಿಎಂ ಬೊಮ್ಮಾಯಿ ಒತ್ತು ಕೊಡುವ ನಂಬಿಕೆ ಇದ್ದು ಜನರ ನಿರೀಕ್ಷೆ ಸಾಕಾರಗೊಳ್ಳುವುದೋ ಎಂಬುದನ್ನು ಕಾದು ನೋಡಬೇಕಿದೆ.


5 ಸಾವಿರ ಕೋಟಿ ಪ್ಯಾಕೇಜ್ ಗೆ ವಾಟಾಳ್ ಆಗ್ರಹ : 
ಜಿಲ್ಲೆಗೆ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಇದಲ್ಲದೆ, ಚಾಮರಾಜನಗರ ಜಿಲ್ಲೆಗೆ 50 ಸಾವಿರ ಮನೆಗಳನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.