ನವದೆಹಲಿ: ಕೊರೋನಾವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದರ ಪರಿಣಾಮ ಈಗ ರಾಜ್ಯದಲ್ಲಿಯೂ ಕೂಡ ಬೀರಿದೆ. ಈ ಹಿನ್ನಲೆಯಲ್ಲಿ ವಿಶೇಷವಾಗಿ ರಾಜ್ಯದಲ್ಲಿನ ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ವಿಚಾರವಾಗಿ ಸ್ವತಃ ಪ್ರಧಾನಿ ಕಚೇರಿ ಕಾಳಜಿ ವಹಿಸುತ್ತಿದೆ.


COMMERCIAL BREAK
SCROLL TO CONTINUE READING

ದಕ್ಷಿಣ ಭಾರತದ ಕೇರಳ ಹಾಗೂ ಲಕ್ಷದ್ವೀಪಗಳಲ್ಲಿನ ಕೊರೊನಾ ಪ್ರಕರಣಗಳನ್ನು ನಿಭಾಯಿಸುವ ಹೊಣೆ ಹೊತ್ತಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಪ್ರಧಾನಿ ಕಚೇರಿಯಿಂದ ಕರೆ ಮಾಡಿ ಮೈಸೂರು ಮತ್ತು ಬೆಂಗಳೂರಿನಲ್ಲಿನ  ಕೊರೋನಾ ವಿದ್ಯಮಾನಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.ಈಗಾಗಲೇ ಕೇಂದ್ರ ಸಚಿವರು ಈ ನಿಟ್ಟಿನಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಪ್ರಧಾನಮಂತ್ರಿ ಕಚೇರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.


ಬೆಂಗಳೂರಿನ ಕೊರೋನಾ ಪ್ರಕರಣಗಳ ವಿಚಾರವಾಗಿ ನಿಮ್ಹಾನ್ಸ್ ನಿರ್ದೇಶಕ ಪ್ರೋ. ಬಿ ಎನ್ ಗಂಗಾಧರ್, ಜಯದೇವ ಅಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಮುಂತಾದವರೊಂದಿಗೆ ಸಚಿವರು ಮಾಹಿತಿ ಸಂಗ್ರಹಿಸಿದ್ದಾರೆ. ಅದೇ ರೀತಿಯಾಗಿ ಮೈಸೂರು ಪ್ರಕರಣಗಳ ವಿಚಾರವಾಗಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರಿನ ರಾಜ ಕುಟುಂಬದ ಯದುವೀರ ಒಡೆಯರ್ ಮತ್ತು ಡಾ. ಮಂಜುನಾಥ್ ಅವರೊಂದಿಗೆ ಡಿವಿಎಸ್ ಚರ್ಚಿಸಿದ್ದಾರೆ.


ಈ ವಿಚಾರವಾಗಿ ತಿಳಿಸಿದ ಕೇಂದ್ರ ಸಚಿವ ಡಿವಿಎಸ್ 'ಮೈಸೂರು ಮತ್ತು ಬೆಂಗಳೂರಿನಲ್ಲಿ ಕೊರೋನಾ ಹಬ್ಬಿದ ರೀತಿ, ಕೊರೋನಾ ಸೋಂಕು ಹಬ್ಬುವುದನ್ನು ತಡೆಯಲು ಅಲ್ಲಿ ಕೈಗೊಂಡಿರುವ ಕ್ರಮಗಳು, ಒಂದು ವೇಳೆ ಈ ಭಾಗದಲ್ಲಿ ಲಾಕ್ ಡೌನ್ ಸಡಿಲಗೊಳಿಸಿದರೆ ಆಗುವ ಸಾಧಕ ಬಾಧಕಗಳು ಮುಂತಾದವುಗಳ ಬಗ್ಗೆ ನಾನು ಸಮಾಲೋಚನೆ ನಡೆಸಿದ್ದು, ಪ್ರಧಾನಿ ಕಾರ್ಯಾಲಯಕ್ಕೆ ವರದಿ ನೀಡಿದ್ದೇನೆ ಎಂದು ಸುದ್ದಿಮೂಲಗಳಿಗೆ ತಿಳಿಸಿದ್ದಾರೆ.