ಹಾಸನ: ಹಾಲು ಉತ್ಪಾದನೆಯಲ್ಲಿ ಗುಜರಾತ್ ಬಿಟ್ಟರೆ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿ ದಾಪುಗಾಲು ಇಟ್ಟಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
    
ಹಾಸನ ಡೈರಿ ಆವರಣದಲ್ಲಿ ಭಾನುವಾರ(ಸೆ.23) ರೂ. 37 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ನೂತನ ಐಸ್ ಕ್ರೀಂ ಉತ್ಪಾದನಾ ಘಟಕ, ರೂ. 279 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಮತ್ತು ಹಾಲಿನಪುಡಿ ಘಟಕ ಸಮುಚ್ಚಯ ನಿರ್ಮಾಣದ ಶಂಕುಸ್ಥಾಪನೆ, ರೂ.136 ಕೋಟಿ ವೆಚ್ಚದಲ್ಲಿ ಯು.ಹೆಚ್.ಟಿ. ಸುವಾಸಿತ ಹಾಲಿನ ಪೆಟ್ ಬಾಟಲ್ ಘಟಕ, ರೂ.67 ಕೋಟಿ ವೆಚ್ಚದಲ್ಲಿ ಯು.ಹೆಚ್.ಟಿ. ಘಟಕದ ಉತ್ಪಾದನಾ ಸಾಮರ್ಥ್ಯ 2 ರಿಂದ 4 ಲಕ್ಷ ಲೀ.ಗಳಿಗೆ ವಿಸ್ತರಣೆಗೆ ಶಂಕುಸ್ಥಾಪನೆ, ರೂ. 23 ಕೋಟಿ ವೆಚ್ಚದಲ್ಲಿ ಹಾಸನ ಡೈರಿ ಸಂಸ್ಕರಣಾ ಸಾಮರ್ಥ್ಯ 3 ರಿಂದ 5 ಲಕ್ಷ ಲೀ.ಗಳಿಗೆ ವಿಸ್ತರಣೆಗೆ ಶಂಕುಸ್ಥಾಪನೆ, ರೂ.4.5 ಕೋಟಿ ವೆಚ್ಚದಲ್ಲಿ ಎಸ್.ಎಂ.ಒಇ ಗೋದಾಮು ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ, ರೂ. 4.8 ಕೋಟಿ ವೆಚ್ಚದಲ್ಲಿ ಉಗ್ರಾಣ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ, ರೂ. 3.5 ಕೋಟಿ ವೆಚ್ಚದಲ್ಲಿ ಆಡಳಿತ ಕಚೇರಿ ಕಟ್ಟಡ ನಿರ್ಮಾಣ ಸೇರಿದಂತೆ ಒಟ್ಟಾರೆ ರೂ. 556 ಕೋಟಿ ವೆಚ್ಚದ ವಿವಿಧ ಘಟಕಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಸಿಎಂ ಕುಮಾರಸ್ವಾಮಿ ಮಾತನಾಡಿದರು.
 
ಲೋಕೋಪಯೋಗಿ ಸಚಿವರು ಹಾಗೂ ಹಾಲು ಒಕ್ಕೂಟದ ಅಧ್ಯಕ್ಷರಾದ ಹೆಚ್.ಡಿ. ರೇವಣ್ಣನವರು ಹಾಲು ಒಕ್ಕೂಟದ ಬಾರಿ ಚಟುವಟಿಕೆಗಳಿಗೆ ಪ್ರಮುಖ ಕಾರಣಕರ್ತರಾಗಿದ್ದಾರೆ ಎಂದು ತಿಳಿಸಿದ ಸಿಎಂ, ಹಲವಾರು ಅಭಿವೃದ್ಧಿಗಾಗಿ ವೈಯಕ್ತಿಕವಾಗಿ ಶ್ರಮವಹಿಸುತ್ತಿದ್ದು, ಹಾಲು ಉತ್ಪಾದನೆ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಹೆಚ್ಚುವರಿ ಹಾಲಿನ ಮಾರುಕಟ್ಟೆ ಸಮಸ್ಯೆ ಅರಿತ  ರೇವಣ್ಣನವರು ವಿವಿಧ ಬಗೆಯ ಹಾಲಿನ ಉಪ ಉತ್ಪನ್ನಗಳ ಉತ್ಪ್ಪಾದನೆಗೆ ಚಾಲನೆ ನೀಡಿದ್ದು, ದೇಶ ಮತ್ತು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದರು.


COMMERCIAL BREAK
SCROLL TO CONTINUE READING

ರೈತ ಬಾಂದವರು ಕೃಷಿಯಲ್ಲಿ ಹಲವು ಬಗೆಯ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಹೈನುಗಾರಿಕೆಯು ಕೃಷಿಕರ ಆರ್ಥಿಕ ಶಕ್ತಿಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ.     ರೈತರ ಬದುಕು ನೆಮ್ಮದಿಯಿಂದ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.


ಮಾಜಿ ಪ್ರಧಾನ ಮಂತ್ರಿ ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರು, ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ. ರೇವಣ್ಣ, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರಾ ಸಾ.ರಾ. ಮಹೇಶ್, ಶಾಸಕರುಗಳಾದ ಎ.ಟಿ. ರಾಮಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಹೆಚ್.ಕೆ. ಕುಮಾರಸ್ವಾಮಿ, ಸಿ.ಎನ್. ಬಾಲಕೃಷ್ಣ, ಕೆ.ಎಸ್.ಲಿಂಗೇಶ್, ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ, ರಾಜ್ಯದ ಉನ್ನತ ಅಧಿಕಾರಿಗಳು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.