`ತಮಿಳುನಾಡಿನ ಮಾತು ಕೇಳಿಕೊಂಡು ಕೇಂದ್ರ ಸರ್ಕಾರ ಡ್ಯಾಂ ನಿರ್ಮಾಣಕ್ಕೆ ಅನುಮತಿ ಕೊಡುತ್ತಿಲ್ಲ`
ತಮಿಳುನಾಡಿನ ಮಾತು ಕೇಳಿಕೊಂಡು ಕೇಂದ್ರ ಸರ್ಕಾರ ಡ್ಯಾಂ ನಿರ್ಮಾಣಕ್ಕೆ ಅನುಮತಿ ಕೊಡುತ್ತಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ತಮಿಳುನಾಡಿನ ಮಾತು ಕೇಳಿಕೊಂಡು ಕೇಂದ್ರ ಸರ್ಕಾರ ಡ್ಯಾಂ ನಿರ್ಮಾಣಕ್ಕೆ ಅನುಮತಿ ಕೊಡುತ್ತಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜನಗರದಲ್ಲಿ ಆಯೋಜಿಸಿದ್ದ ಮೇಕೆದಾಟು ಯೋಜನೆ ಜಾರಿ ಕುರಿತಾದ ಜನಜಾಗೃತಿ ಸಭೆ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ಮಾತನಾಡುತ್ತಿದ್ದರು.
ಇದನ್ನೂ ಓದಿ: ಕೊರೊನಾ ಭೀತಿ ಹಿನ್ನಲೆಯಲ್ಲಿ ವರ್ಚುವಲ್ ವಿಚಾರಣೆಗೆ ಮುಂದಾದ ಸುಪ್ರೀಂಕೋರ್ಟ್
ಈ ಹಿಂದೆ ಕೊರೊನಾ ರೋಗ ಹೆಚ್ಚಾದಾಗ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಆಗ ಮೃತರ ಕುಟುಂಬದವರನ್ನು ಸಂತೈಸಿ, ಅವರಿಗೆ ನ್ಯಾಯ ದೊರಕಿಸಿಕೊಡಲು ಚಾಮರಾಜನಗರಕ್ಕೆ ಕಡೆಯದಾಗಿ ಬಂದಿದ್ದೆ. ರಾಜ್ಯ ಸರ್ಕಾರದ ಆರೋಗ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸತ್ತಿದ್ದು ಕೇವಲ ಮೂರೆ ಮಂದಿ ಎಂದು ಸುಳ್ಳು ಹೇಳಿದ್ದರು, ಜಗತ್ತಿಗೆ ಸತ್ಯವನ್ನು ತೆರೆದಿಡಲು ನಾನು ಚಾಮರಾಜನಗರಕ್ಕೆ ಬಂದು, ವೈದ್ಯರು, ಅಧಿಕಾರಿಗಳೊಂದಿಗೆ ಸಭೆ ಮಾಡಿ ಸತ್ತವರ ನಿಜವಾದ ಲೆಕ್ಕವನ್ನು ಮಾಧ್ಯಮಗಳೆದುರು ಹೇಳಿದ್ದೆ. ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಂಡ 36 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ.
ಚಾಮರಾಜನಗರ ಜಿಲ್ಲೆಗೆ ಬಂದರೆ ಮುಖ್ಯಮಂತ್ರಿ ಹುದ್ದೆ ಹೋಗುತ್ತದೆ ಎಂಬ ಮೂಢನಂಬಿಕೆ ಇತ್ತು, ಇದನ್ನು ತೊಲಗಿಸಬೇಕು ಎಂದೇ ನಾನು ಮುಖ್ಯಮಂತ್ರಿ ಆಗಿದ್ದಾಗ 10 ರಿಂದ 12 ಬಾರಿ ಇಲ್ಲಿಗೆ ಬಂದು ಹೋಗಿದ್ದೆ ಮತ್ತು ಐದು ವರ್ಷ ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿ ಉಳಿದಿದ್ದೆ. ಜೆ.ಹೆಚ್ ಪಟೇಲ್ ಅವರದ ಸರ್ಕಾರದ ಕಾಲದಲ್ಲಿ ರಾಚಯ್ಯ ಮತ್ತು ನಾನು ಇಲ್ಲಿಗೆ ಬಂದು ಚಾಮರಾಜನಗರವನ್ನು ಹೊಸ ಜಿಲ್ಲೆಯಾಗಿ ಘೋಷಣೆ ಮಾಡಿದ್ದೆವು. ಇಂದು ಅವರು ನಮ್ಮೊಂದಿಗಿಲ್ಲ ಅನ್ನೋದು ನೋವಿನ ವಿಚಾರ.
ನಾನು ಮುಖ್ಯಮಂತ್ರಿ ಆಗಿದ್ದಾಗ ಸುಮಾರು ಹತ್ತು ಸಾವಿರ ಕೋಟಿಗೂ ಅಧಿಕ ಹಣವನ್ನು ಚಾಮರಾಜನಗರದ ಅಭಿವೃದ್ಧಿಗೆ ಕೊಟ್ಟಿದ್ದೆ. ಕೃಷಿ, ಕಾನೂನು ಕಾಲೇಜು, ಸರ್ಕಾರಿ ಆಸ್ಪತ್ರೆ, ದ್ವಿಪಥ ರಸ್ತೆಗಳು ಇವೆಲ್ಲ ನಮ್ಮ ಸರ್ಕಾರದ ಕೊಡುಗೆಗಳು, ಇಂದು ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಕೂಡ ನಮ್ಮ ಸರ್ಕಾರದ ಕಾಲದಲ್ಲಿ ಅನುಮೋದನೆಗೊಂಡವೇ ಆಗಿವೆ.
ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 3,194 ಹೊಸ ಪ್ರಕರಣಗಳು ದಾಖಲು
ಬಿಜೆಪಿ ಸರ್ಕಾರ ಬಂದಮೇಲೆ ರಾಜ್ಯದಲ್ಲಿ ಒಂದೇ ಒಂದು ಹೊಸದಾಗಿ ಮನೆ ನಿರ್ಮಿಸಿಕೊಟ್ಟಿಲ್ಲ. ನಮ್ಮ ಕಾಲದಲ್ಲಿ ಕೊಟ್ಟ ಮನೆಗಳಿಗೂ ಹಣ ಬಿಡುಗಡೆ ಮಾಡ್ತಿಲ್ಲ. ವಸತಿ ಸಚಿವ ಸೋಮಣ್ಣನಿಗೆ ಬಡವರಿಗೆ ಮನೆ ಕೊಡೋಕಾಗಲ್ಲ ಅಂದ್ರೆ ಅಧಿಕಾರದಲ್ಲಿ ಯಾಕಿದೀರಪ್ಪ, ರಾಜೀನಾಮೆ ಕೊಡಿ ಎಂದರೆ ಸರ್ಕಾರ ದುಡ್ ಕೊಡ್ತಿಲ್ಲ ಸಾರ್ ಅಂತಾರೆ, ವಿಜೇಂದ್ರನಿಗೂ ಸೋಮಣ್ಣನಿಗೂ ವೈಯಕ್ತಿಕವಾಗಿ ಸರಿ ಇರಲಿಲ್ಲ ಹಾಗಾಗಿ ಇವರ ಇಲಾಖೆಗೆ ಬೇಕಂತಲೇ ದುಡ್ಡು ಬಿಡುಗಡೆ ಮಾಡುತ್ತಾ ಇರಲಿಲ್ಲ.
ಅಭಿವೃದ್ಧಿ ಕೆಲಸ ಮಾಡದ ಬಿಜೆಪಿ ಸರ್ಕಾರವನ್ನು ಕಿತ್ತು ಬಿಸಾಕಿ ಮುಂದಿನ ಚುನಾವಣೆಯಲ್ಲಿ ಚಾಮರಾಜನಗರದ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು. ಅದು ಇಂದಿನಿಂದಲೇ ಆರಂಭ ಆಗಬೇಕು.
1968 ರಲ್ಲೇ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ಪ್ರಯತ್ನ ಮಾಡಿತ್ತು, ಆದರೆ ಆಗ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಜಲ ವಿವಾದ ನ್ಯಾಯಾಲಯದಲ್ಲಿ ಇದ್ದಿದ್ದರಿಂದ ಅನುಷ್ಠಾನ ಸಾಧ್ಯವಾಗಲಿಲ್ಲ. ನಂತರ 2017 ರಲ್ಲಿ ನಮ್ಮ ಸರ್ಕಾರ ಈ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿತ್ತು. ಆಗ ಯೋಜನಾ ವೆಚ್ಚ ರೂ. 5,912 ಕೋಟಿ. ನಂತರ ಸಮ್ಮಿಶ್ರ ಸರ್ಕಾರ ಬಂದಮೇಲೆ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರು ಮತ್ತೆ ರೂ. 9000 ಕೋಟಿಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಆಗಲೂ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿಲ್ಲ.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯೋಜನೆ ಜಾರಿಗೆ ಪ್ರಯತ್ನ ಮಾಡದೆ ಈಗ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ ಎಂದು ಗೋವಿಂದ ಕಾರಜೋಳ ಸುಳ್ಳು ಆರೋಪ ಮಾಡಿದ್ದಾರೆ. ಅವರ ಆರೋಪಕ್ಕೆ ಸೂಕ್ತ ಸಾಕ್ಷಿ ಇದ್ದರೆ ಕೂಡಲೇ ಬಿಡುಗಡೆ ಮಾಡಲಿ ಎಂದು ಸವಾಲು ಹಾಕುತ್ತೇನೆ.
ಇದೊಂದು ಕುಡಿಯುವ ನೀರಿನ ಯೋಜನೆ ಹಾಗಾಗಿ ಯಾರೂ ಕೂಡ ತಕರಾರು ಮಾಡುವಂತಿಲ್ಲ, ಕೇಂದ್ರದ ಅರಣ್ಯ ಇಲಾಖೆಯ ಅನುಮತಿ ಒಂದು ಸಿಕ್ಕರೆ ಅಣೆಕಟ್ಟು ನಿರ್ಮಾಣ ಮಾಡಲು ಬೇರಾವ ಅನುಮತಿಯೂ ಬೇಡ. ಎರಡೂ ಕಡೆ ಬಿಜೆಪಿಯವರ ಸರ್ಕಾರ ಇದೆ, ಆದರೂ ಯೋಜನೆ ಜಾರಿ ಮಾಡದೆ ಯಾಕೆ ಸುಮ್ಮನಿದ್ದಾರೆ? ಇದೇನಾ ಡಬ್ಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ?
ಇದನ್ನೂ ಓದಿ: ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ಹರ್ಯಾಣದಲ್ಲಿ ಕಾಲೇಜ್ ಮತ್ತು ವಿವಿಗಳು ಬಂದ್
ಒಂದು ಸಾಮಾನ್ಯ ವರ್ಷದಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ 177.25 ಟಿ.ಎಂ.ಸಿ ಕಾವೇರಿ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಇದನ್ನು ಬಿಟ್ಟರೆ ತಮಿಳುನಾಡಿಗೆ ಕಾವೇರಿ ನೀರಿನ ವಿಚಾರದಲ್ಲಿ ತಕರಾರು ಮಾಡಲು ಬೇರೆ ಯಾವುದೇ ರೀತಿಯ ಕಾನೂನು ಹಕ್ಕಿಲ್ಲ. ಪ್ರತೀ ವರ್ಷ ಸುಮಾರು 200 ಟಿ.ಎಂ.ಸಿ ನೀರು ಸಮುದ್ರ ಪಾಲಾಗುವ ಮೂಲಕ ವ್ಯರ್ಥವಾಗುತ್ತಿದೆ. ಹೀಗೆ ವ್ಯರ್ಥವಾಗುವ ನೀರನ್ನು ಕುಡಿಯುವ ಮತ್ತು ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಮೇಕೆದಾಟು ಯೋಜನೆ ರೂಪಿಸಲಾಗಿದೆ. ವಿದ್ಯುತ್ ಉತ್ಪಾದನೆ ಆದ ಮೇಲೆ ಆ ನೀರು ಕೂಡ ತಮಿಳುನಾಡಿಗೆ ಹೋಗುತ್ತದೆ, ಅದೂ ಅವರಿಗೆ ಇನ್ನೊಂದು ಲಾಭದಾಯಕ ಅಂಶ.
ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ಜಾರಿ ಮಾಡಬಾರದು ಎಂದು ಧರಣಿ ಕೂತಿದ್ದಾರೆ. ತಮಿಳುನಾಡಿನ ಬಿಜೆಪಿ ಉಸ್ತುವಾರಿ ಸಿ.ಟಿ ರವಿ ಅವರು ಕೂಡ ಮೇಕೆದಾಟು ವಿರುದ್ಧವಾಗಿದ್ದಾರೆ. ಹೀಗಾಗಿಯೇ ಯೋಜನೆ ಜಾರಿಯಾಗದೆ ಅನಗತ್ಯ ವಿಳಂಬವಾಗುತ್ತಿದೆ. ಈ ವಿಳಂಬವನ್ನು ವಿರೋಧಿಸಿಯೇ ಕಾಂಗ್ರೆಸ್ ಪಕ್ಷ ಈ ತಿಂಗಳ 9 ನೇ ತಾರೀಖಿನಿಂದ ಮೇಕೆದಾಟು ಇಂದ ಬೆಂಗಳೂರು ವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ.
ಇದನ್ನೂ ಓದಿ: Omicron : ರಾಜ್ಯದಲ್ಲಿ ಒಮಿಕ್ರಾನ್ ಭೀತಿ! ಮತ್ತಷ್ಟು ಟಫ್ ರೋಲ್ಸ್ ಗೆ ಸಲಹಾ ಸಮಿತಿ ಶಿಫಾರಸ್ಸು
ಹೇಮಾವತಿ, ಕಬಿನಿ, ಕೆಆರ್‌ಎಸ್ ನಲ್ಲಿ ನೀರಿದ್ದರೆ ಮಾತ್ರ ಚಾಮರಾಜನಗರ, ಮೈಸೂರು, ತುಮಕೂರು, ಮಂಡ್ಯ ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ನೀರು ಸಿಗೋದು. ಹೀಗಾಗಿ ಮನೆಗೊಂದು ಆಳಿನಂತೆ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಸಿದ್ಧರಾಮಯ್ಯ ವಿನಂತಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.