ಸಿ.ಪಿ.ಯೋಗೇಶ್ಚರ್ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಅಶ್ವತ್ಥ್ ನಾರಾಯಣ್ ಸ್ಪಷ್ಟನೆ
ಸಿ.ಪಿ. ಯೋಗೇಶ್ವರ್ ಕನಸಿನಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಚಿಂತನೆ ಮಾಡುವುದಿಲ್ಲ.
ಚನ್ನಪಟ್ಟಣ: ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅಶ್ವತ್ಥ್ ನಾರಾಯಣ್ ಸ್ಪಷ್ಟ ಪಡಿಸಿದ್ದಾರೆ.
ಚನ್ನಪಟ್ಟಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶ್ವತ್ಥ್ ನಾರಾಯಣ್, ಸಿ.ಪಿ. ಯೋಗೇಶ್ವರ್ ನಮ್ಮ ಪಕ್ಷದ ವರಿಷ್ಠ ನಾಯಕ. ಸಿಪಿವೈ ಬಿಜೆಪಿಯಲ್ಲಿ ಸದಾ ಉತ್ತುಂಗದಲ್ಲಿರುತ್ತಾರೆ. ಅವರು ಕನಸಿನಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಚಿಂತನೆ ಮಾಡುವುದಿಲ್ಲ. ಅದೊಂದು ತಿರಸ್ಕೃತ ಪಕ್ಷ. ಸಮಾಜ ವಿಭಜನೆ, ಜಾತಿ ವಿಭಜನೆ ಕೆಲಸ ಮಾಡುವ ಕಾಂಗ್ರೆಸ್ ಈಗಾಗಲೇ ಮುಳುಗುತ್ತಿದೆ ಎಂದರು.
ಚನ್ನಪಟ್ಟಣದಲ್ಲಿ ಆಗಿರುವ ನೀರಾವರಿ ಸುಧಾರಣೆಗೆ ಸಿ.ಪಿ. ಯೋಗೇಶ್ವರ್ ಹಾಗೂ ನಮ್ಮ ಪಕ್ಷದ ಕೊಡುಗೆ ಅಪಾರ ಎಂದ ಅಶ್ವತ್ಥ್ ನಾರಾಯಣ್, ಮುಂಬರುವ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗಲಿದೆ. ಸಿಪಿವೈಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ದೊರೆಯಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಯೋಗೇಶ್ವರ್ ಸ್ಪರ್ಧಿಸುತ್ತಾರೆಯೇ ಎಂಬ ಮಾಧ್ಯಮ ಮಿತ್ರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ್, ಅದಕ್ಕೆ ಇನ್ನೂ ಸಮಯವಿದೆ. ಸಮಯ ಬಂದಾಗ ಎಲ್ಲವೋಒ ತಿಳಿಯಲಿದೆ ಎಂದಷ್ಟೇ ಪ್ರತಿಕ್ರಿಯಿಸಿದರು.
ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ:
ಇದೇ ಸಂದರ್ಭದಲ್ಲಿ ಸ್ಥಳೀಯ ಚುನಾವಣೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥ್ ನಾರಾಯಣ್, ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಖಂಡಿತ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉಪಚುನಾವಣೆಯಲ್ಲಿ ಅನರ್ಹರ ಸ್ಪರ್ಧೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಇದು ಅನರ್ಹ ಶಾಸಕರ ಬಗ್ಗೆ ಮಾತನಾಡುವ ಸ್ಥಳ ಅಲ್ಲ. ಬರೀ ರಾಜಕೀಯದ ಬಗ್ಗೆ ಮಾತನಾಡುವುದು ಬೇಡ. ಅಭಿವೃದ್ಧಿ ಬಗ್ಗೆಯು ಮಾತನಾಡೊಣ ಎಂದು ಹೇಳುವ ಮೂಲಕ ಅನರ್ಹ ಶಾಸಕರ ಬಗ್ಗೆ ಮಾತನಾಡಲು ನಿರಾಕರಿಸಿದರು.