ನನ್ನ ಚಾರಿತ್ರ್ಯವಧೆ ಮಾಡುವ ಮುನ್ನ ನಿಮ್ಮ ಹಿನ್ನೆಲೆಯನ್ನೊಮ್ಮೆ ನೋಡಿಕೊಳ್ಳಿ; ಸ್ಪೀಕರ್ ರಮೇಶ್ ಕುಮಾರ್!
ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಕೆಲಸಕ್ಕೆ ಮುಂದಾಗಬೇಡಿ. ಇಂತಹ ಸಾವಿರ ಆರೋಪ ಬಂದರೂ ಅದನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ನನಗೆ ಜನ್ಮತಃ ಬಂದಿದೆ- ಟೀಕಾಕಾರರಿಗೆ ಸದನದಲ್ಲಿ ಸ್ಪೀಕರ್ ಉತ್ತರ
ಬೆಂಗಳೂರು: ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಸ್ವಜನ ಪಕ್ಷಪಾತ ಮಾಡುತ್ತಿದ್ದು, ಉದ್ದೇಶ ಪೂರ್ವಕವಾಗಿ ಬಹುಮತ ಸಾಬೀತು ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಬೇಸರ ವ್ಯಕ್ತಪಡಿಸಿರುವ ಸ್ಪೀಕರ್, ನನ್ನ ಚಾರಿತ್ರ್ಯವಧೆ ಮಾಡುವ ಮುನ್ನ ನಿಮ್ಮ ಹಿನ್ನೆಲೆಯನ್ನೊಮ್ಮೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.
ಕಲಾಪದ ಆರಂಭದಲ್ಲಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಒಬ್ಬ ವ್ಯಕ್ತಿಯ ಚಾರಿತ್ರ್ಯವಧೆ ಮಾಡುವುದು ಬಹಳ ಸುಲಭ. ಆದರೆ, ನನ್ನ ಬಗ್ಗೆ ಮಾತನಾಡುವ ಮುನ್ನ ನಿಮ್ಮ ಹಿನ್ನೆಲೆಯನ್ನೊಮ್ಮೆ ನೋಡಿಕೊಳ್ಳಿ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಕೆಲಸಕ್ಕೆ ಮುಂದಾಗಬೇಡಿ ಎಂದು ನುಡಿದರು.
ಒಂದು ದಿನ ಕಲಾಪ ಮುಂದೂಡಿದರೆ ನನಗೆ 12 ಕೋಟಿ ರೂಪಾಯಿ ಲಾಭವಾಗುತ್ತೆ ಎಂದು ಆರೋಪಿಸುತ್ತಾರೆ. ನನ್ನ ವೈಯಕ್ತಿಕ ಜೀವನವನ್ನು ನೋಡಿದರೆ ನಾನು ಎಷ್ಟು ಸಾವಿರ ಕೋಟಿ ಹೊಂದಿದ್ದೇನೆ ಎಂಬುದು ತಿಳಿಯುತ್ತಿದೆ. ಲಜ್ಜೆ ಬಿಟ್ಟು ಕೋಟ್ಯಂತರ ರೂ. ಸಂಪಾದಿಸುವವರನ್ನು ಪ್ರಶ್ನಿಸುವವರೇ ಇಲ್ಲ. ನನ್ನ ವಿರುದ್ಧ ಇಂತಹ ಸಾವಿರ ಆರೋಪ ಬಂದರೂ ಅದನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ನನಗೆ ಜನ್ಮತಃ ಬಂದಿದೆ. ಅಂತಹ ಧೈರ್ಯವನ್ನು ನನ್ನ ತಂದೆ ತಾಯಿ ನೀಡಿದ್ದಾರೆ, ನನ್ನನ್ನು ರಕ್ಷಣೆ ಮಾಡಿದ ಜನ ನನಗೆ ಆ ಶಕ್ತಿ ನೀಡಿದ್ದಾರೆ. ನಾನು ಮತ್ತೊಮ್ಮೆ ಸೌಮ್ಯ ಭಾಷೆಯಲ್ಲಿ ಎಚ್ಚರಿಕೆ ನೀಡುತ್ತಿದ್ದೇನೆ. ನನ್ನ ಚಾರಿತ್ರ್ಯ ವಧೆ ಮಾಡಲು ಪ್ರಯತ್ನಿಸುವವರು ತಮ್ಮ ಹಿನ್ನೆಲೆ ಹೇಗಿದೆ ಎಂಬುದನ್ನು ನೂರು ಸಲ ನೋಡಿಕೊಳ್ಳಬೇಕು. ನನ್ನ ಸುದ್ದಿಗೆ ಬರಬೇಡಿ. ನಾನಿಲ್ಲಿ ಗಟ್ಟಿಯಾಗಿ ಕುಳಿತುಕೊಳ್ಳಲು ಬಂದಿಲ್ಲ. ನಾನು ಆಡುವ ಮಾತು ಮತ್ತು ಕೊಡುವ ತೀರ್ಪು ಇತಿಹಾಸದಲ್ಲಿ ಉಳಿದುಕೊಳ್ಳಬೇಕು ಎಂದು ಬಯಸುತ್ತೇನೆ ಎಂದು ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ತಿಳಿಸಿದರು.
ಚರ್ಚೆ, ಉತ್ತರ ಮತ್ತು ಮತದಾನ ನನ್ನ ಕರ್ತವ್ಯ. ಅಡ್ವೊಕೇಟ್ ಜನರಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಅವರು ಕಾನೂನಾತ್ಮಕವಾಗಿ ತಮ್ಮ ಸಲಹೆಗಳನ್ನು ನೀಡಿದ್ದಾರೆ. ಕ್ರಿಯಾಲೋಪದ ಮೇಲಿನ ರೂಲಿಂಗ್ ಅನ್ನು ತಡೆ ಹಿಡಿದಿದ್ದೇನೆ ಎಂದು ತಿಳಿಸಿದ ಸ್ಪೀಕರ್, ಮತದಾನ ವಿಳಂಬ ಮಾಡುತ್ತಿದ್ದೇನೆ ಎಂದು ಹೇಳುವವರ ಮೇಲೆ ನನಗೆ ಅನುಕಂಪ ಇದೆ. ಅಜೆಂಡಾವನ್ನು ಎಲ್ಲಾ ಸದಸ್ಯರಿಗೆ ಕಳುಹಿಸಿಕೊಟ್ಟಿದ್ದೇನೆ. ಎಲ್ಲಾರು ಚೆನ್ನಾಗಿ ಓದಿಕೊಳ್ಳಿ ಎಂದರು.