ಕನಕಪುರ: ಮಾಜಿ ಸಚಿವ, ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಕರೆಯಲ್ಪಡುತ್ತಿರುವ ಡಿ.ಕೆ.ಶಿವಕುಮಾರ್ ಅವರ ಬಂಧನಕ್ಕೆ ಬೆಂಬಲಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನಾಕಾರರು ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. 


COMMERCIAL BREAK
SCROLL TO CONTINUE READING

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಯಲ್ಲಿ ಬಂಧಿಸಿರುವ ಜಾರಿ ನಿರ್ದೇಶನಾಲಯದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಡಿಕೆಶಿ ಬೆಂಬಲಿಗರು ಅವರ ಸ್ವಕ್ಷೇತ್ರ ಕನಕಪುರದಲ್ಲಿ ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸಿದ್ದಾರೆ.


ಸರ್ಕಾರಿ ಬಸ್ ಮೇಲೆ ಕಲ್ಲು ತೂರಾಟ
ಕನಕಪುರ-ರಾಮನಗರ ಹೆದ್ದಾರಿ, ತಮಿಳುನಾಡು-ಹೊಗೇನಕಲ್ ರಸ್ತೆಯಲ್ಲಿ ಟೈರ್ ಸುಟ್ಟು ತೀವ್ರ ಪ್ರತಿಭಟನೆ ನಡೆಸಿರುವ ಕಾರ್ಯಕರ್ತರು, ಕನಕಪುರದಲ್ಲಿ 2 ಸರ್ಕಾರಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಕೆಲಕಾಲ ಟ್ರಾಫಿಕ್ ಜಾಮ್ ಆದ ಘಟನೆ ನಡೆದಿದೆ. ರೊಚ್ಚಿಗೆದ್ದ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಎಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.


ಸಂಚಾರ ಸೇವೆ ಸ್ಥಗಿತ
ಕನಕಪುರದಲ್ಲಿ ಪ್ರತಿಭಟನಾಕಾರರು ವಾಹನ ಮತ್ತು ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಧ್ವಂಸಗೊಳಿಸಿದ ಬೆನ್ನಲ್ಲೇ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದೆ. "ನಾವು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಿದ್ದು, ಸ್ಥಳೀಯ ಪರಿಸ್ಥಿತಿಯನ್ನು ಆಧರಿಸಿ ರಸ್ತೆ ಸಂಚಾರ ಸೇವೆಗಳ ಅಮಾನತಿಗೆ ಕ್ರಮ ಕೈಗೊಳ್ಳುವಂತೆ ವಿಭಾಗೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.  ಅಲ್ಲದೆ, ನಿಯಂತ್ರಣ ಕೊಠಡಿ ಸಕ್ರಿಯಗೊಳಿಸುವಂತೆ ವಿಭಾಗೀಯ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ" ಎಂದು ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿದಿದ್ದಾರೆ.


ನಾಳೆ ಕನಕಪುರ, ರಾಮನಗರ ಬಂದ್
ತಮ್ಮ ನೆಚ್ಚಿನ ನಾಯಕ ಡಿ.ಕೆ.ಶಿವಕುಮಾರ್ ಬಂಧನವನ್ನು ಖಂಡಿಸಿ ಬುಧವಾರ(ನಾಳೆ) ಕನಕಪುರ ಮತ್ತು ರಾಮನಗರದಾದ್ಯಂತ ತೀವ್ರ ಪ್ರತಿಭಟನೆ ನಡೆಸಲು ಪಕ್ಷದ ಕಾರ್ಯಕರ್ತರು ನಿರ್ಧರಿಸಿದ್ದು, ಬಂದ್ ಗೆ ಕರೆ ನೀಡಿದ್ದಾರೆ.