ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು, ಓರ್ವ ಸಾವು
ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದಿದೆ.
ಬೆಂಗಳೂರು: ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಓರ್ವ ಕಾರ್ಮಿಕ ಮೃತಪಟ್ಟಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ. ಮೃತನನ್ನು ಬಿಹಾರ ಮೂಲದ ಸಾಂಬು ಕುಮಾರ್ ಎಂದು ಗುರುತಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.
ಬುಧವಾರ ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದ್ದು, ಮೂರು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಹಾಗೂ ಅದರ ಪಕ್ಕದ ಬೇಸ್ಮೆಂಟ್ ಕುಸಿದಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ, ಎನ್‌ಡಿಆರ್‌ಎಫ್, ರಾಜ್ಯ ವಿಪತ್ತು ಪರಿಹಾರ ಪಡೆ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈವರೆಗೆ ಕನಿಷ್ಠ ಎಂಟು ಜನರನ್ನು ಅವಶೇಷಗಳ ಅಡಿಯಿಂದ ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.
ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದ ಇತರರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಕಟ್ಟಡ ಕುಸಿದು ಗಾಯಗೊಂಡವರನ್ನು ಸಮೀಪದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ನಿರ್ಮಾಣ ಹಂತದ ಕಟ್ಟಡ ಇರುವೆಡೆ ನೀರಿನಂಶ ಹೆಚ್ಚಾಗಿದೆ. ಮುಂಜಾಗ್ರತ ಕ್ರಮ ವಹಿಸದಿರುವುದೇ ಈ ದುರಂತಕ್ಕೆ ಕಾರಣ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಿಬಿಎಂಪಿ ಜಂಟಿ ಆಯುಕ್ತ ರವೀಂದ್ರ ತಿಳಿಸಿದ್ದಾರೆ.