ನವದೆಹಲಿ: ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದುಗೊಳಿಸುವಂತೆ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಮತ್ತು ತಾಯಿ ಗೌರಮ್ಮ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮತ್ತೊಮ್ಮೆ ಮುಂದೂಡಿದೆ. ಇದರಿಂದಾಗಿ ಉಷಾ ಮತ್ತು ಗೌರಮ್ಮ ಅವರಿಗೆ ವಿಚಾರಣೆಗೆ ಹಾಜರಾಗುವ ದೃಷ್ಟಿಯಿಂದ ಇನ್ನಷ್ಟು ಕಾಲವಕಾಶ ಸಿಕ್ಕಂತಾಗಿದೆ.


COMMERCIAL BREAK
SCROLL TO CONTINUE READING

ಗುರುವಾರ ಉಷಾ ಮತ್ತು ಗೌರಮ್ಮ ಅವರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠದ ಮುಂದೆ ಇಡಿ ವಕೀಲರು ಅಕ್ಟೋಬರ್ 31ರೊಳಗೆ ವಿಚಾರಣೆಗೆ ಹಾಜರಾಗುವಂತೆ ಉಷಾ ಮತ್ತು ಗೌರಮ್ಮ ಅವರಿಗೆ ಸಮನ್ಸ್ ನೀಡಲಾಗಿದೆ ಎಂದರು. ಉಷಾ ಮತ್ತು ಗೌರಮ್ಮ ಪರ ವಕೀಲರು ಸಮನ್ಸ್ ತಮ್ಮ ಕಕ್ಷಿದಾರರಿಗೆ ತಲುಪಿಲ್ಲ ಎಂದು ವಾದ ಮಾಡಿದರು. ಬಳಿಕ ವಿಚಾರಣೆಯನ್ನು ಅ. 31ಕ್ಕೆ ಮುಂದೂಡಲಾಯಿತು. 


ಬಳಿಕ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಅ. 31 ಕ್ಕೆ ವಿಚಾರಣೆ ಮುಂದೂಡಲಾಗಿದೆ. ಅಂದು ನಮ್ಮ ಪರವಾಗಿ ತೀರ್ಪು ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.