ಕರೇಗುಡ್ಡ ಗ್ರಾಮದಲ್ಲಿ ಜನಾಕರ್ಷಣೆಯ ಕೇಂದ್ರವಾದ ವಾರ್ತಾ ಇಲಾಖೆ ಮಳಿಗೆ!
ಸರ್ಕಾರದ ಕಳೆದ ಒಂದು ವರ್ಷದ ಮಾಹಿತಿಯನ್ನು ನಿಖರ ಅಂಕಿ ಅಂಶಗಳೊಂದಿಗೆ ಆಕರ್ಷಕ ಫಲಕಗಳನ್ನು ನಿರ್ಮಿಸಿ ಕಲಾತ್ಮಕವಾಗಿ ಅನಾವರಣಗೊಳಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರದರ್ಶನ ಮಳಿಗೆ ಕಾರ್ಯಕ್ರಮದ ಆವರಣದ ಆಕರ್ಷಕ ಕೇಂದ್ರವಾಗಿ ಮಾರ್ಪಟ್ಟಿತ್ತು.
ಕರೇಗುಡ್ಡ : ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಬುಧವಾರ ನಡೆದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜನತಾದರ್ಶನ ಹಾಗೂ ಗ್ರಾಮವಾಸ್ತವ್ಯದ ಹಿನ್ನೆಲೆಯಲ್ಲಿ ಗ್ರಾಮದ ಹೊರವಲಯದಲ್ಲಿ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಒದಗಿಸುವ ಮತ್ತು ಸಾಧನೆ ಬಿಂಬಿಸುವ ಹಾಗೂ ಅರಿವು ಮೂಡಿಸುವ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಜನರು ಮಳಿಗೆಗಳ ಹತ್ತಿರ ತೆರಳಿ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದವು.
ಸರ್ಕಾರದ ಕಳೆದ ಒಂದು ವರ್ಷದ ಮಾಹಿತಿಯನ್ನು ನಿಖರ ಅಂಕಿ ಅಂಶಗಳೊಂದಿಗೆ ಆಕರ್ಷಕ ಫಲಕಗಳನ್ನು ನಿರ್ಮಿಸಿ ಕಲಾತ್ಮಕವಾಗಿ ಅನಾವರಣಗೊಳಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರದರ್ಶನ ಮಳಿಗೆ ಕಾರ್ಯಕ್ರಮದ ಆವರಣದ ಆಕರ್ಷಕ ಕೇಂದ್ರವಾಗಿ ಮಾರ್ಪಟ್ಟಿತ್ತು.
ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಳಿಗೆಗೆ ಆಗಮಿಸಿ ವೀಕ್ಷಿಸಿದರು. ಇನ್ನೂ ಕೆಲವರು ವೀಕ್ಷಿಸುವುದರ ಜತೆಗೆ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದ ದೃಶ್ಯಗಳು ಕಂಡುಬಂದವು.
ರೈತರ ಸಾಲ ಮನ್ನಾ, ಬಡವರ ಬಂಧು, ಕಾಯಕ, ಎಲ್ಲರಿಗೂ ಶಿಕ್ಷಣ, ತಳಸಮುದಾಯಗಳ ಅಭಿವೃದ್ಧಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮೂಲಕ ಕೈಗೊಂಡಿರುವ ಚಟುವಟಿಕೆಗಳನ್ನು ಸಚಿತ್ರವಾಗಿ, ನಿಖರ ಮಾಹಿತಿಯೊಂದಿಗೆ ಅಳವಡಿಸಿ ಜನರಿಗೆ ಪರಿಚಯಿಸುತ್ತಿರುವ ಕಾರ್ಯಕ್ಕೆ ಜನರು
ಮೆಚ್ಚುಗೆ ವ್ಯಕ್ತಪಡಿಸಿದರು.
ಪಶುಸಂಗೋಪನೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಕೃಷಿ ಇಲಾಖೆ, ಕೈಗಾರಿಕೆ ಇಲಾಖೆ,ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳು ಗಮನಸೆಳೆದವು.
ಮಳಿಗೆಗಳಲ್ಲಿ ಇಲಾಖೆಗೆ ಸಂಬಂಧಿಸಿದ ಹಾಗೂ ಅಲ್ಲಿನ ಯೋಜನೆಗಳ ಮಾಹಿತಿಗಳನ್ನು ಫಲಕಗಳ ಮೂಲಕ ಪ್ರದರ್ಶನಕ್ಕಿಟ್ಟಿದ್ದರು. ಆಗಮಿಸಿದ ಜನರಿಗೆ ಇಲಾಖೆಯ ಮಾಹಿತಿ ಒಳಗೊಂಡ ಕರಪತ್ರಗಳನ್ನು ವಿತರಿಸಿದರು.