ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಕ್ಯಾತೆ ತೆಗೆದಿರುವ ತಮಿಳುನಾಡಿನ ನಡೆಯನ್ನು ವಿರೋಧಿಸಿ ಕನ್ನಡ ಜಾಗೃತಿ ವೇದಿಕೆ ವರಿಯಿಂದ ಜನವರಿ 12ರಂದು ಅತ್ತಿಬೆಲೆ ಬಂದ್ ಗೆ ಕರೆ ನೀಡಲಾಗಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕನ್ನಡ ಒಕ್ಕೂಟಗಳ ಅಧ್ಯಕ್ಷ ವಾಟಾಳ್ ನಾಗರಾಜ್, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ ಸಹ, ತಮಿಳುನಾಡು ಯೋಜನೆಯನ್ನು ವಿರೋಧಿಸಿ ಕ್ಯಾತೆ ತೆಗೆದಿದೆ. ಹೀಗಾಗಿ ತಮಿಳುನಾಡಿನ ನಡೆಯನ್ನು ವಿರೋಧಿಸಿ, ಕರ್ನಾಟಕ ಸರ್ಕಾರ ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ಜನವರಿ 12ರಂದು ಬೆಳಿಗ್ಗೆ 11.30ಕ್ಕೆ ಅತ್ತಿಬೆಲೆ ಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.


ಮುಂದುವರೆದು ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಮೇಕೆದಾಟು ಯೋಜನೆ ಆರಂಭದಲ್ಲಿ ಯಾರೂ ಕೂಡ ವಿರೋಧಿಸಿರಲಿಲ್ಲ. ಆದರೀಗ ತಮಿಳುನಾಡು ಯೋಜನೆ ಜಾರಿಗೆ ವಿರೋಧಿಸಿ ಕರ್ನಾಟಕ ಗಡಿ ಬಂದ್ ಮಾಡಿದೆ. ಇದರಲ್ಲಿ ಯಾವುದೇ ಅರ್ಥವಿಲ್ಲ. ಅಷ್ಟಕ್ಕೂ ಯೋಜನೆ ಜಾರಿಗೆ ಕರ್ನಾಟಕಕ್ಕೆ ಯಾವುದೇ ತಡೆಯಾಜ್ಞೆ ನೀಡಿಲ್ಲ. ಆದಾಗ್ಯೂ ಕರ್ನಾಟಕ ಸರ್ಕಾರ ವಿಳಂಬ ಮಾಡುತ್ತಿದೆ. ಹಾಗಾಗಿ ಈ ಯೋಜನೆ ಬಗ್ಗೆ ಕರ್ನಾಟಕ ಸರ್ಕಾರ ಕೂಡಲೇ ನಿರ್ಧರಿಸಿ, ನೀಲಿನಕ್ಷೆ ತಯಾರಿಸಿ ಬಿಡುಗಡೆ ಮಾಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.