ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳು, ಮಂತ್ರಿಗಳು, ಅಧಿಕಾರಿಗಳು ಆರಾಮಾಗಿರಬೇಕು. ಆದರೆ ಎಸ್.ಎಸ್.ಎಲ್.ಸಿ (SSLC) ಮಕ್ಕಳು ಮಾತ್ರ ಬಾವಿಗೆ ಬೀಳಬೇಕೇ? ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ (Vatal Nagaraj) ಅವರು ಗುರುವಾರದಿಂದ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ತಕ್ಷಣ ರದ್ದುಗೊಳಿಸಲು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ನಾಡಿನ 8 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಪರೀಕ್ಷೆ ಬರೆಯಲು ಬೀದಿಗಿಳಿಸುವುದು ದೊಡ್ಡ ಗಂಡಾತರಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ.


ಆ ಮಕ್ಕಳನ್ನು ಬೀದಿಗಿಳಿಸುತ್ತಿರುವ ಸರ್ಕಾರ ತಾನು ಮಾತ್ರ ಸುರಕ್ಷಿತವಾಗಿರಲು ಬಯಸುತ್ತಿರುವುದೇಕೆ? ತಕ್ಷಣ ವಿಧಾನಮಂಡಲದ ಅಧಿವೇಶನ ಕರೆದು ಉಭಯ ಸದನಗಳ ಎಲ್ಲಾ ಶಾಸಕರು ಪಾಲ್ಗೊಳ್ಳುವಂತೆ ಮಾಡಲಿ ನೋಡೋಣ ಎಂದು ವಾಟಾಳ್ ನಾಗರಾಜ್ ಸರ್ಕಾರಕ್ಕೆ ಸವಾಲೆಸೆದರು.


ಕೊರೋನಾ ಸೋಂಕಿನಿಂದ ರಾಜಧಾನಿ ಬೆಂಗಳೂರು ತಲ್ಲಣಿಸಿದೆ. ಲಾಕ್ ಡೌನ್, ಸೀಲ್ ಡೌನ್ ಗಳ ಹೊಡೆತಕ್ಕೆ ಮುದುರಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಪರೀಕ್ಷೆ ಬರೆಯಬೇಕು ಎನ್ನುವುದು ಅಮಾನವೀಯ. ಹೀಗಾಗಿ ಈ ವರ್ಷ ಪರೀಕ್ಷೆ ರದ್ದು ಮಾಡಿ, ಮಕ್ಕಳನ್ನು ತೇರ್ಗಡೆ ಮಾಡಿ ಎಂದು ಸರ್ಕಾರವನ್ನು ಆಗ್ರಹಿಸಿದರು.


ರಾಜ್ಯದ ಯಾವ ಜಿಲ್ಲೆ ಆತಂಕದಿಂದ ಮುಕ್ತವಾಗಿದೆ?ಎಂದು ಪ್ರಶ್ನಿಸಿದ ವಾಟಾಳ್ ನಾಗರಾಜ್, ಯಾವ ಕಾರಣಕ್ಕೂ ಪರೀಕ್ಷೆ ಬೇಡ. ಹಾಗೊಂದು ವೇಳೆ ಪರೀಕ್ಷೆ ನಡೆಸಿ ಹೆಚ್ಚು ಕಡಿಮೆಯಾದರೆ ಅದರ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದು ಎಂದು ಎಚ್ಚರಿಸಿದರು.