ತುಮಕೂರು: ಹೇಮಾವತಿ ಕಾಲುವೆಗಳ ಆಧುನೀಕರಣ ಹಾಗೂ ವಿಸ್ತರಣೆಯನ್ನು ನಮ್ಮ ಸರ್ಕಾರ ಶೀಘ್ರದಲ್ಲಿಯೇ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.


COMMERCIAL BREAK
SCROLL TO CONTINUE READING

ಅವರು ಬಿಜೆಪಿ ವತಿಯಿಂದ ಏರ್ಪಡಿಸಿರುವ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.


ಬರುವ ದಿನಗಳಲ್ಲಿ ಕುಣಿಗಲ್ ತಾಲ್ಲೂಕಿನ ರೈತರಿಗೆ ಅನ್ನ ನೀಡುವ ಎರಡು ನೀರಾವರಿ ಯೋಜನೆಗಳನ್ನು ನಮ್ಮ ಸರ್ಕಾರ ಪೂರ್ಣ ಮಾಡುತ್ತದೆ. ನೀರಾವರಿ ಸೌಲಭ್ಯವನ್ನು ಇದೇ ಕ್ಷೇತ್ರದ ರಾಮಯ್ಯ ಅವರು  ದೊಡ್ಡ ಪಾದಯಾತ್ರೆ ಮಾಡಿ ಹೇಮಾವತಿ ನೀರಿಗೆ ತುಮಕೂರಿಗೂ ಹಕ್ಕಿದೆ ಎಂದು ಹೋರಾಟ ಮಾಡಿದರು. ಈ ಭಾಗದ ಜನರಿಗೆ ಹೋರಾಟದ ಪ್ರತಿಫಲವಾಗಿ ರಾಮಕೃಷ್ಣ ಹೆಗಡೆ ಅವರು ನೀರು ಒದಗಿಸಿದರು. ಹೋರಾಟದಿಂದ ಲಭಿಸಿದ ಯೋಜನೆಗೆ ಕಾಯಕಲ್ಪ ನೀಡಬೇಕು. ನೀರಿನ ನಿರ್ವಹಣೆ ಮಾಡಿದರೆ ಕೊನೆ ಭಾಗಕ್ಕೂ ನೀರು ತಲುಪಿಸಬಹುದು. ನಮ್ಮ ಸರ್ಕಾರ ಎಲ್ಲಾ ಭಾಗಗಳಿಗೂ ನೀರು ಒದಗಿಸದೆ. ಕುಣಿಗಲ್  ಭಾಗದಲ್ಲಿ ನೀರನ್ನು ಕಾಲುವೆ ಮೂಲಕ ನೀಡಬೇಕಿದೆ.  ಹೇಮಾವತಿ ಕಾಲುವೆಗಳ ಆಧುನೀಕರಣ ಹಾಗೂ ವಿಸ್ತರಣೆಯನ್ನು ಮಾಡಬೇಕಿದೆ. ಮಾರ್ಕಾಂಡಳ್ಳಿ ಅಣೆಕಟ್ಟಿನಿಂದ ಮಂಗಳ ಜಲಾಶಯಕ್ಕೆ ನೀರು ಒದಗಿಸಲು ಬಹಳ ದಿನಗಳ ಬೇಡಿಕೆ ಇದೆ. ಅದಕ್ಕೆ ಫೀಡರ್ ಚಾನಲ್ ನಿರ್ಮಿಸಲು ಮಾಧುಸ್ವಾಮಿಯವರು ಮಂಜೂರಾತಿ ಮಾಡಿಸಿದ್ದಾರೆ. ಇಲ್ಲಿ ಯಾರಿಗೂ  ಅಡಿಗಲ್ಲು ಹಾಕಲು ಬಿಡುವುದಿಲ್ಲ ಎನ್ನುತ್ತಾರೆ. ಇದು ಪ್ರಜಾಪ್ರಭುತ್ವ. ಸ್ವಂತ ಆಸ್ತಿಯಲ್ಲ. ಕಾಲುವೆಗೆ ಅಡಿಗಲ್ಲು ಹಾಕಲು ನಾನೇ ಬರುತ್ತೇನೆ ಎಂದರು.


ಇದನ್ನೂ ಓದಿ : Kannada flag burnt Case: ಪೊಲೀಸರ ಮೇಲಿನ ಸೇಡು-ಮಿಡೀಯಾ ಕವರೇಜ್ ಗಾಗಿ ಕನ್ನಡ ಬಾವುಟ ಸುಟ್ಟಿದ್ದ ಟೆಕ್ಕಿ..!


ತುಮಕೂರಿನಲ್ಲಿ 1000 ಎಕರೆಯ ಕೈಗಾರಿಕಾ ಟೌನ್ :


ಕುಣಿಗಲ್ ಸ್ಟಡ್ ಫಾರ್ಮ್ ಬಗ್ಗೆ ಈ ಭಾಗದ ಜನನಾಯಕರೊಂದಿಗೆ ಚರ್ಚಿಸಿ, ಕುಣಿಗಲ್ ನಲ್ಲಿ ದೊಡ್ಡ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ಅದರಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದಂತಹ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು. ಕೃಷಿ, ತೋಟಗಾರಿಕೆ, ತೆಂಗು , ಅಡಿಕೆಗೆ ಬೆಳೆಗೆ ಖ್ಯಾತಿ ಹೊಂದಿರುವ ತುಮಕೂರು ಔದ್ಯೋಗೀಕರಣದಲ್ಲೂ ಮುಂದಿದೆ. ತುಮಕೂರಿನಲ್ಲಿ 1000 ಎಕರೆಯ ಕೈಗಾರಿಕಾ ಟೌನ್ ಸ್ಥಾಪಿಸಲಾಗುತ್ತಿದೆ.ಈ ಭಾಗವನ್ನು ವಿಶೇಷ ಹೂಡಿಕಾ ಪ್ರದೇಶ ಯೋಜನೆ ಮಾಡಿ, ಈ ಭಾಗದಲ್ಲಿ ಬರುವ  ಕೈಗಾರಿಕೆಗಳಿಗೆ ಎಲ್ಲ ಅನುಮೋದನೆಗಳನ್ನು ನೀಡಲಾಗುವುದು, ಇದರಿಂದ ಉದ್ಯೋಗಳಿಗೂ ಅನುಕೂಲ ಕಲ್ಪಿಸಿದಂತಾಗುತ್ತದೆ.ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ನಂ.1 ಜಿಲ್ಲೆಯಾಗಲಿದೆ. ಕೆಲವೇ ವರ್ಷಗಳಲ್ಲಿ ತುಮಕೂರು ವಾಣಿಜ್ಯವಾಗಿ ಬೆಳೆಯಲಿದೆ.  ಕುಣಿಗಲ್ ನಲ್ಲಿ ಯಾವುದೇ ಪೈಪೋಟಿ ಇಲ್ಲ. ಈ ಭಾಗದ ಅಭಿವೃದ್ಧಿಗೆ ಇಲ್ಲಿನ ಜನನಾಯಕರ  ಕೊಡುಗೆಯನ್ನು ಪರಿಗಣಿಸಲಾಗುವುದು. ತುಮಕೂರು ಜಿಲ್ಲೆಯಲ್ಲಿ ಭಾಜಪ ಕಮಲವನ್ನು ಅರಳಿಸಬೇಕೆಂದು ಜನರಿಗೆ  ಕರೆ ನೀಡಿದರು.


ದುಡಿಯುವ ವರ್ಗದ ಸಶಕ್ತೀಕರಣ :


ಸ್ವಾಮಿ ವಿವೇಕಾನಂದ ಯುವಶಕ್ತಿಯೋಜನೆಯ ಮೂಲಕ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡಲಾಗುತ್ತಿದೆ. ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ ಮೂಲಕ ನಾಡು ಕಟ್ಟಬಹುದು. ದುಡಿಮೆಯೇ ದೊಡ್ಡಪ್ಪ ಎಂಬ ನಂಬಿಕೆಯೊಂದಿಗೆ ದುಡಿಯುವ ವರ್ಗವನ್ನು ಸಶಕ್ತಗೊಳಿಸಲಾಗುತ್ತಿದೆ. ಪ್ರಧಾನ ಮಂತ್ರಿಯವರು  ಕಿಸಾನ್ ಸಮ್ಮಾನ್ ಯೋಜನೆಯಡಿ, 20 ಸಾವಿರ ಕೋಟಿ ಅನುದಾನವನ್ನು ಜನರಿಗೆ ತಲುಪಿಸಿದ್ಧಾರೆ. ಜಲಜೀವನ್ ಮಿಷನ್ ಅಡಿ 10 ಕೋಟಿಗೂ ಹೆಚ್ಚು ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಿದ ಧೀಮಂತ ನಾಯಕರಾಗಿದ್ದಾರೆ. ಕರ್ನಾಟಕದಲ್ಲಿ ಕಳೆದ ವರ್ಷ 25 ಲಕ್ಷ ಮನೆಗಳಿಗೆ ನೀರು ಒದಗಿಸಿದ್ದು, ಈ ವರ್ಷ 30 ಲಕ್ಷ ಮನೆಗಳಿಗೆ ನಳಸಂಪರ್ಕ ಕೊಡುವ ಗುರಿ ಹೊಂದಲಾಗಿದೆ ಎಂದರು.


8 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ:


ಈ ವರ್ಷ ರಾಜ್ಯದಲ್ಲಿ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಕರ್ನಾಟಕದ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ ಇಂತಹ ಸಾಧನೆ ಆಗಿರಲಿಲ್ಲ. ಭಾಜಪ ಸರ್ಕಾರ ಈ ಕೆಲಸವನ್ನು ಮಾಡುತ್ತಿದೆ. 100 ಅಂಬೇಡ್ಕರ್ ಹಾಸ್ಟೆಲ್, 50 ಕನಕದಾಸ ಹಾಸ್ಟೆಲ್, 5 ಮೆಗಾ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಎಸ್ ಸಿ ಎಸ್ ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಲಾಗಿದೆ. ಈ ಸಮುದಾಯಗಳು ಸ್ವಾಭಿಮಾನದ ಬದುಕು ನಡೆಸಲು ಸರ್ಕಾರದ ಈ ನಿರ್ಧಾರ ವರದಾನವಾಗಿದೆ. 40 ವರ್ಷದ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ.  ಭಾಜಪ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇದೆ ಎಂದರು.


ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಜೆ.ಸಿ. ಮಾಧುಸ್ವಾಮಿ, ಕೆ‌. ಗೋಪಾಲಯ್ಯ, ಬಿ.ಸಿ‌. ನಾಗೇಶ್, ಶಾಸಕರಾದ ಜ್ಯೋತಿ ಗಣೇಶ್ , ಡಾ. ರಾಜೇಶ್ ಗೌಡ, ಮಸಾಲೆ ಜಯರಾಮ್,  ವಿಧಾನ ಪರಿಷತ್ ಸದಸ್ಯರಾದ    ಸಿ.ಪಿ. ಯೋಗೇಶ್ವರ್, ರವಿಕುಮಾರ್, ವೈ.ಎ. ನಾರಾಯಣಸ್ವಾಮಿ,  ಕೆ.ಎಸ್. ನವೀನ್, ವಿಧಾನ ಪರಿಷತ್  ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ, ಪಿಎಲ್ ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಕಷ್ಣಕುಮಾರ್, ಮಾಜಿ ಸಂಸದ ಮುದ್ದ ಹನುಮೇಗೌಡ ಹಾಜರಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.